ಕೆ.ಎನ್.ಪಿ.ವಾರ್ತೆ,ಗಂಗಾವತಿ,ನ.12;

ರಾಜ್ಯದ ಹಲವೆಡೆಯ ಸಾಹಿತಿಗಳು, ಕಲಾವಿದರು, ಪ್ರಾಧ್ಯಾಪಕರು, ವೈದ್ಯರು, ಅಧಿಕಾರಿಗಳು, ವಿದ್ಯಾರ್ಥಿಗಳನ್ನು ಒಳಗೊಂಡ ಚಿಂತನಶೀಲ ಸಮಾಜಮುಖಿ ತಂಡ ಆನೆಗೊಂದಿ ಪರಿಸರದಲ್ಲಿ ಮೂರು ದಿನಗಳ ಕಾಲ ಚಾರಣ ಕೈಗೊಂಡಿತ್ತು.

ಪ್ರವಾಸಿಗರು ಕರ್ನಾಟಕವನ್ನು ನೋಡುವ ದೃಷ್ಟಿಕೋನವನ್ನೇ ಬದಲಾಯಿಸಬೇಕು ಎಂಬ ಮಹತ್ವಾಕಾಂಕ್ಷೆಯ ತಂಡ ಇದಾಗಿದ್ದು, ಬೆಂಗಳೂರಿನ ಸಮಾಜಮುಖಿ ಪ್ರಕಾಶನ ಈ ವಿಶಿಷ್ಟ ಕಾರ್ಯಕ್ರಮ ರೂಪಿಸಿದೆ.

ಆಯ್ದ ಪ್ರದೇಶದ ಜನಜೀವನ, ಕಲೆ, ಆಹಾರ, ಸಂಸ್ಕೃತಿ, ಭಾಷೆ, ಇತಿಹಾಸ, ಪರಿಸರ, ಸ್ಥಳೀಯ ಸಮಸ್ಯೆಗಳನ್ನು ನಡೆದಾಡಿ ತಿಳಿಯುವುದು, ಅನೌಪಚಾರಿಕವಾಗಿ ಅಧ್ಯಯನ ಮಾಡುವುದು ಈ ತಂಡದ ಉದ್ದೇಶವಾಗಿದೆ.

ಆನೆಗೊಂದಿ ಪರಿಸರದಲ್ಲಿ ಯಶಸ್ವಿಯಾಗಿ ನಡೆದ ಮೂರು ದಿನಗಳ ಸಮಾಜಮುಖಿ ನಡಿಗೆ

ಮೂರು ದಿನಗಳ ಚಾರಣದಲ್ಲಿ ಚಾರಣಿಗರು ಆನೆಗೊಂದಿ ಪರಿಸರದ ಕಿಷ್ಕಿಂಧ, ಅಂಜನಾದ್ರಿ ಪರ್ವತ, ಋಷಿಮುಖ ಪರ್ವತ, ಪಂಪಾ ಸರೋವರ, ಆನೆಗೊಂದಿ ಕೋಟೆ, ಬೆಣಕಲ್ ಮೊರೆರ ಬೆಟ್ಟ, ಜಬ್ಬಲಗುಡ್ಡದ ಕುಮಾರರಾಮನ ಕುಮ್ಮಟ ದುರ್ಗ, ಹಿರೇಹಳ್ಳ, ಇಟಗಿ ಮಹಾದೇವ ದೇವಾಲಯಗಳನ್ನು ವೀಕ್ಷಣೆ ಮಾಡಿದರು.

ಆನೆಗೊಂದಿ ಪರಿಸರದಲ್ಲಿ ಯಶಸ್ವಿಯಾಗಿ ನಡೆದ ಮೂರು ದಿನಗಳ ಸಮಾಜಮುಖಿ ನಡಿಗೆ

ಡಾ. ಶರಣಬಸಪ್ಪ ಕೋಲ್ಕರ್ ರವರು ಇತಿಹಾಸ ಉಣಬಡಿಸಿದರು, ಗಂಗಾವತಿ ಪ್ರಾಣೇಶ ಅವರನ್ನು ಮುಖಾಮುಖಿಯಾಗಿ ಖುಷಿಪಟ್ಟರು. ನೀಲಕಂಠೇಶ್ವರ ನಾಟ್ಯ ಸಂಘದ ಬಯಲಾಟ ವೀಕ್ಷಿಸಿದರು.

ಸಮಾಜಮುಖಿ ಪತ್ರಿಕೆಯ ಸಂಪಾದಕರಾದ ಚಂದ್ರಕಾಂತ ವಡ್ಡು ಅವರಿಗೆ ಹಾಗೂ ಅತ್ಯಂತ ಕಠಿಣ ಚಾರಣ ಸ್ಥಳಗಳಾದ ಬೆಣಕಲ್ ಬೆಟ್ಟ, ಕುಮ್ಮಟದುರ್ಗ ಬೆಟ್ಟಗಳನ್ನು ಉರಿ ಬಿಸಿಲಿನಲ್ಲಿಯೂ ಸುತ್ತಾಡಿದ 84 ವರ್ಷದ ಧಾರವಾಡದ ಶಿವಶಂಕರ ಹೀರೆಮಠ ಅವರಿಗೆ ಗಂಗಾವತಿ ಚಾರಣ ಬಳಗದಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.

ಆನೆಗೊಂದಿ ಪರಿಸರದಲ್ಲಿ ಯಶಸ್ವಿಯಾಗಿ ನಡೆದ ಮೂರು ದಿನಗಳ ಸಮಾಜಮುಖಿ ನಡಿಗೆ

ಚಾರಣದಲ್ಲಿ ಬೆಂಗಳೂರು ಆಕಾಶವಾಣಿಯ ಬಿ.ಕೆ. ಸುಮತಿ, ಶಶಿಧರ ಭಾರಿಘಾಟ್ ರಂಗ ನಿರ್ದೇಶಕರು, ಧಾರವಾಡದ ಭೂಸನೂರಮಠ ಸೇರಿದಂತೆ ಬೆಂಗಳೂರು, ಮೈಸೂರು ಹಾಗೂ ಇತರೆ ಭಾಗಗಳಿಂದ ಸಾಫ್ಟ್ ವೇರ್ ಔದ್ಯಮ ಸೇರಿದಂತೆ ಬೇರೆ ಬೇರೆ ರಂಗಗಳಲ್ಲಿ ಕೆಲಸ ಮಾಡುವ ಚಾರಣಿಗರು ಆಗಮಿಸಿದ್ದರು.

ಇವರಿಗೆ ಗಂಗಾವತಿ ಚಾರಣ ಬಳಗದ ಡಾ|| ಶಿವಕುಮಾರ ಮಾಲಿಪಾಟೀಲ್, ಡಾ. ಬದರಿಪ್ರಸಾದ್, ಮೈಲಾರಪ್ಪ ಬೂದಿಹಾಳ, ಪರಿಸರ ಟಿ.ವಿ ಸಂಪಾದಕರಾದ ಮಂಜುನಾಥ ಗುಡ್ಲಾನೂರು, ಡಾ|| ಅಮರ್ ಪಾಟೀಲ್ ಸೇರಿದಂತೆ ಇತರ ಚಾರಣ ಪ್ರೀಯರು ಸಾಥ್ ನೀಡಿದರು. ಹರನಾಯಕ್ ಹಾಗೂ ಪ್ರಮೋದ್ ಹಿರೇಮಠ ಕುಮ್ಮಟದುರ್ಗದ ಕೋಟೆಯ ಮೇಲೆ ಕನ್ನಡದ ಧ್ವಜ ಹಾರಿಸಿದರು.

ಆನೆಗೊಂದಿ ಪರಿಸರದಲ್ಲಿ ಯಶಸ್ವಿಯಾಗಿ ನಡೆದ ಮೂರು ದಿನಗಳ ಸಮಾಜಮುಖಿ ನಡಿಗೆ

ಚಾರಿಣಿಗರ ಅನಿಸಿಕೆ : ಡಾ.ವಿಜಯಲಕ್ಷ್ಮೀ, ಪ್ರಾಧ್ಯಾಪಕಿ, ಮಹಾರಾಜ ಕಾಲೇಜ್, ಮೈಸೂರು :

ಈ ಬಾರಿಯ ಸಮಾಜಮುಖಿ ನಡಿಗೆ ಶ್ರೀಮಂತ ಅನುಭವಗಳ ಆಗರ. ಇದು ಮಾದರಿ ನಡಿಗೆಗಳಲ್ಲಿ ಒಂದು. ಅತ್ಯುತ್ತಮ ಸಂಘಟನೆ, ಶಿಸ್ತುಬಧ್ಧ ನಿರ್ವಹಣೆ, ಸಮಯ ಪರಿಪಾಲನೆ, ಅನುಭವದ ವಿಸ್ತರಣೆ ಹೀಗೆ ಎಲ್ಲಾ ವಿಧದಲ್ಲೂ ಈವರೆಗಿನ ನಡಿಗೆಯನ್ನು ಮೀರಿಸಿದಂತಿತ್ತು.

ಹಿಂದೆಲ್ಲಾ ಹೊಸಪೇಟೆ ಸುತ್ತಮುತ್ತ ಪ್ರಯಾಣಿಸುವಾಗ ಈ ನೆಲವೇ ನಾನು ಎಂಬಂತೆ ಸಾರುವಂತಿದ್ದ ಕಲ್ಲು ಬಂಡೆಗಳ ಆ ಬೆಟ್ಟದ ಸಾಲು ನನಗೆ ತೀರದ ಬೆರಗು. ಅದರಾಚೆಗೆ ಏನಿರಬಹುದೆಂಬ ಅದಮ್ಯ ಕುತೂಹಲ.

ಈ ನಡಿಗೆಯಲ್ಲಿ ಅದೆಲ್ಲವು ಬಯಲಾಯಿತು. ಆ ಕಲ್ಲು ಬಂಡೆಗಳನ್ನು ಹಾದು, ತಡವಿ, ನಡೆದು, ಕೂತು, ಎದ್ದು, ಬಿದ್ದು ಲೋಕದೊಳಗೆ ಕಳೆದು ಹೋಗುತ್ತ ಅಲ್ಲಿನ ಸಮೃದ್ಧ ಸಂಪನ್ನತೆಯನ್ನು ನನ್ನದಾಗಿಸಿಕೊಳ್ಳುವ ಅವಕಾಶವು ದೊರೆಯಿತು.

ಮಾನವ ವಿಕಾಸದ ಹೆಜ್ಜೆ ಗುರುತುಗಳನ್ನು ಬಚ್ಚಿಟ್ಟುಕೊಂಡ ಹಿರೇಬೆಣಕಲ್ಲಿನ ಬೆಟ್ಟ ಮನದಲ್ಲಿ ಅಚ್ಚೊತ್ತಿವೆ. ನಂಜುಂಡ ಕವಿ ಕುಮಾರರಾಮನನ್ನು ಹೀಗೆ ಮುಖಾಮುಖಿಯಾಗುತ್ತೇನೆಂದು, ಅಪೂರ್ವ ಸೊಬಗಿನ ಅಂಜಾನಾದ್ರಿ ಯಾಗುತ್ತೇನೆಂದು ಭಾವಿಸಿರಲಿಲ್ಲ.

ಇದೊಂದು ಅಪೂರ್ವ ಸಂಭವ. ಕವಿಯ ಮೂಲಕ ಕಂಡಿದ್ದ ಅವನ ವ್ಯಕ್ತಿತ್ವದ ಧೀಮಂತಿಕೆಯನ್ನು ಆ ಗಟ್ಟಿ ಕಲ್ಲು ಬಂಡೆಗಳು ಮತ್ತೊಂದು ರೂಪದಲ್ಲಿ ಬಿಚ್ಚಿಟ್ಟವು.

ಜಬ್ಬಲಗುಡ್ಡಕ್ಕೆ ಬೆಳಿಗ್ಗೆ ಸಾಗುವ ದಾರಿಯಲ್ಲಿ ಸಿಕ್ಕ ವಡ್ಡರಹಳ್ಳಿಯಲ್ಲಿ ಕಣ್ಣಿಗೆ ರಾಚಿದ ಬಯಲು ಶೌಚಾಲಯದ ದೃಶ್ಯಗಳು ಹಲವು ಪ್ರಶ್ನೆಗಳೊಂದಿಗೆ ಕಾಡುತ್ತಿದೆ. 

ಗ್ರಾಮ ಜೀವನದ ಕಪ್ಪು ಬಿಳುಪುಗಳನ್ನು ನಾನಾ ಆಯಾಮಗಳಿಂದ ಕಾಣುವಂತೆ ಮಾಡಿದ ಈ ನಡಿಗೆ ಹೈದ್ರಾಬಾದ್‍ ಕರ್ನಾಟಕದ ಮಾತು, ಆಹಾರ, ಪರಂಪರೆ, ಜನಪದಸತ್ವವನ್ನು ಜೀವಂತವಾಗಿ ಪರಿಚಯಿಸಿತು.

ಹಿರಿಯರ ಉತ್ಸಾಹ, ಕಿರಿಯರ ನಲಿವಿನೊಂದಿಗೆ ಮನಸ್ಸನ್ನು ನಿರಾಳವಾಗಿ ಹರಿಬಿಟ್ಟು ನೆಮ್ಮದಿಯಾಗಿ ಆ ಬಿರುಬಿಸಿಲಿನಲ್ಲಿ ನಡೆಯಲು ಸಂಘಟಕರು ಮತ್ತು  ಆ ಭಾಗದ ಎಲ್ಲಾ ಆಪ್ತರು ತೋರಿದ ಪ್ರೀತಿ, ಆತ್ಮೀಯತೆ ಮೂಲಕ ಬೆಳೆದ ಭಾಂಧವ್ಯ ಮನಸ್ಸಿಗೆ ಸದಾ ತಂಪೆರೆಯುವಂತದ್ದು.

ಇಂಥದ್ದೊಂದು ಅವಕಾಶ ನನ್ನದಾಗಿಸಿಕೊಳ್ಳಲು ನೆರವಾದ ಸಮಾಜಮುಖಿ ಬಳಗದ ಎಲ್ಲರಿಗೂ ವಂದನೆಗಳು.

ಡಾ. ಶಿವಕುಮಾರ ಮಾಲಿಪಾಟೀಲ್, ಚಾರಣ ಬಳಗ, ಗಂಗಾವತಿ

ಸಮಾಜಮುಖಿ ನಡಿಗೆ ಮುಖಾಂತರ ನಮ್ಮ ಭಾಗದ ಐತಿಹಾಸಿಕ ಸ್ಥಳಗಳನ್ನು ರಾಜ್ಯದ ಬೆಂಗಳೂರು, ಮೈಸೂರು, ಹಾಸನ, ಧಾರವಾಡ ಹೀಗೆ ಹಲವು ಭಾಗದ ಜನರಿಗೆ ಚಾರಣ ಮುಖಾಂತರ ಪರಿಚಯಿಸಿದ ಸಮಾಜಮುಖಿ ಪತ್ರಿಕೆಯ ಸಂಪಾದಕರಾದ ಚಂದ್ರಕಾಂತ ವಡ್ಡು, ಸಮಾಜಮುಖಿ ನಡಿಗೆ ಮುಖ್ಯಸ್ಥ ಜಯರಾಮ್ ರಾಯಪುರ ಬೆಂಗಳೂರು, ಯಶಸ್ವಿ ನಡಿಗೆಯ ಸ್ಥಳೀಯ ಸಂಘಟಕರಾದ ಸೋಮಶೇಖರಗೌಡ, ಡಾ.ಜಾಜಿ ದೇವೇಂದ್ರಪ್ಪ, ಹರಿನಾಥಬಾಬು, ರಮೇಶ್ ಗಬ್ಬೂರ್, ಡಾ|| ರಾಜಶೇಖರ ನಾರನಾಳ, ಡಾ. ಮಹೇಶ ಇವರಿಗೆ ಧನ್ಯವಾದಗಳು.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.