ಕೆ.ಎನ್.ಪಿ.ವಾರ್ತೆ,ಕಾರಟಗಿ,ಡಿ.25;

ಕಾರಟಗಿ ತಾಲೂಕಿನ ಮುಸ್ಟೂರು ವಲಯದ ಮುಸ್ಟೂರು ಕ್ಯಾಂಪ್-೦೨ ನೇ ಅಂಗನವಾಡಿ ಕೇಂದ್ರದ ಮಕ್ಕಳು ಭತ್ತದ ಸಸಿ ನಾಟಿ ಮಾಡುವ ಮೂಲಕ ಅರ್ಥಪೂರ್ಣವಾಗಿ ರೈತ ದಿನಾಚರಣೆಯನ್ನು ಆಚರಿಸಿದರು.

ಹಸಿದು ಉನ್ನುವುದು ಪ್ರಕೃತಿ, ಹಸಿಯದೇ ಉನ್ನುವುದು ವಿಕೃತಿ ತಾನು ಹಸಿದರೂ ಇತರರಿಗೆ ಉಣಬಡಿಸುವವನು ರೈತ. ಇಂತಹ ಶ್ರಮಜೀವಿ ಈ ನಾಡಿನ ಸ್ವಾಭಿಮಾನಿ.

ಇಂತಹ ರೈತನ ದಿನಾಚರಣೆ ಅಂಗವಾಗಿ ಅಂಗನವಾಡಿ ಮಕ್ಕಳು ರೈತರ ವೇಷ ಧರಿಸಿ, ಹೊಲದಲ್ಲಿ ಭತ್ತ ನಾಟಿ ಮಾಡುವ ಮೂಲಕ ರೈತ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿದರು.

ಅರ್ಥಪೂರ್ಣವಾಗಿ ರೈತ ದಿನಾಚರಣೆ ಆಚರಿಸಿದ ಮಕ್ಕಳು

ಈ ವೇಳೆ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಶಿವಲೀಲಾ ಹಿರೇಮಠ. ಹಾಗೂ ಸಹಾಯಕಿ ತುಳಸಮ್ಮ, ಮಕ್ಕಳು ಭಾಗಿಯಾಗಿದ್ದರು.

ರೈತ ದಿನಾಚರಣೆ ಬಗ್ಗೆ ನಿಮಗೆಷ್ಟು ಗೊತ್ತು?

ನಮ್ಮ ಶ್ರಮಜೀವಿ ರೈತರ ಪಾತ್ರದ ಗೌರವಾರ್ಥ ಭಾರತದ ಮಾಜಿ ಪ್ರಧಾನಿ ಅಪಾರ ರೈತಪರ ಕಳಕಳಿಯನ್ನು ಹೊಂದಿದ ಗೌರವಾನ್ವಿತ ಶ್ರೀ ಚೌದರಿ ಚರಣ್ ಸಿಂಗ್‍ರ ಜನ್ಮದಿನವಾದ ಡಿಸೆಂಬರ, 23 ನೇ ತಾರೀಖಿನಂದು ರಾಷ್ಟ್ರೀಯ ರೈತ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.

ಶ್ರೀ ಚೌದರಿ ಚರಣ್ ಸಿಂಗ್‍ರವರು ರೈತ ಕುಟುಂಬದಿಂದ ಬಂದವರಾಗಿದ್ದು, ಅತ್ಯಂತ ಸರಳ ಜೀವಿಗಳು, ಸೂಕ್ಷ್ಮ ಸಂವೇದಿಗಳು. ರೈತರ ಮತ್ತು ಕೂಲಿ ಕಾರ್ಮಿಕರ ಮೇಲೆ ತೀವ್ರತರ ಕಳಕಳಿಯನ್ನು ಹೊಂದಿದ್ದರು.

ಉತ್ತರ ಪ್ರದೇಶದ ಮುಖ್ಯಮಂತ್ರಿಗಳಾಗಿ, ಭಾರತದ ಪ್ರಧಾನಿ ಹಾಗೂ ಉಪ ಪ್ರಧಾನಿಯಾದಾಗ ಬಜೆಟ್‍ಗಳನ್ನು ಕೃಷಿಕರ ಪರವಾಗಿರುವಂತೆ ನೋಡಿಕೊಂಡರು. ರೈತರ ಪರವಾಗಿ ಹಲವಾರು ನೀತಿಗಳನ್ನು ತರುವಲ್ಲಿ ಯಶಸ್ವಿಯಾಗಿದ್ದರು.

ಇವರು ಜುಲೈ 28, 1979 ರಿಂದ ಜನೇವರಿ 14, 1980 ರವರೆಗೆ ಅಲ್ಪಾವಧಿಗೆ ಪ್ರಧಾನ ಮಂತ್ರಿಗಳಾಗಿ ಸೇವೆ ಸಲ್ಲಿಸಿದ್ದಾರೆ. 1979 ನೇ ಸಾಲಿನ ಬಜೇಟ್‍ನ್ನು ಮಂಡಿಸಿದ ಇವರು ರೈತರ ಅಗತ್ಯತೆಗಳನ್ನು ಪೂರೈಸಲು ಬೇಕಾದ ಎಲ್ಲ ಅಂಶಗಳನ್ನು ಬಜೆಟ್‍ನಲ್ಲಿ ಸೇರಿಸಿದ್ದರು.

ಇದರಲ್ಲಿ ರೈತ ಪರವಾದ ಹಲವಾರು ನೀತಿಗಳನ್ನು ಪ್ರಕಟಿಸಿದ್ದರು. ಇವರ ಪ್ರಯತ್ನಗಳಿಂದಾಗಿ ಎಲ್ಲ ಸಣ್ಣ ಮತ್ತು ಬಡ ರೈತರುಗಳನ್ನು ದೊಡ್ಡ ಭೂ ಮಾಲಿಕರು ಮತ್ತು ಹಣದಾಳದಾರರ ವಿರುದ್ಧ ಒಗ್ಗೂಡಿಸಲು ದೊಡ್ಡ ಶಕ್ತಿಯಾಗಿ ಕೆಲಸ ಮಾಡಿದರು.

ಇವರು ಲೋಕಸಭೆಯಲ್ಲಿ ಪರಿಚಯಿಸಿದ್ದ ಕೃಷಿ ಉತ್ಪಾದನೆ ಮಸೂದೆಯು ಅತ್ಯಂತ ಪ್ರಸಿದ್ಧ ಮಾರುಕಟ್ಟೆ ಮಸೂದೆಯಾಗಿತ್ತು.

ಈ ಮಸೂದೆಯನ್ನು ಹಣವುಳ್ಳ ವಿತರಕರು ಮತ್ತು ಭೂ ಮಾಲಿಕರು ರೈತರನ್ನು ಶೋಷಣೆ ಮಾಡುವುದರಿಂದ ತಡೆಯುವ ಉದ್ದೇಶದಿಂದ ಹೊರತರಲಾಗಿತ್ತು.

ಇವರು ಜಮೀನ್ದಾರಿ ನಿರ್ಮೂಲನಾ ನೀತಿ ಹೊರತರುವಲ್ಲಿ ಶ್ರಮಿಸಿ ಯಶಸ್ವಿಯಾಗಿದ್ದರು.

ಇದರಿಂದ ರೈತರ ಮೇಲಿನ ತಮ್ಮ ಕಳಕಳಿ ಅತ್ಯಂತ ಕಾಳಜಿಯುತವಾದದ್ದೆಂದು ತೋರಿಸಿಕೊಟ್ಟಿದ್ದರು.

ಇವರು ಉತ್ತಮ ವಾಗ್ಮಿಗಳಲ್ಲದೆ, ಒಳ್ಳೆಯ ಬರಹಗಾರರೂ ಆಗಿದ್ದರು. ಬರಹಗಾರರಾಗಿ ರೈತರ, ಬಡವರ ಸಮಸ್ಯೆಗಳ ಕುರಿತ ಆಲೋಚನೆಗಳನ್ನು ಚಿತ್ರಿಸುವ ಲೇಖನಗಳನ್ನು ಮತ್ತು ಪುಸ್ತಕಗಳನ್ನು ರಚಿಸಿದ್ದಲ್ಲದೆ, ಎಲ್ಲ ಸಮಸ್ಯೆಗಳಿಗೆ ಸಾಧ್ಯವಿರುವಂತಹ ವಿವಿಧ ಪರಿಹಾರಗಳನ್ನು ಸಹ ಕೊಡುತ್ತಿದ್ದರು.

ಇವರು ಮಾಜಿ ಪ್ರಧಾನಿ ಲಾಲ್ ಬಹದ್ದೂರ ಶಾಸ್ತ್ರಿಯವರ ಘೋಷಣೆಯಾದ “ಜೈ ಜವಾನ್ ಜೈ ಕಿಸಾನ್” ರೈತರ ಕ್ಷೇಮಕ್ಕಾಗಿ ಸದಾ ಶ್ರಮಿಸುತ್ತಿದ್ದರು.

ಹಳ್ಳಿಯ ರೈತಾಪಿ ಕುಟುಂಬದಲ್ಲಿ ಜನಿಸಿದ್ದರಿಂದ ಅಲ್ಲಿನ ಜನರ ಪರಿಸ್ಥಿತಿ ಮತ್ತು ಸಮಸ್ಯೆಗಳ ಆಳವಾದ ಅರಿವನ್ನು ಹೊಂದಿದ್ದರಿಂದ ಹಳ್ಳಿಗರು, ಹಿಂದುಳಿದವರ ಮತ್ತು ರೈತರ ಅಭಿವೃದ್ಧಿಗಾಗಿ ಸದಾ ಕಾರ್ಯಪ್ರವೃತ್ತರಾಗಿರುತ್ತಿದ್ದರು.

ಶೇ. 70 ಕ್ಕಿಂತ ಹೆಚ್ಚು ಜನ ಹಳ್ಳಿಯವರಿದ್ದು, ಅವರ ಕಸುಬು ವ್ಯವಸಾಯವಾಗಿರುತ್ತದೆ.

ರೈತರು ನಮ್ಮ ದೇಶದ ಬೆನ್ನೆಲುಬು ಹಾಗೂ ಹಳ್ಳಿಗಳ ಅಭಿವೃದ್ಧಿಯಿಂದಲೇ ದೇಶದ ಏಳಿಗೆ ಸಾಧ್ಯವೆಂದು ದೃಢವಾಗಿ ನಂಬಿದ್ದರು.

ಹೀಗಾಗಿ ಇವರನ್ನು ರೈತ ಸಮುದಾಯಕ್ಕೆ ಸೇರಿದ ಮಣ್ಣಿನ ಮಗನನ್ನಾಗಿ ಗುರುತಿಸಲ್ಪಡಲಾಗುತ್ತಿದೆ.

ಮೇ 29, 1987 ನೇ ದಿವಸದಂದು ಕೊನೆಯುಸಿರೆಳೆದರು. ಇವರ ಸಮಾಧಿ ಸ್ಥಳವನ್ನು “ಕಿಸಾನ್ ಘಾಟ್” ಎಂದು ನಾಮಕರಣ ಮಾಡಿ ರೈತ ಪರ ಕಾಳಜಿ ಹೊಂದಿದ ಇವರಿಗೆ ಗೌರವ ಸಲ್ಲಿಸಲಾಗಿದೆ.

ಶ್ರಮಜೀವಿ ರೈತರ ಗೌರವಾರ್ಥ ಮತ್ತು ಆಹಾರೋತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವಲ್ಲಿ ರೈತರ ಪಾತ್ರದ ಮಹತ್ವವನ್ನು ಸಾರುವ ಉದ್ದೇಶದಿಂದ ಪ್ರತಿ ವರ್ಷ ಡಿಸೆಂಬರ 23 ರಂದು ರಾಷ್ಟ್ರೀಯ ರೈತ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.

ವರದಿ : ಹನುಮೇಶ್ ಭಾವಿಕಟ್ಟಿ

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.