ಕೆ.ಎನ್.ಪಿ.ವಾರ್ತೆ,ಬೆಳಗಾವಿ/ರಾಯಚೂರು,ಆ.04;

ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಉತ್ತರ ಕರ್ನಾಟಕದ ಬೆಳಗಾವಿ, ಬಾಗಲಕೋಟೆ, ವಿಜಯಪುರ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಭೀಕರ ಪ್ರವಾಹದ ಭೀತಿ ಎದುರಾಗಿದ್ದು, ಮಾಲ್ವಾಡ ಗ್ರಾಮದ 13 ಕುಟುಂಬಗಳನ್ನು ರಕ್ಷಿಸಲಾಗಿದೆ. ಕಳೆದ ಮೂರು ದಿನಗಳಲ್ಲಿ 40 ಹಳ್ಳಿಗಳು ಜಲಾವೃತವಾಗಿದ್ದು, ಸರ್ಕಾರದ ವತಿಯಿಂದ ರಕ್ಷಣಾ ಕಾರ್ಯ ಸಮರೋಪಾದಿಯಲ್ಲಿ ಸಾಗಿದೆ.

ಬೆಳಗಾವಿ, ಚಿಕ್ಕೋಡಿ, ವಿಜಯಪುರ, ಬಾಗಲಕೋಟೆ, ರಾಯಚೂರಿನಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಇಲ್ಲಿನ ಜಮೀನುಗಳು ಜಲಾವೃತವಾಗಿವೆ. ಸೇತುವೆಗಳು ಮುಳುಗಡೆಯಾಗಿ ರಸ್ತೆ ಸಂಪರ್ಕ ಕಡಿತಗೊಂಡಿದೆ.

ಬಾಗಲಕೋಟೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಘಟಪ್ರಭಾ ನದಿ ಉಕ್ಕಿ ಹರಿಯುತ್ತಿದೆ. ಮುಧೋಳ ತಾಲೂಕಿನ ಮಾಚಕನೂರು ಗ್ರಾಮದ ಹೊಳೆಬಸವೇಶ್ವರ ದೇವಸ್ಥಾನ ಜಲಾವೃತವಾಗಿದೆ. ವಿಜಯಪುರ ಜಿಲ್ಲೆಯ ಹಲವು ಗ್ರಾಮಗಳ ಜಮೀನಿಗೆ ನೀರು ನುಗ್ಗಿದೆ. ಅಪಾರ ಪ್ರಮಾಣದ ತೊಗರಿ, ಸಜ್ಜೆ, ಕಬ್ಬು ಬೆಳೆ ನಾಶವಾಗಿದೆ.

ಕೃಷ್ಣಾ ನದಿ ಉಕ್ಕಿ ಹರಿಯುತ್ತಿರುವುದರಿಂದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಳ್ಳಿಗಳು ಜಲಾವೃತವಾಗಿವೆ. ಕೃಷ್ಣಾ ನದಿ ಪಾತ್ರದ ಎಲ್ಲ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮಾದರಗದ್ದಿ ಜಲಾವೃತವಾಗಿದ್ದು, 13 ಕುಟುಂಬಗಳನ್ನು ರಕ್ಷಿಸಲಾಗಿದೆ.
ಸ್ಥಳಕ್ಕೆ ರಾಯಚೂರು ಉಪ ಆಯುಕ್ತ ಬಿ ಶರತ್ ಭೇಟಿ ನೀಡಿ, ಶಿಲಹಳ್ಳಿ ಸೇತುವೆ ಬಳಿ ಪೊಲೀಸರನ್ನು ನಿಯೋಜಿಸಲು ಸೂಚಿಸಿದ್ದು, ರಕ್ಷಣಾ ಕಾರ್ಯಕ್ಕೆ ರಬ್ಬರ್ ದೋಣಿಗಳನ್ನು ಬಳಸುವಂತೆ ನಿರ್ದೇಶಿಸಿದ್ದಾರೆ.

ನೆರೆಯ ಕೊಯ್ನಾ, ವರುಣಾ ಸೇರಿದಂತೆ ಕೆಲವು ಜಲಾಶಯಗಳು ಬಹುತೇಕ ತುಂಬಿದ್ದು, ಇದರಿಂದ ಕೃಷ್ಣಾ ಕೊಳ್ಳದಲ್ಲಿ ನೀರಿನ ಹರಿವು ಹೆಚ್ಚಾಗಿದೆ. 519.60 ಮೀ.ಎತ್ತರದ ಆಲಮಟ್ಟಿ ಜಲಾಶಯ ಮೈದುಂಬಲು ಕೇವಲ 25 ಸೆಂಟಿ ಮೀಟರ್ ಮಾತ್ರ ಬಾಕಿ ಇದೆ. ಈಗಾಗಲೇ ಸುಮಾರು ಎರಡು ಲಕ್ಷ ಕ್ಯೂಸೆಕ್ಸ್‌ ನೀರು ನಾರಾಯಣಪುರ ಬ್ಯಾರೇಜ್‌ಗೆ ಹರಿಬಿಡಲಾಗುತ್ತಿದ್ದು, ರಾಯಚೂರು, ಯಾದಗಿರಿ ಪ್ರದೇಶಗಳಲ್ಲೂ ಪ್ರವಾಹದ ಭೀತಿ ಉಂಟಾಗಿದೆ.

ಯಾದಗರಿಯಲ್ಲಿ ಛಾಯಾ ಭಗವತಿ, ದಂಡಗುಂಡ ಬಸವೇಶ ದೇವಾಲಯ ಸೇರಿದಂತೆ ಹಲವು ದೇವಸ್ಥಾನಗಳು ಮುಳುಗಡೆಯಾಗಿವೆ. ನಾರಾಯಣಪುರ ಜಲಾಶಯದ ಹಿನ್ನೀರಿನ 500 ಎಕರೆಯಲ್ಲಿ ಬೆಳೆಯಲಾಗಿದ್ದ ಬೆಳೆಗಳು ಕೊಚ್ಚಿಹೋಗಿವೆ. ಗದ್ದಿಯ ನೀಲಕಂಠರಾಯನ ಗದ್ದಿಗೆ ಸಂಪರ್ಕ ಕಲ್ಪಿಸಿ, ನಿವಾಸಿಗಳನ್ನು ರಕ್ಷಿಸುವ ಸಲುವಾಗಿ ಕೃಷ್ಣ ನದಿಯ ಸುತ್ತ ಕಾಲ್ಸೇತುವೆ ನಿರ್ಮಿಸಲಾಗಿದೆ.

ನಾಳೆ ವೈಮಾನಿಕ ಸಮೀಕ್ಷೆ

ಪ್ರವಾಹ ಸ್ಥಿತಿ ತಲೆದೋರಿರುವ ಪ್ರದೇಶಗಳಲ್ಲಿ ನಾಳೆ ಬೆಳಗ್ಗೆ ಸಿಎಂ ಬಿ.ಎಸ್​. ಯಡಿಯೂರಪ್ಪ ವೈಮಾನಿಕ ಸಮೀಕ್ಷೆ ನಡೆಸಲಿದ್ಧಾರೆ. ಬೆಂಗಳೂರಿನ ಜಿಂದಾಲ್ ಸಂಸ್ಥೆಯ ಹೆಲಿಕ್ಯಾಪ್ಟರ್ ಮೂಲಕ ಬಿಎಸ್​ವೈ ರಾಯಚೂರು, ಯಾದಗಿರಿ, ಬಾಗಲಕೋಟೆ ಮತ್ತು ಬಿಜಾಪುರದಲ್ಲಿ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ.

http://karnatakanewsportal.com/utharakarnatakadalli-bharimalle-pravaha-bheethi-krushna-nadi-theerada-janara-stallanthara/

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.