ಕೆ.ಎನ್.ಪಿ.ವಾರ್ತೆ,ಧಾರವಾಡ,ಆ.25;
ಸಂವಿಧಾನವು ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಧ್ಯೇಯವನ್ನು ಹೊಂದಿದೆ. ಸಂವಿಧಾನದ ಪ್ರಕಾರ ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಇರಬೇಕು. ಗ್ರಾಮೀಣ ಜನ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆರ್.ಎಸ್. ಚಿಣ್ಣನ್ನವರ ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಜಿಲ್ಲಾ ಪಂಚಾಯತ್ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಅಮ್ಮಿನಭಾವಿಯ ಗ್ರಾಮಪಂಚಾಯತ್ ಕಾರ್ಯಾಲಯದ ಆವರಣದಲ್ಲಿ ಸ್ಥಾಪಿಸಲಾಗಿರುವ ಗ್ರಾಮೀಣ ಕಾನೂನು ನೆರವು ಮತ್ತು ಸಹಾಯ ಕೇಂದ್ರ ಉದ್ಘಾಟಿಸಿ ಮಾತನಾಡಿದರು.
ಕಾನೂನನ್ನು ತಿಳಿದುಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಕಾನೂನು ತಿಳಿದಿರಲಿಲ್ಲ ಎಂದರೆ ಕ್ಷಮಿಸಲು ಸಂವಿಧಾನದಲ್ಲಿ ಅವಕಾಶವಿಲ್ಲ. ಈ ನಿಟ್ಟಿನಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮಹಿಳೆಯರು, ಮಕ್ಕಳು ಸೇರಿದಂತೆ 1 ಲಕ್ಷ ರೂ. ಗಳಿಗಿಂತಲೂ ಕಡಿಮೆ ವಾರ್ಷಿಕ ಆದಾಯ ಹೊಂದಿರುವ ಎಲ್ಲರಿಗೂ ಈ ಕೇಂದ್ರದ ಮೂಲಕ ಉಚಿತ ಕಾನೂನು ನೆರವು ನೀಡಲಾಗುತ್ತದೆ.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ವಕೀಲರನ್ನು ನೇಮಿಸಲಾಗುತ್ತದೆ. ಗ್ರಾಮೀಣ ಭಾಗದಲ್ಲಿ ಟ್ರ್ಯಾಕ್ಟರ್‍ಗಳನ್ನು ಸಾರ್ವಜನಿಕರ ಪ್ರಯಾಣಕ್ಕಾಗಿಯೂ ಕೂಡಾ ಬಳಸುವುದು ಕಂಡು ಬರುತ್ತದೆ. ಆದರೆ ಇದು ಅಕ್ರಮವಾಗುತ್ತದೆ. ಟ್ರ್ಯಾಕ್ಟರ್‍ಗಳನ್ನು ಕೇವಲ ಕೃಷಿ ಚಟುವಟಿಕೆಗಳಿಗೆ ಮಾತ್ರ ಬಳಸಬೇಕು. ಸರಕು ಸಾಗಣೆ ವಾಹನಗಳನ್ನು ನಿಗದಿತ ಉದ್ದೇಶಕ್ಕೆ ಮಾತ್ರ ಬಳಸಬೇಕು. ಆಕಸ್ಮಿಕವಾಗಿ ಅವಘಡಗಳು ಸಂಭವಿಸಿದರೆ ಅದರಲ್ಲಿನ ಪ್ರಯಾಣಿಕರಿಗೆ ಯಾವುದೇ ವಿಮಾ ಸೌಲಭ್ಯ, ಪರಿಹಾರ ಸಿಗುವುದಿಲ್ಲ. ಇಂತಹ ಸಾಮಾನ್ಯ ತಿಳುವಳಿಕೆಗಳನ್ನು ಈ ಕೇಂದ್ರದ ಮೂಲಕ ನೀಡಲಾಗುತ್ತದೆ. ಗ್ರಾಮಸ್ಥರು ಇದರ ಪ್ರಯೋಜನ ಪಡೆಯಬೇಕೆಂದು ಹೇಳಿದರು.
ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಎಸ್.ಜಿ. ಕೊರವರ ಮಾತನಾಡಿ, ಚಿನ್ನ ದಾನಕ್ಕಿಂತ ಅನ್ನ ದಾನ ಶ್ರೇಷ್ಠವೆನ್ನುವರು ಆದರೆ ನ್ಯಾಯದಾನ ಎಲ್ಲಕ್ಕಿಂತಲೂ ಮಿಗಿಲಾದದ್ದು. ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕ ತ್ಯಾಗ ಬಲಿದಾನಗಳನ್ನು ನೀಡಿದ ಅಮ್ಮಿನಭಾವಿಯಲ್ಲಿ ದುರ್ಬಲರಿಗಾಗಿ ಗ್ರಾಮೀಣ ಕಾನೂನು ನೆರವು ಮತ್ತು ಸಹಾಯ ಕೇಂದ್ರ ಆರಂಭವಾಗಿರುವುದು ಸಂತಸದ ಸಂಗತಿ ಎಂದರು.
ವಕೀಲರ ಸಂಘದ ಅಧ್ಯಕ್ಷ ಆರ್.ಯು. ಬೆಳ್ಳಕ್ಕಿ ಮಾತನಾಡಿ, ಅಮ್ಮಿನಭಾವಿಯ ರಾಷ್ಟ್ರೀಕೃತ ಬ್ಯಾಂಕ್ ವೊಂದರ ಕಾನೂನು ಸಲಹೆಗಾರನಾಗಿ ವಕೀಲಿ ವೃತ್ತಿ ಆರಂಭಿಸಿದ ನನಗೆ ಇಲ್ಲಿನ ಜನರ ಮನೋಭಾವ, ಪ್ರಾಮಾಣಿಕತೆಯ ಪರಿಚಯವಿದೆ. ಅದಕ್ಕಾಗಿಯೇ ಗ್ರಾಮದ ಜನರಿಗಾಗಿ ಗ್ರಾಮೀಣ ಕಾನೂನು ನೆರವು ಮತ್ತು ಸಹಾಯ ಕೇಂದ್ರ ಸ್ಥಾಪಿಸಲು ಕಾನೂನು ಸೇವಾ ಪ್ರಾಧಿಕಾರಕ್ಕೆ ಮನವಿ ಮಾಡಿಕೊಳ್ಳಲಾಗಿತ್ತು. ಮನವಿಯನ್ನು ಪರಿಗಣಿಸಿ ಕೇಂದ್ರ ಸ್ಥಾಪಿಸಲಾಗಿದೆ. ಈ ಕೇಂದ್ರದಲ್ಲಿ ಯಾವುದೇ ರಾಜಕೀಯಕ್ಕೆ ಅವಕಾಶ ನೀಡಬಾರದು. ನಿಷ್ಪಕ್ಷಪಾತವಾಗಿ ಕಾನೂನು ನೆರವು ನೀಡಿ ಕೇಂದ್ರವನ್ನು ಬೆಳೆಸಬೇಕು ಎಂದರು.
ಡಿವೈಎಸ್‍ಪಿ ಬಿ.ಪಿ. ಚಂದ್ರಶೇಖರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಡೊಳ್ಳಿನ, ಅಮ್ಮಿನಭಾವಿಯ ಕಾನೂನು ನೆರವು ಮತ್ತು ಸಹಾಯ ಕೇಂದ್ರದ ಸಲಹೆಗಾರ ಜಿ.ವಿ. ಧನಶೆಟ್ಟಿ ಮಾತನಾಡಿದರು.
ಗ್ರಾಮ ಪಂಚಾಯತ್ ಅಧ್ಯಕ್ಷೆ ನೀಲಮ್ಮ ಸಾಬಣ್ಣ ಗಾಡದ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಗನ್ನಾಥ್ ಕುಸುಗಲ್, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎಸ್. ಕಾದ್ರೋಳ್ಳಿ ಇದ್ದರು. ಶಾಂತೇಶ್ವರ ಶಾಲೆಯ ವಿದ್ಯಾರ್ಥಿಗಳು ನಾಡಗೀತೆ ಪ್ರಸ್ತುತಪಡಿಸಿದರು. ಸದಾನಂದ ಮುಂದಿನಮನಿ ಸ್ವಾಗತಿಸಿದರು. ಸುನೀಲ ಗಾಡಿ ನಿರೂಪಿಸಿದರು. ಶ್ರೀಶೈಲ ಅಳಗವಾಡಿ ವಂದಿಸಿದರು.
ವರದಿ : ಚಂದ್ರು ಹಿರೇಮಠ ಧಾರವಾಡ
ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…
ನೀವು ಕೂಡ ಬರೆಯಬಹುದು :
ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.
ಈ-ವಿಳಾಸ : karnatakanewsportal@gmail.com
ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.