ಕೆ.ಎನ್.ಪಿ.ವಾರ್ತೆ,ಶ್ರೀನಗರ,ಆ.05;

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರ ಕಳೆದೊಂದು ವಾರದಿಂದ ತೀವ್ರ ಪ್ರಕ್ಷುಬ್ಧತೆ ಎದುರಿಸುತ್ತಿದ್ದು, ಕಾಶ್ಮೀರದಲ್ಲಿನ ಎಲ್ಲ ರಾಜಕೀಯ ಮುಖಂಡರನ್ನು ಗೃಹಬಂಧನದಲ್ಲಿರಿಸಿರುವ ಸೇನೆ ಮೊಬೈಲ್, ಇಂಟರ್ನೆಟ್, ಟಿವಿ, ದೂರವಾಣಿ ಸೇವೆಯನ್ನೂ ಕೂಡ ಬಂದ್ ಮಾಡಿದೆ. ಹೀಗಾಗಿ ಸ್ಥಳೀಯರಷ್ಟೇ ಅಲ್ಲ… ಇಡೀ ದೇಶದ ಜನತೆಯಲ್ಲಿ ಕಾಶ್ಮೀರದಲ್ಲಿ ಏನಾಗ್ತಿದೆ ಎಂಬ ಪ್ರಶ್ನೆ ಉದ್ಭವಿಸಿದ್ದು, ಇದಕ್ಕೆ ಹತ್ತಾರು ಊಹಾಪೋಹಗಳೂ ಕೂಡ ಹರಿದಾಡುತ್ತಿವೆ.

ಕಳೆದೊಂದು ವಾರದಿಂದ ಭಾರತದ ಮುಕುಟ ಎಂದು ಕರೆಸಿಕೊಳ್ಳುವ ಜಮ್ಮು ಮತ್ತು ಕಾಶ್ಮೀರ ಯಥಾಸ್ಥಿತಿಯನ್ನು ಕಳೆದುಕೊಂಡಿದೆ ಮತ್ತು ಮತ್ತೆ ಪ್ರಕ್ಷುಬ್ಧತೆಯತ್ತ ಮುಖಮಾಡುವ ಸಾಧ್ಯತೆಗಳಿವೆ. ಅಮರನಾಥ ಯಾತ್ರಿಕರ ರಕ್ಷಣೆ ನೆಪ ಮುಂದಿಟ್ಟು ಕೇಂದ್ರ ಸರಕಾರ ಸೇನಾ ಜಮಾವಣೆಯನ್ನು ಕಳೆದ ವಾರ ಆರಂಭಿಸಿತ್ತು. ಜತೆಗೆ, ಜಮ್ಮು ಮತ್ತು ಕಾಶ್ಮೀರ ರಾಜ್ಯದ ಆಡಳಿತ ಹೊಣೆ ಹೊತ್ತಿರುವ ರಾಜ್ಯಪಾಲ ಸತ್ಯ ಪಾಲ್ ಮಲ್ಲಿಕ್, “ಪಾಕಿಸ್ತಾನದ ಗಡಿಯಿಂದ 15ಕ್ಕೂ ಹೆಚ್ಚು ಫಿದಾಯಿನ್‌ಗಳು ಕಾಶ್ಮೀರಕ್ಕೆ ಬಂದಿದ್ದಾರೆ. ಅವರು ಯಾವುದೇ ಕ್ಷಣದಲ್ಲಿ ದಾಳಿಗಳನ್ನು ನಡೆಸುವ ಸಾಧ್ಯತೆ ಇದೆ. ಈ ಕಾರಣಕ್ಕೆ ಭದ್ರತೆಯನ್ನು ಹೆಚ್ಚಿಸಲಾಗಿದೆ,” ಎಂದಿದ್ದರು. ಮೇಲ್ನೋಟಕ್ಕೆ ಇದು ಕಣಿವೆ ರಾಜ್ಯದ ಸುರಕ್ಷತೆ ವಿಚಾರವಾಗಿ ಕೇಂದ್ರ ತೆಗೆದುಕೊಳ್ಳುತ್ತಿರುವ ಕ್ರಮಗಳು ಅಂತ ಬಿಂಬಿಸುವ ಪ್ರಯತ್ನ ನಡೆದಿತ್ತು.

ಹೀಗೆ ಆರಂಭವಾದ ಕಾಶ್ಮೀರದ ಹೊಸ ಬಿಕ್ಕಟ್ಟೊಂದು ವಾರಾಂತ್ಯದಲ್ಲಿ ದೊಡ್ಡ ತಿರುವನ್ನೇ ತೆಗೆದುಕೊಂಡಿದೆ. ಜಮ್ಮು ಮತ್ತು ಕಾಶ್ಮೀರದ ರಾಜಕೀಯ ನಾಯಕರು, ಮಾಜಿ ಮುಖ್ಯಮಂತ್ರಿಗಳಾದ ಮೆಹಬೂಬ ಮುಫ್ತಿ ಹಾಗೂ ಓಮರ್‌ ಅಬ್ದುಲ್ಲಾರನ್ನು ರಾತ್ರೋ ರಾತ್ರೋ ಗೃಹ ಬಂಧನಕ್ಕೆ ಒಳಪಡಿಸಲಾಗಿದೆ.

ಕಳೆದ ಒಂದು ವಾರದ ಅಂತರದಲ್ಲಿ ಕೇಂದ್ರ ಸರ್ಕಾರ ಕಾಶ್ಮೀರಕ್ಕೆ ಸುಮಾರು 38 ಸಾವಿರ ಹೆಚ್ಚುವರಿ ಸೈನಿಕರನ್ನು ರವಾನೆ ಮಾಡಿದೆ. ಇದಕ್ಕಾಗಿ ಸಿ-17 ಹರ್ಕ್ಯುಲಸ್ ವಿಮಾನದ ಬಳಕೆ ಮಾಡಿ ಸೈನಿಕರನ್ನು ಕಾಶ್ಮೀರಕ್ಕೆ ರವಾನೆ ಮಾಡಿದೆ. ಈ ನಡುವೆ ಭಾನುವಾರ ತಡರಾತ್ರಿ ಕಣಿವೆ ರಾಜ್ಯದಲ್ಲಿ ರಾತ್ರೋ ರಾತ್ರಿ ರಾಜಧಾನಿ ಶ್ರಿನಗರ ಸೇರಿದಂತೆ ಹಲವು ಸೂಕ್ಷ್ಮ ಪ್ರದೇಶಗಳಲ್ಲಿ ನಿಷೇಧಾಜ್ಞೆ ಹೇರಲಾಗಿದೆ. ಮೊಬೈಲ್ ಇಂಟರ್ನೆಟ್ ಅನ್ನು ನಿಷೇಧಿಸಲಾಗಿದ್ದು, ಜಮ್ಮು ಮತ್ತು ಕಾಶ್ಮೀರದಾದ್ಯಂತ ಭಾನುವಾರ ರಾತ್ರಿಯಿಂದ ಮೊಬೈಲ್ ಇಂಟರ್ನೆಟ್ ಸೇವೆಯನ್ನು ರದ್ದುಗೊಳಿಸಲಾಗಿದೆ. ಯಾವುದೇ ವದಂತಿ ಹಬ್ಬದಂತೆ ತಡೆಯಲು ಸರ್ಕಾರ ಈ ಕ್ರಮ ಕೈಗೊಂಡಿದೆ. ಹಿರಿಯ ಅಧಿಕಾರಿಗಳಿಗೆ ಸ್ಯಾಟಲೈಟ್ ಫೋನ್‌ಗಳನ್ನು ನೀಡಲಾಗಿದೆ. ಜೊತೆಗೆ ಸಾರ್ವಜನಿಕ ಸಮಾರಂಭಗಳ ಮೇಲೆ ಸರ್ಕಾರ ನಿಷೇಧ ಹೇರಿ ಆದೇಶ ಹೊರಡಿಸಿದೆ. ಅಲ್ಲದೆ ಒಮರ್ ಅಬ್ದುಲ್ಲಾ, ಮುಫ್ತಿ ಮೆಹಬೂಬಾ ಸೇರಿದಂತೆ ಹಲವು ರಾಜಕೀಯ ನಾಯಕರನ್ನು ಗೃಹ ಬಂಧನಕ್ಕೆ ಒಳಪಡಿಸಲಾಗಿದೆ.

ಮಧ್ಯರಾತ್ರಿ ಸಭೆ ನಡೆಸಿದ ರಾಜ್ಯಪಾಲರು  :

ಆದಷ್ಟು ಬೇಗ ಯಾತ್ರಿಗಳು ಹಾಗೂ ಪ್ರವಾಸಿಗಳು ಕಣಿವೆ ಬಿಟ್ಟು ಮರಳಬೇಕು ಎಂದು ಜಮ್ಮು ಕಾಶ್ಮೀರ ಸರ್ಕಾರ ಹೇಳಿದೆ. ಜಮ್ಮು- ಕಾಶ್ಮೀರದಲ್ಲಿ ನಿಷೇಧಾಜ್ಞೆ ಜಾರಿಯಾದ ಬೆನ್ನಲ್ಲೇ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು ಭಾನುವಾರ ಮಧ್ಯರಾತ್ರಿ ಭದ್ರತಾ ಕಾರ್ಯದರ್ಶಿ, ಡಿಜಿಪಿ ಹಾಗೂ ಐಜಿಪಿಗಳ ಸಭೆ ಕರೆದು ಕಾನೂನು ಸುವ್ಯವಸ್ಥೆ ಕಾಪಾಡಲು ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದಾರೆ.

ಇಷ್ಟೆಲ್ಲಾ ಬೆಳವಣಿಗೆಗಳು ಕಣಿವೆ ರಾಜ್ಯದಲ್ಲಿ ಏನಾಗುತ್ತಿದೆ ಎಂಬ ಪ್ರಶ್ನೆ ಹುಟ್ಟುಹಾಕಿದ್ದು, ಇದಕ್ಕೆ ಹತ್ತಾರು ಊಹಾಪೋಹಗಳೂ ಕೂಡ ಹರಿದಾಡುತ್ತಿವೆ. ಕಣಿವೆ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿಯನ್ನು ಕೇಂದ್ರ ರದ್ದುಗೊಳಿಸಬಹುದು, ಸ್ಥಿರಾಸ್ತಿ ಖರೀದಿ ಹಕ್ಕನ್ನು ದೇಶದ ಉಳಿದ ಭಾಗದ ಜನರಿಗೂ ನೀಡಲು 35ಎ ಕೈಬಿಡಬಹುದು, ಈ ಬಾರಿ ಕಾಶ್ಮೀರದಲ್ಲೇ ಮೋದಿ ಧ್ವಜಾರೋಹಣ ಮಾಡಬಹುದು, ಉಗ್ರರ ವಿರುದ್ಧ ದೊಡ್ಡ ಪ್ರಮಾಣದಲ್ಲಿ ಆಪರೇಷನ್ ಆರಂಭವಾಗಬಹುದು ಎಂಬೆಲ್ಲಾ ವಾದಗಳು ಕೇಳಿಬರುತ್ತಿವೆ. ಒಟ್ಟಾರೆ ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ನಡೆ ಮಾತ್ರ ಇನ್ನೂ ನಿಗೂಢವಾಗಿಯೇ ಇದೆ.

ಎರಡು ಸೂಕ್ಷ್ಮ ವಿಚಾರಗಳು :

ಜಮ್ಮು ಮತ್ತು ಕಾಶ್ಮೀರದ ಎಲ್ಲಾ ರಾಜಕೀಯ ಪಕ್ಷಗಳು ರಾಜ್ಯಕ್ಕೆ ನೀಡಿರುವ ವಿಶೇಷ ಸ್ಥಾನಮಾನ ಹಾಗೂ ಆರ್ಟಿಕಲ್ 35ಎ ಅಡಿಯಲ್ಲಿ ನೀಡಿರುವ ಅವಕಾಶಗಳನ್ನು ಮೊಟಕುಗೊಳಿಸುವ ವಿಚಾರದಲ್ಲಿ ಎಚ್ಚರಿಕೆಯ ಸಂದೇಶಗಳನ್ನು ನೀಡುತ್ತಲೇ ಬಂದಿವೆ. ಅದರಲ್ಲೂ ಆರ್ಟಿಕಲ್ 35ಎ ಇಲ್ಲಿನ ಅಸೆಂಬ್ಲಿಗೆ ಜಮ್ಮು ಮತ್ತ ಕಾಶ್ಮೀರದ ನಾಗರಿಕ ಹಕ್ಕುಗಳ ರಕ್ಷಣೆಗೆ ವಿಶೇಷ ಅವಕಾಶ ನೀಡಿದೆ. ಇದನ್ನು ಮೊಟಕುಗೊಳಿಸುವುದು ಕಣಿವೆ ರಾಜ್ಯದಲ್ಲಿ ದೊಡ್ಡ ಮಟ್ಟದ ರಕ್ತಪಾತಕ್ಕೆ ಕಾರಣವಾಗಬಹುದು ಎಂಬುದು ಆತಂಕ.

ಸ್ಥಳೀಯ ಜನಪ್ರತಿನಿಧಿಗಳ ಸಭೆಗೆ ಇರುವ ಹಕ್ಕುಗಳನ್ನು ಕೇಂದ್ರ ಕಿತ್ತುಕೊಳ್ಳಲು ಬಿಡುವುದಿಲ್ಲ ಎಂಬುದು ಇಲ್ಲಿ ನಡೆದುಕೊಂಡು ಬಂದ ಹಲವು ಹೋರಾಟಗಳ ಆಗ್ರಹವಾಗಿದೆ. ಇದರ ಜತೆಗೆ ಆರ್ಟಿಕಲ್ 370 ಅಡಿಯಲ್ಲಿ ನೀಡುರುವ ವಿಶೇಷ ಸ್ಥಾನಮಾನದ ವಿಚಾರ ಕೂಡ ಇಲ್ಲಿ ಆಗಾಗ್ಗೆ ಚರ್ಚೆಯ ಕೇಂದ್ರವಾಗಿದೆ. ಇದೀಗ ಕೇಂದ್ರ ಸರಕಾರ ಸಂಪುಟ ಸಭೆಯಲ್ಲಿ ತೆಗೆದುಕೊಳ್ಳುವ ನಿರ್ಧಾರ ಈ ಎರಡು ಸಂಗತಿಗಳ ಸುತ್ತಲೇ ಗಿರಕಿಹೊಡೆಯುವ ಸಾಧ್ಯತೆ ಇದೆ.

http://karnatakanewsportal.com/endu-mahatvada-samputa-sabhe-kashmirbagge-nirdhara/

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.