ಅಯೋಧ್ಯೆ ದಶಕಗಳ ಕಾಲದ ರಾಮಜನ್ಮಭೂಮಿ-ಬಾಬ್ರಿ ಮಸೀದಿ ವಿವಾದಕ್ಕೆ ಶನಿವಾರ ತೀರ್ಪು ಪ್ರಕಟಿಸಲಿರುವ ಸುಪ್ರೀಂ ಕೋರ್ಟ್ ನ ತೀರ್ಪಿನತ್ತ ಎಲ್ಲರ ಚಿತ್ತ ನೆಟ್ಟಿದೆ.

69 ವರ್ಷಗಳ ರಾಮಜನ್ಮಭೂಮಿ-ಬಾಬ್ರಿ ಮಸೀದಿ ಪ್ರಕರಣಕ್ಕೆ ಇಂದು ತೆರೆ ಬೀಳಲಿದೆ.

ಮುಖ್ಯ ನ್ಯಾಯಮೂರ್ತಿ ನ್ಯಾಯಾಧೀಶ ರಂಜನ್ ಗೊಗೊಯ್ ಮತ್ತು ಎಸ್ ಎ ಬೊಬ್ಡೆ ಅವರನ್ನೊಳಗೊಂಡ ಸಾಂವಿಧಾನಿಕ ಪೀಠ ಇಂದು ಬೆಳಗ್ಗೆ 10.30ಕ್ಕೆ ತೀರ್ಪು ಪ್ರಕಟಿಸಲಿದೆ.

1992ರ ಡಿಸೆಂಬರ್‌ 6 ದೇಶದ ಇತಿಹಾಸದಲ್ಲಿ ಮಹತ್ವದ ದಿನ.

ಅಂದು ಉತ್ತರಪ್ರದೇಶದ ಅಯೋಧ್ಯೆಯಲ್ಲಿ ವಿವಾದಿತ ರಾಮ ಜನ್ಮಭೂಮಿ ಪ್ರದೇಶದಲ್ಲಿದ್ದ ಬಾಬರಿ ನಿರ್ಮಿತ ಮಸೀದಿಯನ್ನು ಕರಸೇವಕರು ಧ್ವಂಸಗೊಳಿಸಿದರು. ಈ ಹಿನ್ನೆಲೆಯಲ್ಲಿ ದೇಶದ ಎಲ್ಲೆಡೆ ಕೋಮು ವಿದ್ವೇಷ ಭುಗಿಲೆದ್ದು ಹೊಗೆಯಾಡಿತು.

ಮುಂಬಯಿ ಬಾಂಬ್‌ ಸ್ಫೋಟ, ಗೋಧ್ರಾ ದಹನ, ಗುಜರಾತ್‌ ಗಲಭೆಗಳು ನಡೆದವು. ಈ ಪ್ರಕರಣವೇ ಮುಂದೆ ದೇಶದ ರಾಜಕಾರಣದ ಸ್ಪಷ್ಟ ಧ್ರುವೀಕರಣಕ್ಕೆ ನಾಂದಿಯಾಯಿತು. ‘ಸೆಕ್ಯುಲರ್‌’ ಹಾಗೂ ‘ಬಲಪಂಥೀಯ’ ಬಣಗಳ ರಾಜಕಾರಣಕ್ಕೆ ಸ್ಪಷ್ಟ ಚಹರೆಗಳು ದೊರೆತವು.

ಏನಿದು ರಾಮಜನ್ಮಭೂಮಿ?

ಅಯೋಧ್ಯೆ ವಿವಾದದ ಕೇಂದ್ರ ಬಿಂದುವೇ ರಾಮಜನ್ಮಭೂಮಿ. ಬಹುಜನರ ಆರಾಧ್ಯದೈವ ರಾಮನ ಜನ್ಮಸ್ಥಳವೇ ರಾಮಜನ್ಮಭೂಮಿ.

ಹಿಂದೂ ಪುರಾಣದ ಪ್ರಕಾರ ರಾಮ ದೇವರು ಸರಯೂ ನದಿ ತೀರದಲ್ಲಿರುವ ಅಯೋಧ್ಯೆ ಪಟ್ಟಣದಲ್ಲಿ ಜನಿಸಿದ್ದ ಎಂದು ಹೇಳುತ್ತದೆ. ಅಯೋಧ್ಯೆ ಇರುವುದು ಉತ್ತರ ಪ್ರದೇಶ ರಾಜ್ಯದ ಫೈಜಾಬಾದ್ ಜಿಲ್ಲೆಯಲ್ಲಿ. 

ಗರುಡ ಪುರಾಣ ಪ್ರಕಾರ, ದೇಶದಲ್ಲಿರುವ ಹಿಂದೂಗಳ ಏಳು ಪ್ರಮುಖ ಪವಿತ್ರ ಕ್ಷೇತ್ರಗಳ ಪೈಕಿ ಅಯೋಧ್ಯೆಯೂ ಒಂದು.

ಹುಟ್ಟು ಮತ್ತು ಸಾವುಗಳಿಂದ ಬಿಡುಗಡೆ ಹೊಂದಿ ಮೋಕ್ಷ ಸಂಪಾದಿಸುವುದು ಮತ್ತು ಪುನರ್ಜನ್ಮ ಪಡೆಯುವುದು ಈ ಕ್ಷೇತ್ರದ ಮಹಿಮೆಯಾಗಿದೆ.

ಹಿಂದೂಗಳ ನಂಬಿಕೆ ಪ್ರಕಾರ ರಾಮನ ಜನ್ಮಸ್ಥಳದಲ್ಲಿ ದೇವಸ್ಥಾನವೊಂದನ್ನು ನಿರ್ಮಾಣ ಮಾಡಲಾಗಿತ್ತು. 

ಆದರೆ, 1525ರಲ್ಲಿ ಮೊಘಲ್‌ ದೊರೆ ಬಾಬರ್‌ ಭಾರತದ ಮೇಲೆ ದಾಳಿ ಮಾಡಿ ಉತ್ತರ ಭಾರತವನ್ನು ತನ್ನ ಅಧೀನಕ್ಕೆ ಪಡೆದುಕೊಂಡಿದ್ದ.

ಬಾಬರ್‌ನ ಜನರಲ್‌ ಮಿರ್‌ ಬಾಖಿ 1528ರಲ್ಲಿ ಅಯೋಧ್ಯೆಗೆ ಆಗಮಿಸಿ, ಅಯೋಧ್ಯೆಯಲ್ಲಿದ್ದ ರಾಮ ದೇಗುಲವನ್ನು ಧ್ವಂಸ ಮಾಡಿ ಅಲ್ಲಿ ಮಸೀದಿ ನಿರ್ಮಾಣ ಮಾಡಿದ್ದ ಎಂದು ಹೇಳಲಾಗುತ್ತದೆ.

ಇದನ್ನೇ ಬಾಬ್ರಿ ಮಸೀದಿ ಎಂದು ಕರೆಯಲಾಗುತ್ತಿದ್ದು ಅದನ್ನು 1992ರ ಡಿಸೆಂಬರ್ 6ರಂದು ಕರಸೇವಕರು ಹೋಗಿ ಕೆಡವಿ ಹಾಕಿದರು. ಮಸೀದಿ ಇದ್ದ 2.77 ಎಕರೆ ಭೂಮಿ ಇಷ್ಟು ವರ್ಷಗಳ ಕಾಲ ವಿವಾದದ ಕೇಂದ್ರಬಿಂದುವಾಗಿತ್ತು. 

ಈ ಕಾರಣದಿಂದಲೇ ಅಯೋಧ್ಯೆ-ರಾಮಜನ್ಮಭೂಮಿ ವಿವಾದ ಹುಟ್ಟಿಕೊಂಡಿತ್ತು.

ಮುಂದೆ, ಈ ಮಸೀದಿ ಇದ್ದ ಜಾಗದಲ್ಲೇ ರಾಮ ಮಂದಿರ ನಿರ್ಮಾಣಕ್ಕೆ ಹಿಂದೂಗಳ ಒತ್ತಾಯ ಮಾಡಿದ್ದರು. ಇದೀಗ ಈ ವಿವಾದದ ಅಂತಿಮ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿದೆ.

ಬಾಬರಿ ಮಸೀದಿ ಧ್ವಂಸ: ಅಂದು ಏನೇನಾಯ್ತು?

1990ರಲ್ಲಿ ಒಮ್ಮೆ ಕರಸೇವೆ ನಡೆಸಲು ಸಂಘ ಪರಿವಾರ ಯತ್ನಿಸಿತು. ಅದು ಆಡ್ವಾಣಿಯವರ ರಥಯಾತ್ರೆ ಕೊನೆಗೊಳ್ಳುತ್ತಿದ್ದ ಹೊತ್ತು. ಆಗ ಸಾವಿರಾರು ಕರಸೇವಕರು ಬಾಬರಿ ಮಸೀದಿ ಸುತ್ತಮುತ್ತ ಜಮಾಯಿಸಿದ್ದರು.

28 ಸಾವಿರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಸುಮಾರು ಒಂದು ಸಾವಿರ ಮಂದಿ ಆವರಣ ಪ್ರವೇಶಿಸಿದರು. ಪರಿಸ್ಥಿತಿ ನಿಯಂತ್ರಿಸಲು ಭದ್ರತಾ ಪಡೆಗಳು ಗುಂಡು ಹಾರಿಸಿದವು. ಹೀಗಾಗಿ ಕರಸೇವೆಯನ್ನು 1992ರ ಜುಲೈಗೆ ಮುಂದೂಡಲು ನಿರ್ಧರಿಸಲಾಯಿತು.

1991ರ ಅಕ್ಟೋಬರ್‌ನಲ್ಲೂ ಕೆಲವು ಮಂದಿ ಕರಸೇವಕರು ಮಸೀದಿಯ ಗುಮ್ಮಟವನ್ನೇರಿದ್ದರು. ಅವರನ್ನು ತಕ್ಷ ಣ ಪತ್ತೆ ಹಚ್ಚಿ ಧ್ವಜ ಸಹಿತ ಅಲ್ಲಿಂದ ಕೆಳಗೆ ಇಳಿಸಲಾಯಿತು.

1992ರ ಡಿಸೆಂಬರ್‌ 2ರಂದು ಸುಮಾರು 60 ಸಾವಿರ ಕರಸೇವಕರು ಅಯೋಧ್ಯೆಯಲ್ಲಿ ಸೇರಿದರು. ಅಲ್ಲಿನ ಮಸೀದಿಗಳಿಗೆ ಕರಸೇವಕರು ಹಾನಿ ಮಾಡತೊಡಗಿದರು.

ಆದರೂ ಜನರನ್ನು ತಡೆಯಲು ರಾಜ್ಯದ ಬಿಜೆಪಿ ಸರಕಾರ ಮುಂದಾಗಲಿಲ್ಲ. ಇನ್ನಷ್ಟು ಹೆಚ್ಚಿನ ಪಡೆ ರವಾನಿಸಲು ಜಿಲ್ಲಾಡಳಿತ ಕೋರಿದರೂ ಸರಕಾರ ಅದನ್ನು ನಿರಾಕರಿಸಿತು.

ಡಿ.4ರಂದು ಸ್ಥಳದಲ್ಲಿದ್ದ ಕರಸೇವಕರ ಸಂಖ್ಯೆ 2 ಲಕ್ಷ ದಾಟಿತು. ಮಧ್ಯರಾತ್ರಿ ಎಲ್‌.ಕೆ.ಅಡ್ವಾಣಿ, ಮುರಳಿ ಮನೋಹರ ಜೋಷಿ ಅಯೋಧ್ಯೆ ತಲುಪಿದರು.

ಜಿಲ್ಲೆಯ ಅಧಿಕಾರಿಗಳು ಅವರನ್ನು ಭೇಟಿ ಮಾಡಿದಾಗ, ಶಾಂತಿಯುತ ಕರಸೇವೆ ನಡೆಸುವ ಭರವಸೆಯನ್ನು ನಾಯಕರು ನೀಡಿದರು. ಡಿ.6ರಂದು ಬೆಳಗ್ಗೆ 10.30ಕ್ಕೆ ಬಿಜೆಪಿ ಮತ್ತು ವಿಎಚ್‌ಪಿ ನಾಯಕರು ಪೂಜೆ ನಡೆಸಲು ಉದ್ದೇಶಿಸಿದ ವೇದಿಕೆಗೆ ಆಗಮಿಸಿದರು ಮತ್ತು ಸಾಂಕೇತಿಕ ಕರಸೇವೆ ನಡೆಸಿದರು.

ಅದೇ ವೇಳೆಗೆ ಆಡ್ವಾಣಿ, ಉಮಾಭಾರತಿ ಕರಸೇವಕರನ್ನು ಪ್ರಚೋದಿಸುವಂಥ ಭಾಷಣ ಮಾಡಿದರೆಂದು ನಂತರ ಈ ಕುರಿತು ತನಿಖೆ ನಡೆಸಿದ ಲಿಬರ್ಹಾನ್‌ ಆಯೋಗ ಹೇಳಿತು.

ಮಧ್ಯಾಹ್ನ 12.15ಕ್ಕೆ ಕರಸೇವಕನೊಬ್ಬ ಗುಮ್ಮಟದ ಮೇಲ್ಭಾಗಕ್ಕೆ ಹತ್ತಿ ಕೇಸರಿ ಧ್ವಜ ಹಾರಿಸಿದ.

ಆತನನ್ನು ಅನುಸರಿಸಿದ ಇತರರು ಕೈಯಲ್ಲಿ ಪಿಕ್ಕಾಸಿ, ಸುತ್ತಿಗೆ, ಕಬ್ಬಿಣದ ಸರಳುಗಳ ಮೂಲಕ ಗುಂಬಜ್‌ ಅನ್ನು ಒಡೆಯತೊಡಗಿದರು.

ಸಾವಿರಾರು ಕರಸೇವಕರು ಇದ್ದಕ್ಕಿದ್ದಂತೆ ಆವರಣದೊಳಕ್ಕೆ ನುಗ್ಗಿಬಿಟ್ಟರು. ಈ ಅಗಾಧ ಪ್ರಮಾಣದ ಜನಪ್ರವಾಹವನ್ನು ಎದುರಿಸಲಾಗದೆ ಕಡಿಮೆ ಸಂಖ್ಯೆಯಲ್ಲಿದ್ದ ಪೊಲೀಸರು ಅಸಹಾಯಕರಾದರು.

ಕರಸೇವಕರು ಗರ್ಭಗೃಹಕ್ಕೆ ತೆರಳಿ ಅಲ್ಲಿನ ವಿಗ್ರಹ ಮತ್ತು ಕಾಣಿಕೆ ಡಬ್ಬವನ್ನು ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ದರು. ಭದ್ರತಾ ಪಡೆಗಳು ಮೂಕಪ್ರೇಕ್ಷ ಕರಾಗಿ ಇದ್ದುದರಿಂದ ಕಟ್ಟಡವನ್ನು ಹಾನಿಗೆಡವಲು ಕರಸೇವಕರಿಗೆ ಸಾಕಷ್ಟು ಸಮಯ ಸಿಕ್ಕಿತು.

1.55ಕ್ಕೆ ಮೊದಲ ಗುಮ್ಮಟ ನೆಲಸಮವಾಯ್ತು. ಸಂಜೆಯ ಹೊತ್ತಿಗೆ ಇಡೀ ಕಟ್ಟಡ ನಾಶವಾಯ್ತು. 3.30ಕ್ಕೆ ಅಯೋಧ್ಯೆಯಲ್ಲಿ ಕೋಮು ಗಲಭೆ ಆರಂಭವಾಯಿತು. ಸಂಜೆ 6.45ಕ್ಕೆ ಮುಖ್ಯಮಂತ್ರಿ ಕಲ್ಯಾಣ್‌ ಸಿಂಗ್‌ ರಾಜೀನಾಮೆ ನೀಡಿದರು.

ಪ್ರಕರಣದಲ್ಲಿ ದಾವೆ ಹೂಡಿದವರು ಯಾರು?:

ಈ ಪ್ರಕರಣ ಮೂರು ಮುಖ್ಯ ಕಕ್ಷಿದಾರರಿದ್ದಾರೆ. ನಿರ್ಮೊಹಿ ಅಕರ(ದೇವಸ್ಥಾನದ ವ್ಯವಸ್ಥಾಪಕರು), ಉತ್ತರ ಪ್ರದೇಶ ಸುನ್ನಿ ವಕ್ಫ್ ಬೋರ್ಡ್(ಎಲ್ಲಾ ವಕ್ಫ್ ಗಳ ಆಡಳಿತಾಧಿಕಾರಿಗಳು) ಮತ್ತು ರಾಮ್ ಲಲ್ಲಾ. ರಾಮ್ ಲಲ್ಲಾ ಈ ಕೇಸಿನಲ್ಲಿ ಪ್ರವೇಶವಾಗಿದ್ದು 1980ರಲ್ಲಿ.

ಅದು ಅಲಹಾಬಾದ್ ಹೈಕೋರ್ಟ್ ನ ಮಾಜಿ ನ್ಯಾಯಮೂರ್ತಿ ಮತ್ತು ರಾಮ ದೇವರ ಪರಮ ಭಕ್ತರಾಗಿರುವ ದಿಯೊಕಿ ನಂದನ್ ಅಗರ್ವಾಲ್ ಮೂಲಕ.

ನಂತರ ಅಖಿಲ ಭಾರತ ಹಿಂದೂ ಮಹಾಸಭಾ ಮತ್ತು ಇಕ್ಬಾಲ್ ಅನ್ಸಾರಿಯಂತಹ ವ್ಯಕ್ತಿಗಳು ದಾವೆ ಹೂಡಿದ್ದರು.

ನ್ಯಾಯಾಲಯಕ್ಕೆ ಕೇಸು ಬಂದಿದ್ದು ಯಾವಾಗ, ಕೋರ್ಟ್ ನಲ್ಲಿ ಏನಾಯ್ತು:

1822ರಲ್ಲಿ ಫೈಜಾಬಾದ್ ಕೋರ್ಟ್ ನಲ್ಲಿ ಕೆಲಸ ಮಾಡುತ್ತಿದ್ದ ಓರ್ವ ಅಧಿಕಾರಿ ಮಸೀದಿಯ ಕೆಳಗೆ ರಾಮನ ದೇವಸ್ಥಾನವಿತ್ತು ಎಂದು ಕೇಸು ಹಾಕಿದ್ದರು. ಆದರೆ ಆ ಅರ್ಜಿ ಕೋರ್ಟ್ ನಲ್ಲಿ ವಜಾ ಆಯಿತು.

ನಂತರ 1949ರ ಡಿಸೆಂಬರ್ ನಲ್ಲಿ ಹಿಂದೂ ಕಾರ್ಯಕರ್ತರು ಮಸೀದಿ ಪ್ರವೇಶಿಸಿ ರಾಮನ ಮೂರ್ತಿಯನ್ನು ಇಟ್ಟರು.

ಆಗ ಗಲಾಟೆ, ಗದ್ದಲ ನಡೆಯಿತು. ಸರ್ಕಾರ ಕೋಮುಗಲಭೆಯನ್ನು ತಣ್ಣಗಾಗಿಸಲು ಮಸೀದಿಯನ್ನು ತನ್ನ ವಶಕ್ಕೆ ತೆಗೆದುಕೊಂಡಿತು.

ರಾಮನ ಮೂರ್ತಿಯನ್ನು ತೆಗೆಯಬೇಡಿ ಎಂದು ಕೋರ್ಟ್ ಆದೇಶ ಮಾಡಿತು. ಮಸೀದಿಯಾಗಿ ಬಳಸುವುದಕ್ಕೆ ಸಹ ತಡೆ ನೀಡಿತು.

ನಂತರದ ವರ್ಷಗಳಲ್ಲಿ ಈ ಜಾಗ ತಮಗೆ ಸೇರಿದ್ದು ಎಂದು ಹಿಂದೂ-ಮುಸ್ಲಿಂರಿಬ್ಬರೂ ಕೋರ್ಟ್ ನಲ್ಲಿ ದಾವೆ ಹೂಡುತ್ತಿದ್ದರು.
1986ರಲ್ಲಿ ಹಿಂದೂಗಳಿಗೆ ಅಲ್ಲಿ ಪೂಜೆ ಮಾಡಲು ಫೈಜಾಬಾದ್ ಕೋರ್ಟ್ ಅವಕಾಶ ಕಲ್ಪಿಸಿತು.

ಅಂದಿನ ರಾಜೀವ್ ಗಾಂಧಿ ಸರ್ಕಾರ ವಿಶ್ವ ಹಿಂದೂ ಪರಿಷತ್ ಗೆ ಬಾಬ್ರಿ ಮಸೀದಿ ಪಕ್ಕದಲ್ಲಿಯೇ ಶ್ರೀರಾಮನ ದೇವಾಲಯ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲು ಅವಕಾಶ ನೀಡಿತ್ತು.

1990-91ರಲ್ಲಿ ಬಿಜೆಪಿ ನಾಯಕ ಎಲ್ ಕೆ ಅಡ್ವಾಣಿ ರಾಮ ದೇವಾಲಯ ನಿರ್ಮಾಣಕ್ಕೆ ರಥ ಯಾತ್ರೆ ಆರಂಭಿಸಿದ್ದರು. ಈ ಸಂದರ್ಭದಲ್ಲಿ ಸಾವಿರಾರು ಕರಸೇವಕರು ಅಯೋಧ್ಯೆಯಲ್ಲಿ ಸೇರಿದ್ದರಿಂದ ಮತ್ತೆ ಹಿಂದೂ-ಮುಸ್ಲಿಂ ಗಲಾಟೆಯಾಯಿತು.

1992ರ ಡಿಸೆಂಬರ್ 6ರಂದು ಕರಸೇವಕರು ಬಾಬ್ರಿ ಮಸೀದಿಯನ್ನು ಧ್ವಂಸ ಮಾಡಿದರು. ಈ ಸಂದರ್ಭದಲ್ಲಿ ಭಾರೀ ಗಲಾಟೆಯಾಗಿತ್ತು. ನಂತರ ಕೋರ್ಟ್ ನಲ್ಲಿ ಪ್ರಕರಣ ಮುಂದುವರಿಯುತ್ತಿತ್ತು.

2010ರ ಸೆಪ್ಟೆಂಬರ್ ನಲ್ಲಿ ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪನ್ನು ವಿರೋಧಿಸಿ ಮೂವರು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಹಾಕಿದ್ದರು.

ವಿವಾದದ ಹೆಜ್ಜೆಗಳು

1853

ಅವಧ್‌ನ ನವಾಬ್‌ ವಜೀದ್‌ ಅಲಿ ಶಾ ಕಾಲಾವಧಿಯಲ್ಲಿ ರಾಮ ಜನ್ಮಭೂಮಿಗೆ ಸಂಬಂಧಿಸಿದಂತೆ ಮೊಟ್ಟ ಮೊದಲ ಬಾರಿಗೆ ಹಿಂಸಾತ್ಮಕ ಘಟನೆ ನಡೆಯಿತು. ಬಾಬರಿ ಮಸೀದಿ ನಿರ್ಮಾಣಕ್ಕಾಗಿ ರಾಮ ದೇಗುಲವನ್ನು ನಾಶಪಡಿಸಲಾಗಿದೆ ಎಂದು ನಿರ್ಮೋಹಿಗಳು ತಕರಾರು ತೆಗೆದರು.

1949

ಮಸೀದಿಯ ಒಳಗೆ ರಾಮನ ವಿಗ್ರಹ ಕಾಣಿಸಿಕೊಂಡಿತು. ಈ ವಿಗ್ರಹವನ್ನು ಹಿಂದೂ ಸಂಘಟನೆಗಳು ಪ್ರತಿಷ್ಠಾಪಿಸಿವೆ ಎಂದು ಆರೋಪಿಸಲಾಯಿತು. ಎರಡೂ ಕಡೆಯಿಂದಲೂ ಪ್ರಕರಣ ದಾಖಲಾಯಿತು. ಆಗ ಸರಕಾರ, ಇಡೀ ಪ್ರದೇಶ ವಿವಾದಿತ ಪ್ರದೇಶ ಎಂದು ಘೋಷಿಸಿ, ಮುಖ್ಯ ಪ್ರವೇಶದ್ವಾರಕ್ಕೆ ಬೀಗ ಜಡಿಯಿತು.

1950

ರಾಮ ಜನ್ಮಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಗೋಪಾಲ್‌ ಸಿಂಗ್‌ ವಿಶಾರದ ಮತ್ತು ಮಹಾಂತ ಪರಮಹಂಸ ರಾಮಚಂದ್ರ ದಾಸ್‌ ಅವರು ಫೈಜಾಬಾದ್‌ ಕೋರ್ಟ್‌ಗೆ ಅರ್ಜಿ ದಾಖಲಿಸಿದರು.

ಪೂಜೆಗೆ ಅವಕಾಶ ಕಲ್ಪಿಸಲಾಯಿತಾದರೂ ಒಳಗಿನ ಅಂಗಣಕ್ಕೆ ಮಾತ್ರ ಪ್ರವೇಶ ನೀಡಲಿಲ್ಲ.

1959

ನಿರ್ಮೋಹಿ ಅಖಾಡ ಮೂರನೇ ಪಾರ್ಟಿಯಾಗಿ ಅರ್ಜಿ ದಾಖಲಿಸಿ, ವಿವಾದಿತ ಪ್ರದೇಶವನ್ನು ತಮ್ಮ ವಶಕ್ಕೆ ನೀಡಬೇಕು ಮತ್ತು ರಾಮಜನ್ಮಭೂಮಿ ಪೋಷಕರೆಂದು ಗುರುತಿಸಿಬೇಕು ಎಂದು ಕೇಳಿಕೊಂಡಿತು.

1984

ರಾಮಜನ್ಮಭೂಮಿ ಸ್ಥಳದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಹಿಂದೂ ಸಂಘಟನೆಗಳು ಸಮಿತಿಯನ್ನು ರಚಿಸಿಕೊಂಡವು. ಆಗ ದೇಗುಲ ನಿರ್ಮಾಣ ಚಳವಳಿ ಆರಂಭವಾಯಿತು. ಈ ಚಳವಳಿಯ ನಾಯಕತ್ವವನ್ನು ಬಿಜೆಪಿಯ ನಾಯಕ ಎಲ್‌.ಕೆ.ಆಡ್ವಾಣಿ ಅವರು ವಹಿಸಿಕೊಂಡರು.

1989

ಬಾಬರಿ ಮಸೀದಿ ಪಕ್ಕದಲ್ಲೇ ರಾಮ ಮಂದಿರ ನಿರ್ಮಾಣಕ್ಕೆ ವಿಶ್ವ ಹಿಂದೂ ಪರಿಷತ್‌(ವಿಎಚ್‌ಪಿ) ಶಂಖು ಸ್ಥಾಪನೆ ನೆರವೇರಿಸಿತು. ಫೈಜಾಬಾದ್‌ ನ್ಯಾಯಾಲಯದಲ್ಲಿದ್ದ ನಾಲ್ಕು ಪ್ರಕರಣಗಳನ್ನು ಹೈಕೋರ್ಟ್‌ನ ವಿಶೇಷ ಪೀಠಕ್ಕೆ ವರ್ಗಾಯಿಸಲಾಯಿತು.

1990

ವಿಎಚ್‌ಪಿಯ ಸ್ವಯಂ ಸೇವಕರು ಮಸೀದಿಗೆ ಒಂದಿಷ್ಟು ಹಾನಿ ಮಾಡಿದರು. ಈ ವೇಳೆ ಮಧ್ಯಪ್ರವೇಶಿಸಿದ ಅಂದಿನ ಪ್ರಧಾನಿ ಚಂದ್ರಶೇಖರ್‌ ಅವರು, ಮಾತುಕತೆಯ ಮೂಲಕ ವಿವಾದವನ್ನು ಪರಿಹರಿಸಲು ಪ್ರಯತ್ನಿಸಿದರು.

ಆದರೆ, ಯಾವುದೇ ಫಲಿತಾಂಶ ದೊರೆಯಲಿಲ್ಲ. ಸೆಪ್ಟೆಂಬರ್‌ನಲ್ಲಿ ಆಡ್ವಾಣಿ ಅವರು ರಥಯಾತ್ರೆ ಆರಂಭಿದರು.

 

1992

ಡಿಸೆಂಬರ್‌ 6ರಂದು ಕರಸೇವಕರು ಬಾಬರಿ ಮಸೀದಿಯನ್ನು ನೆಲಸಮಗೊಳಿಸಿದರು. ದೇಶಾದ್ಯಂತ ಭೀಕರ ದಂಗೆಗಳು ನಡೆದವು. ಈ ವೇಳೆ 2000ಕ್ಕಿಂತಲೂ ಹೆಚ್ಚು ಜನರು ಪ್ರಾಣಕಳೆದುಕೊಂಡರು. ನ್ಯಾ. ಎಂ.ಎಸ್‌. ಲಿಬರ್ಹಾನ್‌ ನೇತೃತ್ವದಲ್ಲಿ ಡಿಸೆಂಬರ್‌ 16ರಂದು ಸಮಿತಿ ರಚಿಸಲಾಯಿತು.

2002

ಕರಸೇವಕರಿದ್ದ ರೈಲೊಂದು ಅಯೋಧ್ಯೆಯಿಂದ ಗುಜರಾತ್‌ಗೆ ಹೊರಟಿತ್ತು. ಈ ರೈಲಿಗೆ ಬೆಂಕಿ ಹಚ್ಚಲಾಯಿತು. ಈ ವೇಳೆ 58 ಜನರು ಸತ್ತರು. ಗುಜರಾತಿನಾದ್ಯಂತ ಹಿಂಸೆ ಭುಗಿಲೆದ್ದಿತು.

ಇದೇ ವೇಳೆ, ಹೈಕೋರ್ಟ್‌ ಭಾರತೀಯ ಪುರಾತತ್ವ ಇಲಾಖೆಗೆ ಆದೇಶ ನೀಡಿ, ವಿವಾದಿತ ಸ್ಥಳದಲ್ಲಿ ಮಂದಿರ ಇತ್ತೇ ಎಂದು ಅಧ್ಯಯನ ನಡೆಸುವಂತೆ ಸೂಚಿಸಿತು. ಹೈಕೋರ್ಟ್‌ನಿಂದ ವಿಚಾರಣೆ ಆರಂಭ.

2003

ವಿವಾದಿತ ಸ್ಥಳದಲ್ಲಿ ಮಂದಿರ ಇರುವ ಬಗ್ಗೆ ಎಎಸ್‌ಐ ಅಧ್ಯಯನ ಆರಂಭಿಸಿತು. ಮಸೀದಿ ಕೆಳಗೆ ಮಂದಿರ ಇರುವ ಬಗ್ಗೆ ಸಾಕ್ಷ್ಯಗಳನ್ನು ಕಲೆ ಹಾಕಿತು.

ಸೆಪ್ಟೆಂಬರ್‌ನಲ್ಲಿ ಕೋರ್ಟ್‌ ತೀರ್ಪು ನೀಡಿ, ಹಿಂಸೆ ಮತ್ತು ಮಸೀದಿ ನಾಶಕ್ಕೆ ಸಂಬಂಧಿಸಿದಂತೆ ಏಳು ಹಿಂದೂ ನಾಯಕರು ವಿಚಾರಣೆ ಎದುರಿಸಬೇಕು ಎಂದು ಹೇಳಿತು.

ಆದರೆ, ಅಂದಿನ ಉಪಪ್ರಧಾನಿ ಎಲ್‌.ಕೆ.ಆಡ್ವಾಣಿ ವಿರುದ್ಧ ಆಪಾದನೆಗಳನ್ನು ಕೈಬಿಟ್ಟಿತು. 

 

2005

ಶಂಕಿತ ಇಸ್ಲಾಮಿಕ್‌ ದಂಗೆಕೋರರು ವಿವಾದಿತ ಸ್ಥಳದ ಮೇಲೆ ದಾಳಿ ನಡೆಸಿದರು. ಈ ವೇಳೆ, ಭದ್ರತಾಪಡೆಗಳು ಆ ಐದು ಜನರನ್ನು ಕೊಂದು ಹಾಕಿದವು. ಮತ್ತೊಬ್ಬನ ಬಗ್ಗೆ ಇನ್ನು ಸುಳಿವು ಸಿಕ್ಕಿಲ್ಲ.

2009

ಬಾಬರಿ ಮಸೀದಿ ಧ್ವಂಸಕ್ಕೆ ಸಂಬಂಧಿಸಿದಂತೆ ಲಿಬರ್ಹಾನ್‌ ಆಯೋಗ ತನ್ನ ವರದಿಯನ್ನು ಸಂಸತ್ತಿಗೆ ಸಲ್ಲಿಸಿತು. ಈ ವರದಿಯಲ್ಲಿ ಬಿಜೆಪಿಯ ಪ್ರಮುಖ ನಾಯಕರ ವಿರುದ್ಧ ಆರೋಪ ಮಾಡಲಾಗಿದೆ ಎಂದು ಆರೋಪಿಸಿ ಸಂಸತ್ತಿನಲ್ಲಿ ಗದ್ದಲವೇ ಪ್ರಧಾನವಾಯಿತು.

2010

ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದಂತೆ ಅಲಹಾಬಾದ್‌ ಹೈಕೋರ್ಟ್‌ ತನ್ನ ತೀರ್ಪು ಪ್ರಕಟಿಸಿತು. ಈ ಐತಿಹಾಸಿಕ ತೀರ್ಪಿನಲ್ಲಿ ವಿವಾದಿತ ಪ್ರದೇಶವನ್ನು ಮೂರು ಭಾಗಗಳಾಗಿ ಮಾಡಲಾಯಿತು.

ಆದರೆ, ಹೈಕೋರ್ಟ್‌ನ ಈ ತೀರ್ಪು ಪ್ರಶ್ನಿಸಿ ಸುನ್ನಿ ವಕ್ಫ್ ಬೋರ್ಡ್‌ ಹಾಗೂ ಅಖಿಲ ಭಾರತೀಯ ಹಿಂದೂ ಮಹಾಸಭಾ ಸುಪ್ರೀಂ ಕೋರ್ಟ್‌ ಮೊರೆ ಹೋದವು.

2011

ವಿವಾದಿತ ಭೂಮಿಯನ್ನು ವಿಭಜಿಸಿ ಹೈಕೋರ್ಟ್‌ ನೀಡಿದ್ದ ತೀರ್ಪಿಗೆ ಸುಪ್ರೀಂ ಕೋರ್ಟ್‌ ತಡೆ ನೀಡಿ, ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವಂತೆ ಸೂಚಿಸಿತು.

2015

ರಾಮ ಮಂದಿರ ನಿರ್ಮಾಣಕ್ಕೆ ದೇಶಾದ್ಯಂತ ಕಲ್ಲು ಸಂಗ್ರಹ ಮಾಡುವ ಬಗ್ಗೆ ವಿಎಚ್‌ಪಿ ಘೋಷಣೆ ಮಾಡಿತು. ಇದಾದ ಆರು ತಿಂಗಳ ಬಳಿಕ ಅಂದರೆ, ಡಿಸೆಂಬರ್‌ನಲ್ಲಿ ಕಲ್ಲುಗಳು ತುಂಬಿದ್ದ ಎರಡು ಟ್ರಕ್‌ಗಳು ವಿವಾದಿತ ಪ್ರದೇಶಕ್ಕೆ ಬಂದವು.

ರಾಮ ಮಂದಿರ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಅಂದಿನ ಯುಪಿ ಸಿಎಂ ಅಖಿಲೇಶ್‌ ಸಿಂಗ್‌ ಯಾದವ್‌ ಹೇಳಿದರು.

2017

ಮಾರ್ಚ್‌: 1992ರ ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಆಡ್ವಾಣಿ ವಿರುದ್ಧ ಆರೋಪಗಳನ್ನು ಕೈಬಿಡಲಾಗದು ಎಂದು ಸುಪ್ರೀಂ ಕೋರ್ಟ್‌ ಹೇಳಿತು. ಅಲ್ಲದೆ ಈ ಪ್ರಕರಣವನ್ನು ಮರುಪರಿಶೀಲಿಸುವುದಾಗಿ ಹೇಳಿತು.

21, ಮಾರ್ಚ್‌ : ಇದು ಸೂಕ್ಷ್ಮ ವಿಷಯವಾಗಿದ್ದು ಕೋರ್ಟ್‌ ಹೊರಗಡೆ ವಿವಾದವನ್ನು ಬಗೆಹರಿಸಿಕೊಳ್ಳುವಂತೆ ಸುಪ್ರೀಂ ಕೋರ್ಟ್‌ ಹೇಳಿತು. ವಿವಾದಕ್ಕೆ ಸಂಬಂಧಿಸಿದ ವ್ಯಕ್ತಿಗಳು ಮಾತುಕತೆ ನಡೆಸಿ, ಪರಿಹಾರ ಕಂಡು ಕೊಳ್ಳುವಂತ ಸೂಚಿಸಿತು.

ಇಷ್ಟು ವರ್ಷಗಳ ಕಾಲ ವಾದ-ಪ್ರತಿವಾದ ವಿಚಾರಣೆ ನಡೆಯಿತು. ಕಳೆದ ಸೆಪ್ಟೆಂಬರ್-ಅಕ್ಟೋಬರ್ ತಿಂಗಳಲ್ಲಿ ಕೂಡ ಸುಪ್ರೀಂ ಕೋರ್ಟ್ ಪ್ರತಿದಿನವೆಂಬಂತೆ 40 ದಿನಗಳ ಕಾಲ ವಿಚಾರಣೆ ನಡೆಸಿ ನವೆಂಬರ್ 17ರೊಳಗೆ ತೀರ್ಪು ನೀಡುವುದಾಗಿ ಕಾಯ್ದಿರಿಸಿತ್ತು.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.
ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.