ಕೆ.ಎನ್.ಪಿ.ವಾರ್ತೆ,ಧಾರವಾಡ,ಜು.21;
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಆಶ್ರಯದಲ್ಲಿ ಜಿಲ್ಲಾ ಮಧ್ಯಸ್ಥಿಕೆ ನ್ಯಾಯಾಲಯ ಸಂಕೀರ್ಣದ ಸಭಾಭವನದಲ್ಲಿ ಬೀದರ್ ಮತ್ತು ಗುಲ್ಬರ್ಗಾ ಜಿಲ್ಲೆಯಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಲ್ಲಿ ಸೇವಾ ಪ್ರತಿನಿಧಿಗಳಾಗಿ ಸೇವೆ ಸಲ್ಲಿಸುತ್ತಿರುವ ಗ್ರಾಮೀಣ ಮಹಿಳೆಯರಿಗೆ ಕಾನೂನು ಸಾಕ್ಷರತಾ ಶಿಬಿರವನ್ನು ಆಯೋಜಿಸಲಾಗಿತ್ತು.
ಶಿಬಿರದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಚಿಣ್ಣನ್ನವರ ಮಾತನಾಡಿ, ಮಹಿಳಾ ಸಬಲೀಕರಣಕ್ಕಾಗಿ ಮತ್ತು ಅವರ ರಕ್ಷಣೆ, ಅಭಿವೃದ್ಧಿಗಾಗಿ ಅನೇಕ ಕಾನೂನುಗಳು ಅಸ್ತಿತ್ವದಲ್ಲಿವೆ. ಆದರೆ ಕಾನೂನು ಸಾಕ್ಷರತೆಯ ಕೊರತೆಯಿಂದ ಮಹಿಳೆಯರ ಮೇಲೆ ಪುರುಷರ ಹಾಗೂ ಕುಟುಂಬ ಸದಸ್ಯರಿಂದ ವಿವಿಧ ರೀತಿಯ ದೌರ್ಜನ್ಯ, ಮಾನಸಿಕ ತೊಂದರೆ ಉಂಟಾಗುತ್ತಿದೆ. ಕಾನೂನು ಸೇವೆಗಳ ಪ್ರಾಧಿಕಾರದಿಂದ ಅನ್ಯಾಯಕ್ಕೆ ಒಳಗಾದ ಮಹಿಳೆಯರಿಗೆ ಉಚಿತ ಕಾನೂನು ನೆರವು ಹಾಗೂ ನ್ಯಾಯವಾದಿಗಳಿಂದ ಉಚಿತವಾಗಿ ವಕಾಲತ್ತು ಮಾಡಲು ನೆರವು ನೀಡಲಾಗುತ್ತಿದೆ.
ಸ್ವಸಹಾಯ ಗುಂಪಿನ ಪ್ರತಿನಿಧಿಗಳು ಮತ್ತು ಸರ್ಕಾರದ ವಿವಿಧ ಇಲಾಖೆಗಳಿಂದ ಗ್ರಾಮೀಣ ಮಟ್ಟದಲ್ಲಿ ಸೇವೆ ಸಲ್ಲಿಸುತ್ತಿರುವ ಸರ್ಕಾರಿ ಅಧಿಕಾರಿಗಳು ಗ್ರಾಮೀಣ ಭಾಗದಲ್ಲಿರುವ ಮಹಿಳೆಯರಿಗೆ ಸರಿಯಾದ ತಿಳುವಳಿಕೆ ಹಾಗೂ ಮಾಹಿತಿಯನ್ನು ನೀಡುವ ಮೂಲಕ ಮಾನಸಿಕ ಧೈರ್ಯ ನೀಡಬೇಕು. ಮತ್ತು ಅವರಿಗೆ ಆಗುವ ತೊಂದರೆಗಳ ಕುರಿತು ಸೇವಾ ಪ್ರಾಧಿಕಾರದ ಗಮನಕ್ಕೆ ತಂದರೆ ಅಂತಹವರಿಗೆ ಸಹಾಯ ನೀಡಲಾಗುವುದೆಂದು ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಮಾಲೋಚಕ ನ್ಯಾಯವಾದಿ ಜಯಶ್ರೀವಾಣಿ ಗ್ರಾಮಪುರೋಹಿತ ಮಹಿಳೆಯರ ನೆರವಿಗಿರುವ ಕಾನೂನುಗಳ ಕುರಿತು ವಿಶೇಷ ಉಪನ್ಯಾಸ ನೀಡಿ, ಮಹಿಳಾ ದೌರ್ಜನ್ಯ, ಪೊಕ್ಸೋ, ಕೌಟುಂಬಿಕ ದೌರ್ಜನ್ಯ, ಪಿತ್ರಾರ್ಜಿತ ಆಸ್ತಿ ಹಕ್ಕು ಮತ್ತು ದಿನಗೂಲಿ ಕನಿಷ್ಠ ಕಾಯ್ದೆಗಳ ಕುರಿತು ಸೇವಾಪ್ರತಿನಿಧಿಗಳಿಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ರಾಯಾಪೂರದ ಮಹಿಳಾ ಜ್ಞಾನ ವಿಕಾಸ ತರಬೇತಿ ಸಂಸ್ಥೆಯ ಉಪನ್ಯಾಸಕ ನಿಂಗಪ್ಪಾ ಜಿ. ಸ್ವಾಗತಿಸಿ, ನಿರೂಪಿಸಿದರು.
ವರದಿ : ಚಂದ್ರು ಹಿರೇಮಠ ಧಾರವಾಡ
ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…
ನೀವು ಕೂಡ ಬರೆಯಬಹುದು :
ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.
ಈ-ವಿಳಾಸ : karnatakanewsportal@gmail.com
ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.