ಕೆ.ಎನ್.ಪಿ.ವಾರ್ತೆ,ಧಾರವಾಡ,ಜೂ.29;
ಹುಟ್ಟುಹಬ್ಬ ಆಚರಿಸಿಕೊಂಡ ಚನ್ನವೀರ ಕಣವಿ ನಿವಾಸಕ್ಕೆ ತೆರಳಿ ಜಿಲ್ಲಾಧಿಕಾರಿ ಶುಭಕೋರಿದರು.
ನಿನ್ನೆ 91ನೇ ಹುಟ್ಟುಹಬ್ಬ ಆಚರಿಸಿಕೊಂಡ ಚೆಂಬೆಳಕಿನ ಕವಿ, ನಾಡೋಜ, ಡಾ. ಚನ್ನವೀರ ಕಣವಿ ಅವರ ಧಾರವಾಡ ಕಲ್ಯಾಣ ನಗರದ ಮನೆಗೆ ತೆರಳಿ ಜಿಲ್ಲಾಧಿಕಾರಿ ಡಾ. ಎಸ್.ಬಿ.ಬೊಮ್ಮನಹಳ್ಳಿ ಫಲ, ಪುಷ್ಪ ನೀಡಿ ಸತ್ಕರಿಸಿ ಶುಭಕೋರಿದರು.
ಇನ್ನೂ ಉತ್ತಮ ಆಯುರಾರೋಗ್ಯ ದೊರೆತು, ನಾಡು ನುಡಿಗೆ ತಮ್ಮ ಮಾರ್ಗದರ್ಶನ ಸಿಗಲಿ ಎಂದು ಹಾರೈಸಿದರು. ಉಪವಿಭಾಗಾಧಿಕಾರಿ ಮಹ್ಮದ್ ಜುಬೇರ್, ಪ್ರೊಬೆಷನರಿ ಎಸಿ ಜಿ.ಡಿ.ಶೇಖರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ರಂಗಣ್ಣವರ ಮತ್ತಿತರರು ಇದ್ದರು.
ಚನ್ನವೀರ ಕಣವಿ ಸಂಕ್ಷಿಪ್ತ ಪರಿಚಯ :
ಚನ್ನವೀರ ಕಣವಿಯವರು ಗದಗ ಜಿಲ್ಲೆಯ ಹೊಂಬಳ ಗ್ರಾಮದಲ್ಲಿ 1928 ರ ಜೂನ್ 28ರಂದು ಜನಿಸಿದರು. ತಂದೆ ಸಕ್ಕರೆಪ್ಪ ಮತ್ತು ತಾಯಿ ಪಾರ್ವತವ್ವ. ತಂದೆ ಸಕ್ಕರೆಪ್ಪ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಧಾರವಾಡದಲ್ಲಿಯೆ ಮಾಧ್ಯಮಿಕ ಹಾಗು ಕಾಲೇಜು ಶಿಕ್ಷಣ ಪೂರೈಸಿ ಕಣವಿಯವರು 1952ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದು ಆಗ ತಾನೆ ಆರಂಭವಾಗಿದ್ದ ವಿಶ್ವವಿದ್ಯಾಲಯದ ಪ್ರಸಾರಾಂಗ ವಿಭಾಗದ ಕಾರ್ಯದರ್ಶಿಯಾದರು.
1956ರ ವೇಳೆಗೆ ಅದೇ ವಿಭಾಗದ ನಿರ್ದೇಶಕರಾಗಿ 1983 ರವರೆಗೆ ಸೇವೆ ಸಲ್ಲಿಸಿದರು. ಅವರ ಪತ್ನಿ ಶಾಂತಾದೇವಿ ಅವರು ಕೂಡ ಸಾಹಿತ್ಯ ಸಂಸ್ಕೃತಿಯ ಒಲವುಳ್ಳ ದೊಡ್ಡ ಮನೆತನದಿಂದ ಬಂದವರು.
ಚನ್ನವೀರ ಕಣವಿಯವರು ವಿಮರ್ಶೆಯನ್ನು ಬರೆದಿದ್ದರಾದರೂ ಪ್ರಧಾನವಾಗಿ ಅವರು ಕವಿ. ಚೆನ್ನವೀರ ಕಣವಿಯವರು ಕವಿಯಾಗಿ ಪ್ರಕಟವಾಗಿದ್ದು ನವೋದಯದ ‘ನಡುಹಗಲ’ ಕಾಲದಲ್ಲಿ. ಬೇಂದ್ರೆ, ಕುವೆಂಪು, ಪು.ತಿ.ನ, ಮಧುರಚೆನ್ನ ಮೊದಲಾದವರ ಕಾವ್ಯ ಹೊಸದಾಗಿ ಕಾವ್ಯ ರಚನೆಗೆ ತೊಡಗುವವರನ್ನು ಗಾಢವಾಗಿ ಪ್ರಭಾವಿಸುತ್ತಿದ್ದ ಕಾಲ ಅದು.
ಕಣವಿ ಅವರ ಪ್ರಾರಂಭದ ರಚನೆಗಳಲ್ಲಿ ಇಂಥ ಪ್ರಭಾವಗಳ ನೆಲೆಯನ್ನು ಗುರುತಿಸಬಹುದಾಗಿದ್ದು, ಅವರ ಕಾವ್ಯದಲ್ಲಿ ರಮ್ಯ ಮನೋಧರ್ಮ, ಆದರ್ಶಪ್ರಿಯತೆ, ವ್ಯಕ್ತಿತ್ವ ನಿರ್ಮಾಣದ ಹಂಬಲಗಳು ವಿಶೇಷವಾಗಿ ಕಂಡು ಬರುತ್ತವೆ. 1949ರಲ್ಲಿ ಪ್ರಕಟವಾದ ‘ಕಾವ್ಯಾಕ್ಷಿ’, 1950ರಲ್ಲಿ ಪ್ರಕಟವಾದ ‘ಭಾವಜೀವಿ’ ಸಂಗ್ರಹಗಳಲ್ಲಿ ಈ ಎಲ್ಲ ಅಂಶಗಳನ್ನೂ ಗುರುತಿಸಬಹುದು.
ಕಾವ್ಯಸಂಕಲನ : ಕಾವ್ಯಾಕ್ಷಿ, ಭಾವಜೀವಿ, ಆಕಾಶಬುಟ್ಟಿ, ಮಧುಚಂದ್ರ, ಮಣ್ಣಿನ ಮೆರವಣಿಗೆ, ದೀಪಧಾರಿ, ನೆಲ ಮುಗಿಲು, ಎರಡು ದಡ, ನಗರದಲ್ಲಿ ನೆರಳು, ಜೀವಧ್ವನಿ, ಕಾರ್ತೀಕದ ಮೋಡ, ಜೀನಿಯಾ, ಹೊಂಬೆಳಕು, ಶಿಶಿರದಲ್ಲಿ ಬಂದ ಸ್ನೇಹಿತ, ಚಿರಂತನ ದಾಹ(ಆಯ್ದ ಕವನಗಳು), ಹೂವು ಹೊರಳುವವು ಸೂರ್ಯನ ಕಡೆಗೆ
ವಿಮರ್ಶಾಲೇಖನಗಳು ಹಾಗೂ ಪ್ರಬಂಧ ಸಂಕಲನಗಳು : ಸಾಹಿತ್ಯಚಿಂತನ, ಕಾವ್ಯಾನುಸಂಧಾನ, ಸಮಾಹಿತ, ಮಧುರಚೆನ್ನ, ಸಮತೋಲನ
ಮಕ್ಕಳ ಕವಿತೆ : ಹಕ್ಕಿ ಪುಕ್ಕ, ಚಿಣ್ಣರ ಲೋಕವ ತೆರೆಯೋಣ
ಸಂಪಾದನೆ : ಕನ್ನಡದ ಕಾಲು ಶತಮಾನ, ಸಿದ್ಧಿ ವಿನಾಯಕ ಮೋದಕ, ಕವಿತೆಗಳು
ಸಂಪಾದನೆ (ಇತರರೊಂದಿಗೆ) : ನವಿಲೂರು ಮನೆಯಿಂದ, ನವ್ಯಧ್ವನಿ, ನೈವೇದ್ಯ, ನಮ್ಮೆಲ್ಲರ ನೆಹರೂ, ಜೀವನ ಸಿದ್ಧಿ, ಆಧುನಿಕ ಕನ್ನಡ ಕಾವ್ಯ, ಸುವರ್ಣ ಸಂಪುಟ, ರತ್ನ ಸಂಪುಟ, ಬಾಬಾ ಫರೀದ
ಪ್ರಶಸ್ತಿ ಪುರಸ್ಕಾರಗಳು :
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಪಂಪ ಪ್ರಶಸ್ತಿ, ಬಸವ ಗುರು ಕಾರುಣ್ಯ ಪ್ರಶಸ್ತಿ,
ನಾಡೋಜ ಪ್ರಶಸ್ತಿ, ಕರ್ನಾಟಕ ಕವಿರತ್ನ ಪ್ರಶಸ್ತಿ, ನಾಡೋಜ ಮತ್ತು ಪಂಪ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳು ಕಣವಿಯವರ ಸಾಧನೆಗೆ ಸಿಕ್ಕ ಗೌರವಗಳು.
ವರದಿ : ಚಂದ್ರು ಹಿರೇಮಠ ಧಾರವಾಡ
ನೀವು ಕೂಡ ಬರೆಯಬಹುದು :
ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.
ಈ-ವಿಳಾಸ : karnatakanewsportal@gmail.com
ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.