ಕೆ.ಎನ್.ಪಿ.ವಾರ್ತೆ,ನವದೆಹಲಿ,ಅ.21;

ಬ್ಯಾಂಕು ವಿಲೀನ, ಠೇವಣಿ ದರ ಇಳಿಕೆ ವಿರೋಧಿಸಿ ಮತ್ತು ಉದ್ಯೋಗ ಭದ್ರತೆಗೆ ಕರೆ ನೀಡಿ ಬ್ಯಾಂಕು ಒಕ್ಕೂಟಗಳು ಇದೇ 22ರಂದು ಮುಷ್ಕರ ನಡೆಸಲು ಸಜ್ಜಾಗಿರುವುದರಿಂದ ಬ್ಯಾಂಕಿಂಗ್ ಸೇವೆಗಳಲ್ಲಿ ನಾಳೆ ವ್ಯತ್ಯಯವಾಗುವ ಸಾಧ್ಯತೆಯಿದೆ.

ಅಖಿಲ ಭಾರತ ಬ್ಯಾಂಕು ಉದ್ಯೋಗಿಗಳ ಸಂಘ ಮತ್ತು ಭಾರತೀಯ ಬ್ಯಾಂಕು ಉದ್ಯೋಗಿಗಳ ಫೆಡರೇಶನ್ (ಬಿಇಎಫ್ಐ), ಭಾರತೀಯ ಬ್ಯಾಂಕು ಅಸೋಸಿಯೇಷನ್ ಗೆ ಮಾಹಿತಿ ನೀಡಿ ಅಕ್ಟೋಬರ್ 22ರಂದು ಬೆಳಗ್ಗೆ 6 ಗಂಟೆಯಿಂದ ಮರುದಿನ ಬೆಳಗ್ಗೆ 6 ಗಂಟೆಯವರೆಗೆ ಮುಷ್ಕರ ನಡೆಸುವುದಾಗಿ ಹೇಳಿದೆ.

ಮುಷ್ಕರದಲ್ಲಿ ನಿರತವಾಗುವ ಸಂಘಟನೆಗಳಿಗೆ ತಮ್ಮ ಬ್ಯಾಂಕಿನ ಬಹುತೇಕ ನೌಕರರು ಸದಸ್ಯರಾಗಿಲ್ಲದಿರುವುದರಿಂದ ಇದರ ಪರಿಣಾಮ ಕಡಿಮೆಯಿರಬಹುದು ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ. ಬ್ಯಾಂಕ್ ಆಫ್ ಮಹಾರಾಷ್ಟ್ರ ಮತ್ತು ಸಿಂಡಿಕೇಟ್ ಬ್ಯಾಂಕುಗಳು ಗ್ರಾಹಕರಿಗೆ ಸೇವೆ ಒದಗಿಸುವಲ್ಲಿ ವ್ಯತ್ಯಯವಾಗಲಿದೆ ಎಂದು ಹೇಳಿದೆ.

ದೇಶದ 10 ಪ್ರಮುಖ ಬ್ಯಾಂಕ್ ಗಳನ್ನು ವಿಲೀನ ಪ್ರಕ್ರಿಯೆಗೆ ಒಳಪಡಿಸಲಾಗುತ್ತಿದ್ದು, ನಾಲ್ಕು ಬ್ಯಾಂಕ್ ಗಳಾಗಲಿವೆ. ಈ ವಿಲೀನ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆ ದೇಶದಲ್ಲಿ 12 ಸಾರ್ವಜನಿಕ ವಲಯದ ಬ್ಯಾಂಕ್ ಗಳು ಮಾತ್ರ ಕಾರ್ಯನಿರ್ವಹಿಸಲಿವೆ. 2017ರಲ್ಲಿ 27 ಸಾರ್ವಜನಿಕ ವಲಯ ಬ್ಯಾಂಕ್ ಗಳಿದ್ದವು.

ಸೆಪ್ಟೆಂಬರ್ ತಿಂಗಳ ಅಂತ್ಯದಲ್ಲಿ ಮುಷ್ಕರ ನಡೆಯುವ ಸಾಧ್ಯತೆಯಿತ್ತು. ಆದರೆ ಕೇಂದ್ರ ಹಣಕಾಸು ಕಾರ್ಯದರ್ಶಿ ರಾಜೀವ್ ಕುಮಾರ್ ಅವರು ನೀಡಿದ ಭರವಸೆ ಮೇರೆಗೆ ಎರಡು ದಿನಗಳ ಬಂದ್ ಮುಂದೂಡಲಾಗಿತ್ತು.

ಆದರೆ, ಈಗ ಅಕ್ಟೋಬರ್ 22ರಂದು ಮುಷ್ಕರಕ್ಕೆ ಮತ್ತೊಮ್ಮೆ ಕರೆ ನೀಡಲಾಗಿದೆ. ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಸಂಘಟನೆ, ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ, ಬ್ಯಾಂಕ್ ಅಧಿಕಾರಿಗಳ ರಾಷ್ಟ್ರೀಯ ಸಂಘಟನೆ ವತಿಯಿಂದ ಮುಷ್ಕರಕ್ಕೆ ಕರೆ ನೀಡಲಾಗಿದೆ.

ಕೇಂದ್ರ ಸರ್ಕಾರವು ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ನವೆಂಬರ್ ಎರಡನೇ ವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದು ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಸಂಘಟನೆಯ ಪ್ರಧಾನ ಕಾರ್ಯದರ್ಶಿ ದೀಪಲ್ ಕುಮಾರ್ ಶರ್ಮಾ ಘೋಷಿಸಿದ್ದಾರೆ.

ಈ ಹಿಂದೆ ಬ್ಯಾಂಕ್ ಆಫ್ ಬರೋಡಾ, ವಿಜಯ ಬ್ಯಾಂಕ್ ಹಾಗೂ ದೇನಾ ಬ್ಯಾಂಕ್ ವಿಲೀನವಾಗಿದ್ದು, ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ವಿಲೀನದ ಬಳಿಕ ಸಿಬ್ಬಂದಿಗಳನ್ನು ಕೆಲಸದಿಂದ ತೆಗೆದು ಹಾಕಿಲ್ಲ, ಹೀಗಾಗಿ, ಈಗ 10 ಬ್ಯಾಂಕ್ ವಿಲೀನದ ಬಳಿಕ ಹೊರ ಹೊಮ್ಮುವ 4 ಬ್ಯಾಂಕ್ ಗಳ ಉದ್ಯೋಗಿಗಳು ಸೇರಿದಂತೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಕಡಿತದ ಭೀತಿ ಬೇಡ” ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.