ಕೆ.ಎನ್.ಪಿ.ವಾರ್ತೆ,ದಾವಣಗೆರೆ,ಆ.26;

ಕರ್ನಾಟಕ ರಾಜ್ಯ ಕ್ರೈಸ್ ವಸತಿ ಶಾಲೆಗಳ ಅತಿಥಿ ಶಿಕ್ಷಕರ ಸಂಘ (ರಿ.) ರಾಜ್ಯ ಘಟಕ-ದಾವಣಗೆರೆ ವತಿಯಿಂದ ಅತಿಥಿ ಶಿಕ್ಷಕರ ನಾನಾ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಇಂದಿನಿಂದ ಅನಿರ್ಧಿಷ್ಟಾವಧಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.

ಕರ್ನಾಟಕ ರಾಜ್ಯ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಶಿಕ್ಷಕರ ಈ ಕೆಳಕಂಡ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಆ.26 ರಿಂದ ದಾವಣಗೆರೆ ನಗರದ ಉಪವಿಭಾಗಾಧಿಕಾರಿ (ಎ.ಸಿ) ಕಛೇರಿ ಮುಂದೆ ಅನಿರ್ಧಿಷ್ಟಾವಧಿಯ ಕಾಲ ಬೇಡಿಕೆ ಈಡೇರುವವರೆಗೂ ಮುಷ್ಕರ ಹಮ್ಮಿಕೊಳ್ಳಲಾಗಿದೆ.

1) ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆ, (ಪ.ಜಾ)-836, ಅಣಜಿ, ದಾವಣಗೆರೆ ತಾ., ಜಿಲ್ಲೆ. ಇಲ್ಲಿ 10-06-2017ರಿಂದ ಸದರಿ ದಿನಾಂಕದವರೆಗೆ ಅತಿಥಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಕನ್ನಡ ಅತಿಥಿ ಶಿಕ್ಷಕರಾದ ನಿಂಗಪ್ಪ ಬಿ., ಆಂಗ್ಲ ಭಾಷಾ ಶಿಕ್ಷಕರಾದ ದೊಡ್ಡಪ್ಪ ಆರ್., ಹಿಂದಿ ಭಾಷಾ ಶಿಕ್ಷಕರಾದ ಗಂಗಾಧರ ಬಿ.ಎಲ್. ಹಾಗೂ ಗಣಿತ ಶಿಕ್ಷಕರಾದ ವೀರೇಂದ್ರ ಪಟೇಲ್ ಜಿ. ಇವರು ತಮ್ಮನ್ನು ಖಾಯಂಗೊಳಿಸಲು ಕರ್ನಾಟಕ ರಾಜ್ಯ ಉಚ್ಚನ್ಯಾಯಾಲಯ ಬೆಂಗಳೂರು ಇವರ ಮೊರೆ ಹೋಗಿದ್ದು, ಇವರ ಉಚ್ಛ ನ್ಯಾಯಾಲಯದ ಆದೇಶ ಸಂಖ್ಯೆ : ಅಪೀಲು ಸಂಖ್ಯೆ I : wp/12562-12564/2018,(S-DIS) II : wp/45714-45716/2018, (S-RES) ಆಗಿದೆ. ಇವರಿಗೆ ಕರ್ನಾಟಕ ರಾಜ್ಯ ಉಚ್ಚನ್ಯಾಯಾಲಯವು ಮಧ್ಯಂತರ ತಡೆಯಾಜ್ಞೆ ನೀಡಿರುತ್ತದೆ.

ಈ ತಡೆಯಾಜ್ಞೆಯು ಪ್ರಸ್ತುತ ಜಾರಿಯಲ್ಲಿರುತ್ತದೆ. ಇದರ ಅನ್ವಯ ಅಂತಿಮ ತೀರ್ಪು ಹೊರ ಬೀಳುವವರೆಗೂ ಸದರಿ ಶಿಕ್ಷಕರುಗಳು ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆ, (ಪ.ಜಾ)-836, ಅಣಜಿ, ದಾವಣಗೆರೆ ತಾ., ಜಿಲ್ಲೆ. ಇಲ್ಲಿ ಸೇವೆಯಲ್ಲಿ ಮುಂದುವರೆಯುವ ಹಕ್ಕನ್ನು ಹೊಂದಿದ್ದಾರೆ.
ಆದರೆ ಸದರಿ ವಸತಿ ಶಾಲೆಯ ಪ್ರಬಾರಿ ಪ್ರಾಂಶುಪಾಲರಾದ ಶ್ರೀ ವಿ.ಸಿ. ಅಂಜಿನಪ್ಪ ಹಾಗೂ ದಾವಣಗೆರೆ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಶ್ರೀ ಶಿವಾನಂದ ಕುಂಬಾರ ಇವರು ಯಾವುದೇ ನೋಟಿಸ್ ಅಥವಾ ಕರ್ತವ್ಯದಿಂದ ಬಿಡುಗಡೆಗೊಳಿಸುವ ಪತ್ರವನ್ನು ನೀಡದೆ ಏಕಾಏಕಿ ಮೇಲ್ಕಂಡ ವಿಷಯಗಳ ಅತಿಥಿ ಶಿಕ್ಷಕರ ಜಾಗಕ್ಕೆ ವರ್ಗಾವಣೆಗೊಂಡ ಖಾಯಂ ಶಿಕ್ಷಕರನ್ನು ಕರ್ತವ್ಯಕ್ಕೆ ಹಾಜರುಪಡಿಸಿಕೊಂಡು ಮೌಖಿಕವಾಗಿ ಹೊರಹೋಗುವಂತೆ ಸೂಚಿಸಿದ್ದಾರೆ.

ಯಾವುದೇ ಕಾರಣಕ್ಕೂ ಕರ್ತವ್ಯಕ್ಕೆ ಹಾಜರಾಗದಂತೆ ಒತ್ತಡ ಹೇರಿ ಮಾನಸಿಕ ಹಿಂಸೆ ನೀಡಿರುತ್ತಾರೆ. ಅಲ್ಲದೆ ಕರ್ನಾಟಕ ರಾಜ್ಯ ಉಚ್ಚನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಸದರಿ ಅತಿಥಿ ಶಿಕ್ಷಕರುಗಳಿಗೆ ಅನ್ಯಾಯವೆಸಗಿದ್ದಾರೆ. ಇದರಿಂದಾಗಿ ಇದೇ ವೃತ್ತಿಯನ್ನು ಅವಲಂಬಿಸಿರುವ ಅತಿಥಿ ಶಿಕ್ಷಕರುಗಳ ಮಾನವ ಸಂಪನ್ಮೂಲವನ್ನು ದುರುಪಯೋಗಪಡಿಸಿಕೊಂಡಂತಾಗಿದೆ. ಆದ್ದರಿಂದ ಘನ ಉಚ್ಚನ್ಯಾಯಾಲಯದ ಮಧ್ಯಂತರ ತಡೆಯಾಜ್ಞೆಯನ್ನು ಗೌರವಿಸಿ ಈ ಕೂಡಲೇ ರಾಜ್ಯ ಉಚ್ಚನ್ಯಾಯಾಲಯದ ಅಂತಿಮ ತೀರ್ಪು ಹೊರ ಬೀಳುವವರೆಗೂ ಸದರಿ ವಸತಿ ಶಾಲೆಯಲ್ಲಿಯೇ ಮುಂದುವರೆಸಬೇಕು.

ಈ ಸಂಬಂಧ ಕರ್ನಾಟಕ ರಾಜ್ಯ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಉಪಾಧ್ಯಕ್ಷರು ಮತ್ತು ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ಅಧೀನ ಕಾರ್ಯದರ್ಶಿಯವರು, ಕರ್ನಾಟಕ ರಾಜ್ಯ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (ರಿ.) ಬೆಂಗಳೂರು ಇದರ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ದಾವಣಗೆರೆ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಅತಿಥಿ ಶಿಕ್ಷಕರುಗಳ ಹೆಸರಿನಲ್ಲಿ ಆದೇಶ ನೀಡಬೇಕಾಗಿ ಆಗ್ರಹ.

2) ಅದೇ ರೀತಿ wp/45714-45716/2018,(S-RES) ರ ಅನ್ವಯ ರಾಜ್ಯ ಉಚ್ಚನ್ಯಾಯಾಲಯದ ಮಧ್ಯಂತರ ತಡೆಯಾಜ್ಞೆಯಲ್ಲಿ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆ, (ಪ.ಜಾ)-836, ಅಣಜಿ, ದಾವಣಗೆರೆ ತಾ., ಜಿಲ್ಲೆ. ಇಲ್ಲಿ ಅತಿಥಿ ಶಿಕ್ಷಕರುಗಳಾಗಿ ಸೇವೆ ಸಲ್ಲಿಸುತ್ತಿರುವ ದೈಹಿಕ ಶಿಕ್ಷಣ ಶಿಕ್ಷಕರಾದ ತಿಮ್ಮಪ್ಪ ಕೆ.ಜೆ., ವಿಜ್ಞಾನ ಶಿಕ್ಷಕಿಯಾದ ಮಧುಮತಿ ಎಂ., ಹಾಗೂ ಹರಪನಹಳ್ಳಿ ತಾ. ಬಳ್ಳಾರಿ ಜಿಲ್ಲೆ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆ, (ಪ.ಜಾ)-509, ಇಲ್ಲಿ ಆಂಗ್ಲಭಾಷಾ ಅತಿಥಿ ಶಿಕ್ಷಕರಾದ ಕೃಷ್ಣಮೂರ್ತಿ ಬಿ. ಇವರ ಜಾಗಕ್ಕೂ ಸಹ ಖಾಯಂ ಶಿಕ್ಷಕರ ವರ್ಗಾವಣೆ ಆಗಲಿದೆ ಎಂದು ಆಯಾ ಶಾಲೆಗಳ ಪ್ರಾಂಶುಪಾಲರುಗಳು ಹೇಳಿರುವುದಾಗಿ ತಿಳಿದುಬಂದಿದೆ. ಆದ್ದರಿಂದ ಇವರಿಗೆ ಯಾವುದೇ ತೊಂದರೆ ಮಾಡದಂತೆ ಸದರಿ ಸ್ಥಳದಲ್ಲಿಯೇ ಮುಂದುವರೆಸಬೇಕಾಗಿ ಕೋರಿಕೆ.

3) ಇದೇ ರೀತಿ ರಾಜ್ಯಾದ್ಯಂತ ಉಚ್ಚನ್ಯಾಯಾಲಯದ ಮಧ್ಯಂತರ ತಡೆಯಾಜ್ಞೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರುಗಳಿಗೆ ಆಯಾ ಸ್ಥಳದಲ್ಲಿಯೇ ಮುಂದುವರೆಸಬೇಕಾಗಿ ವಿನಂತಿ.

4) ಈಗಾಗಲೇ ಸಂದರ್ಶನ ಪ್ರಕ್ರಿಯೆಯಲ್ಲಿ ಅರ್ಹತೆ ಹಾಗೂ ಪ್ರತಿಭೆಯ ಮಾನದಂಡದ ಆಧಾರದ ಮೇಲೆಯೇ ಆಯ್ಕೆಯಾಗಿ ಅತ್ಯಂತ ಕಡಿಮೆ ವೇತನದಲ್ಲಿ ಸೇವೆ ಸಲ್ಲಿಸುತ್ತಾ ಸರ್ಕಾರದ ಆರ್ಥಿಕ ಉಳಿತಾಯಕ್ಕೂ ಕಾರಣರಾಗಿರುವ ಮತ್ತು ಸೇವಾ ನಿಷ್ಠೆಯಿಂದ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ತಮ್ಮ ಮಾನವ ಸಂಪನ್ಮೂಲದ ಸದ್ಬಳಕೆ ಮಾಡುತ್ತಿರುವ ರಾಜ್ಯದ ಎಲ್ಲಾ ಕ್ರೈಸ್ ವಸತಿ ಶಾಲೆಗಳ ಅತಿಥಿ ಶಿಕ್ಷಕರನ್ನು ನೇರವಾಗಿ ಖಾಯಂಗೊಳಿಸಬೇಕಾಗಿ ಆಗ್ರಹ. ಇದರಲ್ಲಿ ವಯೋಮಿತಿ ಮೀರಿರುವ ಅನೇಕ ಅತಿಥಿ ಶಿಕ್ಷಕರಿದ್ದಾರೆ. ಅಲ್ಲದೆ ಬಹುಪಾಲು ಶಿಕ್ಷಕರು ಆರ್ಥಿಕವಾಗಿ ಹಿಂದುಳಿದವರಾಗಿದ್ದಾರೆ. ಆದ್ದರಿಂದ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ರಾಜ್ಯದ ಎಲ್ಲಾ ಅತಿಥಿ ಶಿಕ್ಷಕರುಗಳ ಸೇವೆಯನ್ನು ಪರಿಗಣಿಸಿ ಖಾಯಂಗೊಳಿಸಬೇಕಾಗಿ ಸಂಘದ ವತಿಯಿಂದ ಕಳಕಳಿಯ ಮನವಿ.

5) ದಸರಾ ರಜೆ ಮತ್ತು ಬೇಸಿಗೆಯ ರಜೆ ಅವಧಿಯಲ್ಲಿಯೂ ಅತಿಥಿ ಶಿಕ್ಷಕರುಗಳಿಗೆ ಪೂರ್ಣವೇತನ ನೀಡಬೇಕು.

6) ಅತಿಥಿ ಶಿಕ್ಷಕರನ್ನು ಖಾಯಂಗೊಳಿಸುವವರೆಗೂ ಕೇಂದ್ರ ಸರ್ಕಾರದ ಆದೇಶದಂತೆ ಕನಿಷ್ಠ ಮೂಲ ವೇತನ ಸೌಲಭ್ಯ, ಪಿ.ಎಫ್, ಇ.ಎಸ್.ಐ., ಇನ್ನಿತರೆ ಸೌಲಭ್ಯಗಳನ್ನು ನೀಡಬೇಕು.

ಈ ಮೇಲ್ಕಂಡ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ನಮ್ಮ ಸದರಿ ಸಂಘದ ವತಿಯಿಂದ ಬೇಡಿಕೆ ಈಡೇರುವವರೆಗೂ ಅನಿರ್ಧಿಷ್ಟಾವಧಿ ಕಾಲ ಹಮ್ಮಿಕೊಂಡಿರುವ ಈ ಮುಷ್ಕರಕ್ಕೆ ದಾವಣಗೆರೆ ಜಿಲ್ಲೆಯ ಹಾಗೂ ಒಟ್ಟಾರೆ ರಾಜ್ಯದ ಯಾವುದೇ ಸಂಘ ಸಂಸ್ಥೆಗಳು ಬೆಂಬಲ ನೀಡಿ ನೊಂದ ಅತಿಥಿ ಶಿಕ್ಷಕರುಗಳಿಗೆ ನ್ಯಾಯ ಸಿಗಲು ಸಹಕರಿಸಬೇಕಾಗಿ ಕರ್ನಾಟಕ ರಾಜ್ಯ ಕ್ರೈಸ್ ವಸತಿ ಶಾಲೆಗಳ ಅತಿಥಿ ಶಿಕ್ಷಕರ ಸಂಘ (ರಿ.) ರಾಜ್ಯ ಘಟಕ,
ದಾವಣಗೆರೆ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಪ್ರಕಟಣೆಯಲ್ಲಿ ಕೋರಿದ್ದಾರೆ.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.