ಕೆ.ಎನ್.ಪಿ.ವಾರ್ತೆ,ಗಂಗಾವತಿ,ಜೂ.10;

ಸರ್ಕಾರಿ ಶಾಲೆ ಉಳಿಸಿ, ಬೆಳೆಸಿ ಅಭಿಯಾನ ಹಾಗೂ 2019-20ನೇ ಸಾಲಿನ ಶಾಲಾ ದಾಖಲಾತಿ ಆಂದೋಲನದ ಪ್ರಯುಕ್ತ, ಸಮುದಾಯ ಶಿಕ್ಷಣ ಜಾಗೃತಿ ಜಾಥಾ ಹಾಗೂ ಪಾಲಕರಿಗೆ ಶಿಕ್ಷಣ ಜಾಗೃತಿ ಸಮಾವೇಶವನ್ನು ಜೂ.11 ರಂದು ಹಮ್ಮಿಕೊಳ್ಳಲಾಗಿದೆ. 

ಕರ್ನಾಟಕ ಸರ್ಕಾರ, ಜಿಲ್ಲಾ ಪಂಚಾಯತ್ ಕೊಪ್ಪಳ, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಗಂಗಾವತಿ ಹಾಗೂ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಗಂಗಾವತಿ ವತಿಯಿಂದ “ಸರ್ಕಾರಿ ಶಾಲೆ ಉಳಿಸಿ, ಬೆಳೆಸಿ ಅಭಿಯಾನ ಹಾಗೂ 2019-20ನೇ ಸಾಲಿನ ಶಾಲಾ ದಾಖಲಾತಿ ಆಂದೋಲನ” ದ ಪ್ರಯುಕ್ತ “ಸಮುದಾಯ ಶಿಕ್ಷಣ ಜಾಗೃತಿ ಜಾಥಾ ಹಾಗೂ ಪಾಲಕರಿಗೆ ಶಿಕ್ಷಣ ಜಾಗೃತಿ ಸಮಾವೇಶ” ವನ್ನು ಸರ್ಕಾರಿ ಶಾಲೆಯ ಹೆಮ್ಮೆಯ ಪ್ರತಿಭೆ, ಹಾಸ್ಯ ದಿಗ್ಗಜ ಗಂಗಾವತಿ ಪ್ರಾಣೇಶ್ ಹಾಗೂ ಹಾಸ್ಯ ಕಲಾವಿದ ನರಸಿಂಹ ಜೋಷಿ ಇವರುಗಳ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ.

ನಗರ ಹಾಗೂ ಗ್ರಾಮೀಣ ಸಮುದಾಯಗಳ ಆಶಾಕಿರಣದಂತಿರುವ ಸರ್ಕಾರಿ ಶಾಲೆಗಳಲ್ಲಿ ಉಚಿತವಾಗಿ ಪಠ್ಯಪುಸ್ತಕ, ಸಮವಸ್ತ್ರ, ಶೂ, ಮತ್ತು ಸಾಕ್ಸ್, ವಿದ್ಯಾರ್ಥಿವೇತನ, ಸೈಕಲ್ ವಿತರಣೆ, ಕ್ಷೀರಭಾಗ್ಯ, ಅಕ್ಷರದಾಸೋಹ ಸೇರಿದಂತೆ ಇನ್ನೂ ಅನೇಕ ಸೌಲಭ್ಯಗಳನ್ನು ಮಕ್ಕಳಿಗೆ ಪೂರೈಸಲಾಗುತ್ತಿದ್ದು, ಈ ನಿಟ್ಟಿನಲ್ಲಿ ಸರಕಾರಿ ಶಾಲೆಗಳಲ್ಲಿ ದಾಖಲಾತಿ/ಪ್ರವೇಶ ಪಡೆಯುವುದು ಒಂದು ಸೌಭಾಗ್ಯವೇ ಸರಿ.

ಸರ್ಕಾರಿ ಶಾಲೆಗಳಲ್ಲಿನ ಮಗುವಿನ ಸರ್ವತೋಮುಖ ಪ್ರಗತಿಯೆಡೆಗೆ ಶಿಕ್ಷಣವನ್ನು ರೂಪಿಸುವತ್ತ ನುರಿತ ಮತ್ತು ಪ್ರತಿಭಾವಂತ ಶಿಕ್ಷಕರಿಂದ ಬೋಧನೆಯಾಗುತ್ತಿದ್ದು, ಇಲ್ಲಿ ಕಲಿತ ಅನೇಕರು ವಿವಿಧ ಕ್ಷೇತ್ರಗಳಲ್ಲಿ ಮೇರು ಸಾಧನೆಯನ್ನು ಮಾಡಿರುವುದು ತಮ್ಮೆಲ್ಲರಿಗೂ ತಿಳಿದ ವಿಷಯ.

ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಅವುಗಳ ಪ್ರಗತಿಗೆ ಸಮುದಾಯದ ಸಹಭಾಗಿತ್ವ ಅತ್ಯಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಗಂಗಾವತಿಯ ಸರಕಾರಿ ಶಾಲೆಯ ಹೆಮ್ಮೆಯ ಪ್ರತಿಭೆ, ಹಾಸ್ಯ ದಿಗ್ಗಜ, ಗಂಗಾವತಿ ತಾಲೂಕ 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಬಿ.ಪ್ರಾಣೇಶ್ ರವರು ಅಭಿಯಾನದ ಉದ್ಘಾಟನೆಯನ್ನು ನೆರವೇರಿಸುವರು. ಈ ವೇಳೆ ಇನ್ನೋರ್ವ ಹಾಸ್ಯ ಕಲಾವಿದ ನರಸಿಂಹ ಜೋಶಿ ರವರು ಭಾಗವಹಿಸುವರು.

ಈ ಅಭಿಯಾನವು ಜಾಥಾದ ಮೂಲಕ ಸಾಗಲಿದ್ದು, ಗೌರವಾನ್ವಿತ ಎಲ್ಲಾ ಹಂತದ ಜನಪ್ರತಿನಿಧಿಗಳು, ತಹಶೀಲ್ದಾರರು, ಪೊಲೀಸ್ ಉಪಅಧೀಕ್ಷಕರು, ತಾಲೂಕ ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿಗಳು, ನಗರಸಭೆಯ ಆಯುಕ್ತರು, ಗಣ್ಯರು ಪಾಲ್ಗೊಳ್ಳುತ್ತಿದ್ದು, ನಗರದ ಸಂಘ-ಸಂಸ್ಥೆಗಳು, ಪ್ರಾಥಮಿಕ ಮತ್ತು ಪ್ರೌಢಶಾಲಾ ಸಂಘಟನೆಗಳು ಕೈ ಜೋಡಿಸುತ್ತಿದ್ದು, ಅಭಿಯಾನದ ಯಶಸ್ವಿಗೆ ಪಾಲಕರು, ಪೋಷಕರು, ವಿವಿಧ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸುತ್ತಾರೆ. ಕಾರಣ ಗಂಗಾವತಿ ತಾಲೂಕಿನ ಎಲ್ಲಾ ಪಾಲಕರು, ಪೋಷಕರು ಹಾಗೂ ಶಿಕ್ಷಣ ಪ್ರೇಮಿಗಳು ಈ ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಬೇಕಾಗಿ ಪ್ರಕಟಣೆಯಲ್ಲಿ ಕೋರಲಾಗಿದೆ.

ಸಮುದಾಯ ಶಿಕ್ಷಣ ಜಾಗೃತಿ ಜಾಥಾ :

ನಗರದ ಹಿರೇಜಂತಕಲ್ ಸ.ಮಾ.ಹಿ.ಪ್ರಾ ಶಾಲೆಯಲ್ಲಿ ಜೂ.11ರಂದು ಬೆಳಿಗ್ಗೆ 7ಗಂಟೆಗೆ ಸಮುದಾಯ ಜಾಗೃತಿ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ. 

ಜಾಥಾ ಮಾರ್ಗ :

ಸ.ಮಾ.ಹಿ.ಪ್ರಾ ಶಾಲೆ ಹಿರೇಜಂತಕಲ್ ದಿಂದ ಸೇವಾಲಾಲ್ ವೃತ್ತ-ಬಸವೇಶ್ವರ ವೃತ್ತ-ಕೃಷ್ಣದೇವರಾಯ ವೃತ್ತ-ನೀಲಕಂಠೇಶ್ವರ ವೃತ್ತ-ದುರುಗಮ್ಮನ ಗುಡಿ-ಗಾಂಧಿ ವೃತ್ತ-ಮಹಾವೀರ ವೃತ್ತ-ಸಿಬಿಎಸ್ ವೃತ್ತದವರೆಗೆ ಜಾಥಾ ನಡೆಯಲಿದೆ.

ಪಾಲಕರಿಗೆ ಶಿಕ್ಷಣ ಜಾಗೃತಿ ಸಮಾವೇಶ :

ನಗರದ ಶಾ.ಸ.ಬಾ.ಮಾ.ಹಿ.ಪ್ರಾ ಶಾಲೆಯಲ್ಲಿ ಜೂ.11ರಂದು ಸಂಜೆ 6ಗಂಟೆಗೆ ಗಂಗಾವತಿ ಪ್ರಾಣೇಶ್ ಹಾಗೂ ನರಸಿಂಹ ಜೋಷಿ ಹಾಸ್ಯ ಕಲಾವಿದರಿಂದ ಪಾಲಕರಿಗೆ ಶಿಕ್ಷಣ ಜಾಗೃತಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. 

ಸ್ಥಳ : ಶಾ.ಸ.ಬಾ.ಮಾ.ಹಿ.ಪ್ರಾ ಶಾಲೆ, ನೀಲಕಂಠೇಶ್ವರ ವೃತ್ತ, ಗಂಗಾವತಿ 

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.