ಕೆ.ಎನ್.ಪಿ.ವಾರ್ತೆ,ಹಾವೇರಿ,ಡಿ.14;

ಸರ್ವರ ಹಿತ ಬಯಸುವ, ವಿಶ್ವಬಂಧುತ್ವದ ಸಂಸ್ಕೃತಿಯನ್ನು ಪಸರಿಸಿದವರು ಪಂಚಪೀಠಗಳ ಜಗದ್ಗುರು ಶ್ರೀ ರೇಣುಕಾದಿ ಪಂಚಾಚಾರ್ಯರು. ವೀರಶೈವ ಧರ್ಮ ಪರಂಪರೆಗೆ ಸಾವಿರಾರು ವರ್ಷಗಳ ಸುದೀರ್ಘ ಇತಿಹಾಸವಿದೆ.

ಶಿವನ ಪಂಚಮುಖಗಳಿಂದ ಉದ್ಭವಿಸುವ ಪಂಚಾಚಾರ್ಯರು ವೀರಶೈವ ಧರ್ಮ ಸಂಸ್ಥಾಪಕರಾಗಿ ನಾಡಿನಾದ್ಯಂತ ಸಂಚರಿಸಿ ಧರ್ಮ ಪರಂಪರೆಯನ್ನು ಪಸರಿಸುವುದರ ಜೊತೆಗೆ ಜನರನ್ನು ಧರ್ಮ ಮಾರ್ಗದಲ್ಲಿ ನಡೆಯಲು ಪ್ರೇರೆಪಿಸಿದರು.

ನಂತರ 12ನೇ ಶತಮಾನದಲ್ಲಿ ಬಸವೇಶ್ವರರು ಬ್ರಾಹ್ಮಣ ಧರ್ಮದಲ್ಲಿಯ ನಿಬಂಧನೆಗಳಿಗೆ ಬೇಸತ್ತು ಕಲ್ಯಾಣದ ಸಾರಂಗಮಠದ ಜಾತವೇದಮುನಿ ಶಿವಾಚಾರ್ಯ ರಿಂದ ಲಿಂಗದೀಕ್ಷೆಯನ್ನು ಪಡೆದು ಶೈವ ದಿಂದ ವೀರಶೈವ ನಾದೆ ಎಂದು ವಚನ ಬರೆದರು.

ಹೀಗೆ ಪಂಚಪೀಠಗಳ ಅನೇಕ ಶಾಖಾ ಮಠಗಳನ್ನು ದೇಶಾದ್ಯಂತ ಸ್ಥಾಪಿತಗೊಂಡು ಧರ್ಮ ಪರಂಪರೆ ಯ ಜೊತೆಗೆ ಸಂರಕ್ಷಣೆಯನ್ನು ಮಾಡುವ ಗುರುತರ ಜವಾಬ್ದಾರಿಯನ್ನು ಹೊಂದಿವೆ. ಅಂತಹ ಮಠಗಳಲ್ಲಿ ಹಾವೇರಿ ಜಿಲ್ಲೆಯ ಹಾವೇರಿ ತಾಲೂಕಿನ ಶ್ರೀ ರಂಭಾಪುರಿಪೀಠದ ಶಾಖಾಮಠವೇ ನೆಗಳೂರಿನ ಸಂಸ್ಥಾನ ಹಿರೇಮಠ. ಶ್ರೀಮಠಕ್ಕೆ 850 ವರ್ಷಗಳ ಇತಿಹಾಸವಿದೆ.

ಇತಿಹಾಸ :

ಹಾವೇರಿ ತಾಲೂಕಿನ ನೆಗಳೂರ ಗ್ರಾಮ ಪುರಾಣದ ಹಿನ್ನೆಲೆಯನ್ನು ಒಳಗೊಂಡಿದೆ. ನೆಗಳೂರಿನ ಮೂಲ ಹೆಸರು ಗಣತೂರು ಶಾಸನಗಳಲ್ಲಿ ನೆಗೆಯೂರು ಎಂದು ಉಲ್ಲೇಖವಾಗಿದೆ. ಇಲ್ಲಿನ ಹಿರೇಮಠದ ಗುರುಶಾಂತ ಶಿವಯೋಗಿಗಳು ಒಮ್ಮೆ ಮಠದ ಹೊಲದ ಕಡೆ ಹೋದಾಗ ರೈತರೆಲ್ಲ ಆಯಾಸದಿಂದ ಮಲಗಿರುತ್ತಾರೆ. ಆಗ ಗುರುಗಳು ತಾವೇ ನೇಗಿಲನ್ನು ಹಿಡಿದು ಹೊಲ ಹೂಳಲು ಮುಂದಾದರು. ಆಗ ಸಾವಿರಾರು ನೇಗಿಲುಗಳಾಗಿ ಮಾರ್ಪಟ್ಟವಂತೆ. ಅಂದಿನಿಂದ ನೇಗಿಲೂರು ಎಂದು ಹೆಸರಾಗಿದೆ.

ಶ್ರೀಮಠದ ಮೂಲ ಕರ್ತೃಗಳು ಗುರುಶಾಂತ ಶಿವಯೋಗಿಗಳು. ಮರಡೂರ ಗ್ರಾಮಕ್ಕೆ ಗುರುಗಳು ಹೋದಾಗ ಅಲ್ಲಿಯ ಗ್ರಾಮದೇವತೆಯು, ‘ನಾನು ನಿನ್ನ ಗ್ರಾಮದಲ್ಲಿ ನಿನ್ನ ಮಠದ ಹತ್ತಿರ ನೆಲೆ ನಿಲ್ಲುವೆ. ನನಗೆ ಇದು ತವರುಮನೆಯಾಗಲಿ ನೆಗಳೂರು ಗಂಡನ ಮನೆಯಾಗಲಿ’ ಎಂದು ಜ್ಯೋತಿಸ್ವರೂಪದಲ್ಲಿ ಬಂದು ಶ್ರೀಮಠದ ಹತ್ತಿರವೇ ಇರುವ ಗುಡಿಯಲ್ಲಿ ನೆಲೆಸಿದ್ದಾಳೆ.

ಹಲವಾರು ಪವಾಡ ಮಾಡಿದ ಶಿವಯೋಗಿಗಳು ಇಲ್ಲಿ ಜೀವಂತ ಸಮಾಧಿಯಾಗಿದ್ದು, ಸರ್ಪರೂಪದಲ್ಲಿ ದರ್ಶನ ನೀಡುತ್ತಾರೆಂಬ ನಂಬುಗೆಯಿದೆ. 37 ಶ್ರೀಗಳು ಇಲ್ಲಿನ ಮಠಾಧೀಶರಾಗಿದ್ದಾರೆ. 36ನೆಯವರಾಗಿ ಈ ಪೀಠವನ್ನು ಏರಿದವರೇ ಶ್ರೀಮಠದ ಅಭಿವೃದ್ಧಿಯ ಹರಿಕಾರ ಲಿಂ. ಶಿವಾನಂದ ಶಿವಾಚಾರ್ಯರು.

ಹಾವೇರಿ, ಗದಗ, ಧಾರವಾಡದ ಬಹುತೇಕ ನಗರ-ಗ್ರಾಮಗಳಲ್ಲದೆ ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ಅನೇಕ ರಾಜ್ಯಗಳ ನಗರಗಳಲ್ಲಿ ಹಾಗೂ ಶ್ರೀಲಂಕಾದಲ್ಲೂ ಅವರು ಲಿಂಗದೀಕ್ಷಾಸಂಸ್ಕಾರ ಕಾರ್ಯ ನಡೆಸಿದ್ದರು.

48 ವರ್ಷ ಪೀಠಾಧಿಪತಿಗಳಾಗಿದ್ದ ಅವರು 2007ರಲ್ಲಿ ಲಿಂಗೈಕ್ಯರಾದರು. ಪೂಜ್ಯ ಷ.ಬ್ರ. ಗುರುಶಾಂತೇಶ್ವರ ಶಿವಯೋಗಿ ಶಿವಾಚಾರ್ಯರು 2007ರಲ್ಲಿ 37ನೇ ಮಠಾಧ್ಯಕ್ಷರಾಗಿ ಶ್ರೀಮಠದ, ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.

ಧರ್ಮ ಪರಂಪರೆ ಸಂರಕ್ಷಣೆಯ ಸಂಸ್ಥಾನ

ಪೂಜ್ಯರು ಸದ್ಭಕ್ತರಿಗೆ ಆಚಾರ, ಧರ್ಮ, ಸಂಸ್ಕಾರಗಳ ಜೊತೆಗೆ ಬದುಕು ಹಸನಾಗಿಸುವ ಮಾರ್ಗದರ್ಶನ ನೀಡುತ್ತಿದ್ದಾರೆ.

ಕೇದಾರ ಜಗದ್ಗುರುಗಳ ಸಂಗೀತಯುಕ್ತ ಇಷ್ಟಲಿಂಗ ಪೂಜೆ :

ಇಲ್ಲಿ ಇದೇ ಡಿ.24 ಮತ್ತು 25ರಂದು ಪ್ರಪ್ರಥಮವಾಗಿ ಕೇದಾರ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಸಂಗೀತಯುಕ್ತ ಇಷ್ಟಲಿಂಗ ಪೂಜೆ ನೇರವೇರುವುದು. ನಾಡಿನ ವಿವಿಧ ಮಠಗಳ ಮಠಾಧೀಶರು ರಾಜಕೀಯ ಧುರೀಣರು ಸಹಸ್ರಾರು ಸಂಖ್ಯೆಯಲ್ಲಿ ಸದ್ಭಕ್ತರು ಪಾಲ್ಗೊಗೊಳ್ಳುವರು.

-ಗುರುಶಾಂತಸ್ವಾಮಿ.ಗ.ಹಿರೇಮಠ, ನೆಗಳೂರ ಮೊ: 9741117174

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.