ಜಗತ್ತು ಜಾಗತಿಕರಣದ ಒಳಗೆ ಕಿರುದಾಗುತ್ತಾ ಹೋದಾಗಲೆಲ್ಲಾ, ನಮ್ಮ ಅಧ್ಯಯನಗಳ ಸೂಕ್ಷ್ಮತೆಗಳು ಹೆಚ್ಚುತ್ತಾ ಹೋಗುತ್ತಿವೆ.

ಸಾಮಾನ್ಯವಾಗಿ ಒಂದು ಮಾತು ಇದೆ. ಇಡೀ ಜಗತ್ತನ್ನೇ ಆವರಿಸಿರುವ ಈ ಜಾಗತಿಕರಣ ನಾವು ಬದುಕುತ್ತಿರುವ ಬದುಕನ್ನು, ಬಾಳುತ್ತಿರುವ ಸಂಸ್ಕೃತಿಯನ್ನು ತನ್ನೊಳಗೆ ಸೇರಿಸಿಕೊಳ್ಳುವ, ನುಂಗುವ ದಾವಂತದ ಭೂತವಾಗಿ ನಿಂತಿದೆ ಎನ್ನುವುದು. ಒಂದು ದೃಷ್ಠಿಯಲ್ಲಿ ಈ ಆತಂಕವು ಇರಬೇಕಾಗಿರುವುದು ಸಹಜವೇ. ಯಾಕೆಂದರೆ ಮಾನವನ ಇತಿಹಾಸದ ಆರಂಭದಿಂದಲೂ ಒಂದು ಬದುಕು ಇನ್ನೊಂದು ಬದುಕಿನ ಮೇಲೆ ದಾಳಿ ನಡೆಸಿದೆ. ಒಂದು ಮಾನವ ಜನಾಂಗ, ಇನ್ನೊಂದು ಮಾನವ ಜನಾಂಗದ ಮೇಲೆ ತೀವ್ರವಾಗಿ ದಾಳಿ ನಡೆಸಿದೆ. ಒಂದು ಭಾಷೆ ಇನ್ನೊಂದು ಭಾಷೆಯ ಮೇಲೆ ಎರಗಿ ಇನ್ನಿಲ್ಲದಂತೆ ಮಾಡಿದೆ. ಹೀಗೆ ಇಡೀ ಮಾನವಕುಲ ಮತ್ತು ಅದು ಬದುಕುತ್ತಿದ್ದ ರೀತಿ ಸದಾ ಸಂಘರ್ಷಕ್ಕೆ ಒಳಗಾಗುತ್ತಲೇ ಬಂದಿದೆ. ಆದರೆ ಸಂಘರ್ಷದ ಒಳಗೆ ಬಲಹೀನವಾದುದು ತನ್ನ ಸೋಲನ್ನು ಅಷ್ಟು ಸುಲಭವಾಗಿ ಒಪ್ಪಿಕೊಂಡು ಬಂದಿಲ್ಲ. ಅದರ ಜೊತೆ ಒಂದೊಮ್ಮೆ ವಾಗ್ವಾದಕ್ಕೆ ಇಳಿದಿದೆ, ಸಂಘರ್ಷ ಮಾಡಿದೆ, ಯುದ್ದವನ್ನು ಮಾಡಿದೆ. ಈ ಎಲ್ಲಾ ಆಗುವಿಕೆಗಳಲ್ಲಿ ಒಮ್ಮೊಮ್ಮೆ ತನ್ನ ಮೂಲ ಸ್ಥಿತಿಯನ್ನು ಬದಲಿಸಿಕೊಂಡು, ಪ್ರತಿರೋಧವನ್ನು ತುಂಬಿಕೊಂಡು ಬಂದಿದೆ. ಈ ಪ್ರತಿರೋಧಗಳೇ ನಮ್ಮ ಮುಂದೆ ಪಳಯುಳಿಕೆಗಳಾಗಿ ನಿಂತಿವೆ. ಜೊತೆಗೆ ಮತ್ತೊಮ್ಮೆ ಇವು ಸಂಘರ್ಷಕ್ಕೂ ಇಳಿಯುತ್ತವೆ, ಗೆಲ್ಲುತ್ತವೆ, ಸೋಲುತ್ತವೆ, ಪ್ರತಿರೋಧಗಳನ್ನು ಒಡ್ಡುತ್ತವೆ. ಬದಲಾಗುತ್ತವೆ… ಇವೆಲ್ಲಾ ಹೀಗೆ ಆಗುವ ಸಹಜ ಕ್ರಿಯೆಗಳು.

ಕರ್ನಾಟಕದ ಜಾನಪದ ಅಧ್ಯಯನಕ್ಕೆ ಶತಮಾನ ತುಂಬಿರುವ ಈ ಸಂದರ್ಭದಲ್ಲಿ ನಿಂತಲ್ಲೇ ಬಹುದೂರ ಸಾಗಿದೆ, ಆರಂಭದಲ್ಲಿ ಇದ್ದ ಆತಂಕಗಳು, ದಾವಂತಗಳು ಈಗಲೂ ಇವೆ. ಇದಕ್ಕೆ ಮುಖ್ಯ ಕಾರಣ ಇಲ್ಲಿ ಅತಿಹೆಚ್ಚು ಸಿಗಬಹುದಾದ ಜಾನಪದ ವಿವಿಧ ಪ್ರಕಾರಗಳು ಇವು ನಮ್ಮನ್ನು ಸಂಪಾದನೆಗೆ ಸೆಳೆಯುತ್ತವೆ ಹೊರತು ವೈಜ್ಞಾನಿಕ ವಿಶ್ಲೇಷಣಾತ್ಮಕ ಅಧ್ಯಯನಗಳಿಗೆ ತೆರೆದುಕೊಳ್ಳುತ್ತಿಲ್ಲ ಅಥವಾ ಇದನ್ನು ಹೀಗೂ ಹೇಳಬಹುದು. ನಮ್ಮಲ್ಲಿ ಜಾನಪದವೆಂದರೆ ಅಳಿದು ಹೋಗುತ್ತಿರುವ ಪರಂಪರೆಯ ಜ್ಞಾನ ಎಂದಷ್ಟೇ ತಿಳಿದು ಅದರ ಸಂಪಾದನೆಗೆ ಹೆಚ್ಚು ಒತ್ತು ಕೊಟ್ಟಿದ್ದೇವೆಯೇ ಹೊರತು, ಸಂಪಾದಿತಗೊಂಡಿರುವ ಪಠ್ಯಗಳನ್ನು ವೈಜ್ಞಾನಿಕವಾಗಿ ವಿಶ್ಲೇಷಣಾತ್ಮಕ ಅಧ್ಯಯನಕ್ಕೆ ಅನುವುಮಾಡಿಕೊಂಡಿಲ್ಲ.

ಯಾವುದೇ ಜನಪದ ಪ್ರಕಾರವಾಗಿರಬಹುದು. ಅದರ ಹುಟ್ಟು, ಇತಿಹಾಸ, ಪ್ರದರ್ಶನಗೊಳ್ಳುತ್ತಿರುವ ಸಂದರ್ಭ, ಮನುಷ್ಯ ಮತ್ತು ಅವುಗಳಿಗೆ ಇರಬಹುದಾದ ಅನುಸಂಧಾನ, ಸಂಘರ್ಷ, ಸಂಬಂಧ ಪ್ರಕಟಗೊಳ್ಳುತ್ತಿರುವ ರೀತಿ, ಸ್ಥಿತಿ ಅವುಗಳಲ್ಲಿ ಆಗುತ್ತಿರುವ ರೂಪಾಂತರಗಳು – ಹೀಗೆ ವೈಜ್ಞಾನಿಕ, ವೈದಾನಿಕ ಮತ್ತು ವಿಶ್ಲೇಷಣಾತ್ಮಕ ರೀತಿಯಲ್ಲಿ ಅಧ್ಯಯನಗಳು ಹೆಚ್ಚು ಹೆಚ್ಚು ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಜಾನಪದದ ಬಗ್ಗೆ ನಡೆದಿರುವ ಅಧ್ಯಯನಗಳನ್ನು ನೋಡಿದರೆ ತೀರಾ ನಿರಾಸೆಯಾಗುತ್ತಿದೆ. ಅಪರೂಪ ಎನ್ನಬಹುದಾದ ಇಂತಹ ಕೆಲವೊಂದು ವೈಜ್ಞಾನಿಕ ಅಧ್ಯಯನಗಳು ಸಿಗುತ್ತವೆಯೋ ಹೊರತು ಮಿಕ್ಕೆಲ್ಲವು ಕೇವಲ ಸಂಪಾದನೆಯಲ್ಲೇ ಸತ್ವಗಳನ್ನು ಕಳೆದುಕೊಂಡಿವೆ. ಅವುಗಳ ಭಾವುಕ ಲೋಕದಿಂದ ಹೊರಬಂದು ಜಗತ್ತಿನ ಬದಲಾವಣೆಗಳ ಜೊತೆ ಅನುಸಂಧಾನಗೊಳ್ಳುವುದು ಮತ್ತು ಅನುಸಂಧಾನಗೊಳಿಸಬೇಕಾದ ದಾರಿಗಳ ಅಧ್ಯಯನಗಳು ತೀರಾ ಅಪರೂಪ.

ನಮ್ಮಲ್ಲಿ ಜನಪದ ಸಾಹಿತ್ಯ ಪ್ರಕಾರಗಳು ಜನಪದ ಐತಿಹ್ಯಗಳು, ಜನಪದ ಪುರಾಣಗಳು, ಜನಪದ ಧರ್ಮ ಇತ್ಯಾದಿ. ಇವೆಲ್ಲವೂ ಬಹುತೇಕವಾಗಿ ಕೇಂದ್ರಪಠ್ಯವೊಂದನ್ನು ಇಟ್ಟುಕೊಂಡೇ ಪ್ರತಿಪಠ್ಯಗಳ ರೂಪಗಳಲ್ಲಿ ರೂಪಿತವಾಗಿವೆ. ಅಥವಾ ಇದನ್ನು ಹೀಗೂ ಹೇಳಬಹುದು. ಕೇಂದ್ರ ಪಠ್ಯದಲ್ಲಿರುವ ತುಣಕುಗಳನ್ನು ಕತ್ತರಿಸಿಕೊಂಡು ಪ್ರತಿ ಪಠ್ಯಗಳಾಗಿ ರೂಪಿಸಿಕೊಂಡಿದ್ದಿರಲೂಬಹುದು. ಯಾಕೆಂದರೆ ಈ ಜನಪದ ಪ್ರಕಾರಗಳಲ್ಲಿ ಯಾವುದಾದರೊಂದನ್ನು ತೆಗೆದುಕೊಂಡರೂ ದೈವಿ ಸ್ವರೂಪದ ಸ್ಥಿತಿಯನ್ನು ಹೊರತುಪಡಿಸಿ ನೋಡಲು ಸಾಧ್ಯವಿಲ್ಲ. ಹಾಗಾಗಿ ನಮ್ಮನ್ನು, ನಮ್ಮದಲ್ಲದ ಸಂಸ್ಕೃತಿಯೊಂದು ಆಳ್ವಿಕೆ ಮಾಡಲು ಬಂದಾಗ ಅದು ರೂಪಿಸಿದ್ದು ಆ ಕೇಂದ್ರ ಪಠ್ಯವನ್ನು ನಿರಾಕಿಸದೆ. ಅದನ್ನು ಕತ್ತರಿಸಿಕೊಂಡು ಪ್ರತಿ ಪಠ್ಯಗಳನ್ನಾಗಿ ರೂಪಿಸಿಕೊಂಡು ಪ್ರತಿರೋಧಿಸುತ್ತಾ ಬಂದಿದೆ. ಹಾಗಾಗಿ ಭಾರತೀಯ ಸಂದರ್ಭದಲ್ಲಿ ದೈವಸ್ವರೂಪದಲ್ಲಿ ಬಹುದೊಡ್ಡ ವೈವಿಧ್ಯತೆಗಳೇ ಇವೆ ಎಂಬುದನ್ನು ಗಮನಿಸಬೇಕಾಗಿದೆ.

ಈ ನಿಟ್ಟಿನಲ್ಲಿ ನೋಡಿದಾಗ ಭಾರತದಲ್ಲಿ ಯಾಕೆ ಕರ್ನಾಟಕದಲ್ಲೇ ಇಂತಹ ಅನೇಕ ವೈವಿದ್ಯಗಳಿಂದ ಕೂಡಿದ ಧಾರ್ಮಿಕವಾದ ಅನೇಕ ಪ್ರತಿ ಪಠ್ಯಗಳನ್ನು ನೋಡಬಹುದು. ಉದಾಹರಣೆಗೆ ತಿರುಪತಿ ತಿಮ್ಮಪ್ಪನನ್ನು ಸಸ್ಯಾಹಾರಿಗಳು ಪೂಜಿಸುವಂತೆ ಮಾಂಸಹಾರಿಗಳು ಪೂಜಿಸುತ್ತಾರೆ. ಬ್ರಾಹ್ಮಣರಲ್ಲೇ ಪೂಜೆಗಳಲ್ಲಿ ವೈವಿಧ್ಯತೆ ಇರುವಂತೆ ಅಬ್ರಾಹ್ಮಣರ ಪೂಜೆಯಲ್ಲೂ ವೈವಿಧ್ಯತೆ ಇದೆ. ಆಚರಿಸುವ, ಆರಾಧಿಸುವ ಈ ದೈವವನ್ನು ಎದಿರುಗೊಳ್ಳುವ ಸಮುದಾಯಗಳ ಬಗೆಯಲ್ಲೂ ಭಿನ್ನತೆ ಇದೆ. ಆದರೆ ಕೇಂದ್ರ ಪಠ್ಯವೊಂದನ್ನು ಕತ್ತರಿಸಿ ಸಮುದಾಯಗಳ ಆಚಾರ-ವಿಚಾರಗಳ ಮೂಲಕ ಉಡುಗೆ ತೊಡಿಗೆಗಳ ಮೂಲಕ ಪ್ರತಿ ಪಠ್ಯಗಳನ್ನು ರೂಪಿಸಿಕೊಳ್ಳುವುದು ತೀರಾ ಭಿನ್ನವಾದುದು ಮತ್ತು ಪ್ರತಿರೋದಾತ್ಮಕನೆಲೆಯದ್ದು.

ಮೇಲಿನ ನನ್ನ ಎಲ್ಲಾ ಮಾತುಗಳ ತುಡಿತವಿಷ್ಟೇ. ಯಾವುದೇ ಅಧ್ಯಯನಕಾರನು ದೈವೀ ಸ್ವರೂಪದ ಜಾನಪದ ಪಠ್ಯಗಳನ್ನು ನೋಡಿವಾಗ ಭಾವುಕತೆ ಮತ್ತು ಪೂಜನೀಯ ಸ್ಥಿತಿಯಿಂದ ಹೊರಬಂದು ವೈಜ್ಞಾನಿಕತೆ ಮತ್ತು ವಿಶ್ಲೇóಣಾತ್ಮಕ ರೀತಿಯಲ್ಲಿ ಜಾನಪದ ಅಧ್ಯಯನವನ್ನು ಕೈಗೊಂಡಾಗ ಜಗತ್ತಿನ ಜಾನಪದದ ಜೊತೆ ನಮ್ಮ ಪಠ್ಯಗಳ ಸ್ಥಿತಿಗಳನ್ನು ಕಂಡುಕೊಳ್ಳವುದು ಸಾದ್ಯವಾಗುತ್ತದೆ.

ಜನಪದ ಕಲೆಗಳು ಮನುಷ್ಯ ಬದುಕಿನ ಸಾಂಸ್ಕೃತಿಕ ಇತಿಹಾಸದ ಪಳಯುಳಿಕೆಗಳು. ಕರ್ನಾಟಕದಲ್ಲಿ ಜನಪದ ಕಲೆಗಳು* ಇನ್ನೂರಕ್ಕೂ ಮಿಕ್ಕಂತೆ ಇವೆ. ಕಲೆಗಳಿವೆ ಈ ಕಲೆಗಳು ಬಹುತೇಕವಾಗಿ ದೈವವನ್ನೇ ಮುಖ್ಯವಾಗಿ ಇಟ್ಟುಕೊಂಡು ಹುಟ್ಟಿದ್ದರೂ, ಸಾಮಾಜಿಕ ಜಾತಿಯ ಪದರುಗಳ ಮೇಲೆ ಈ ಕಲೆಗಳು ಕಟ್ಟಲ್ಪಟ್ಟಿವೆ. ಪ್ರತಿಯೊಂದು ಕಲೆಯ ಹಿಂದೆ ಜಾತಿಯ ಅನನ್ಯತೆಯಿದೆ. ಐಡೆಂಟಿಟಿ ಇದೆ. ಅಸ್ಮಿತೆಗಳಿವೆ. ಕೆಲವೊಂದು ಕಲೆಗಳು ಕೇವಲ ಒಂದೇ ಜಾತಿಗೆ ಸೀಮಿತವಾಗಿದ್ದರೆ, ಇನ್ನು ಕೆಲವು ಕಲೆಗಳು ಎಲ್ಲಾ ಜಾತಿಗಳು ಪ್ರದರ್ಶಿಸಬಹುದಾದ ಕಲೆಗಳಾಗಿವೆ. ಕೆಲವು ಕಲೆಗಳಿಗೆ ಮಡಿವಂತಿಕೆ, ಶುದ್ದ ಅಶುದ್ದತೆಗಳು ಇದ್ದರೆ, ಕೆಲವೊಂದರಲ್ಲಿ ಅವು ಇಲ್ಲ. ಸಮಾಜದ ಉನ್ನತ ಜಾತಿಯೆಂದು ತಿಳಿದಿರುವ ಬ್ರಾಹ್ಮಣರಿಂದ ಹಿಡಿದು ಸಮಾಜ ಅಂಚಿನಲ್ಲಿ ಬದುಕುತ್ತಿರುವ ಅಲೆಮಾರಿಗಳಾದ ಬುಡಬುಡಿಕೆ, ಕಿಳ್ಳೆಕ್ಯಾತ, ದೊಂಬರ ಜಾತಿಗಳಿಗೂ ಕಲೆಗಳಿವೆ. ಇನ್ನು ಕೆಲವು ಕಲೆಗಳು ಜಾತಿ ಭೇದಕ್ಕೆ ಒಳಗಾಗದೆ ಸಾರ್ವತ್ರಿಕವಾಗಿಯೂ ಸಮಾಜದ ಅಸಮಾನತೆಯೊಳಗೂ ಪ್ರವೇಶ ಪಡೆದಿವೆ.

*ಸಂ. ಹಿ.ಚಿ. ಬೋರಲಿಂಗಯ್ಯ. ಕರ್ನಾಟಕ ಜನಪದ ಕಲೆಗಳ ಕೋಶ, ಪ್ರಸಾರಾಂಗ, ಕ.ವಿ.ವಿ ಹಂಪಿ

ಬಹುಶಃ ಜನಪದ ಕಲೆಗಳನ್ನು ಮನುಷ್ಯ ಬದುಕಿನ ಸಾಂಸ್ಕೃತಿಕ ಇತಿಹಾಸದ ಪಳಯುಳಿಕೆಯಾಗಿಯೇ ನೋಡಬೇಕಾಗಿದೆ. ಇದರಲ್ಲಿ ಧಾರ್ಮಿಕತೆ, ಸಾಮಾಜಿಕ ಅಸಮಾನತೆ. ಸ್ವಾವಲಂಬನೆ, ಪರಾವಲಂಬನೆ, ಜಾತಿಯ ಶ್ರೇಣೀಕರಣದ ರಾಜಕಾರಣ – ಹೀಗೆ ಎಲ್ಲವುಗಳ ಮೂಲಕವೂ ಶೋಧಿಸಬಹುದಾಗಿದೆ. ಪ್ರತಿಯೊಂದು ಕಲೆಯ ಹಿನ್ನೆಲೆಯಲ್ಲಿ ನಾವು ಶೋಧಿಸಲು ಪ್ರಯತ್ನಿಸುವಾಗ ಇತಿಹಾಸದ ಗರ್ಭದಲ್ಲಿ ಘಟಿಸಿರಬಹುದಾದ, ಜಾತಿಜಾತಿಗಳ ನಡುವೆ, ಧರ್ಮಧರ್ಮಗಳ ನಡುವೆ, ಸಮುದಾಯಗಳ ನಡುವೆ, ಸಂಸ್ಕೃತಿ ಸಂಸ್ಕೃತಿಗಳ ನಡುವೆ ನಡೆದಿರಬಹುದಾದ ಸಂಘರ್ಷ, ಯುದ್ದ, ಅನುಸಂಧಾನ, ಅಸ್ಮಿತೆ, ಐಡೆಂಟಿಟಿ, ಇತ್ಯಾದಿ. ಇವೆಲ್ಲವುಗಳ ಪಳಯುಳಿಕೆಯ ರೂಪದಲ್ಲಿ ನಮ್ಮ ಮುಂದೆ ಪ್ರದರ್ಶಿಸಿಬಿಡುತ್ತವೆ ಎನಿಸದೇ ಇರದು. ಒಂದೊಂದು ಕಲೆಯೂ ತನ್ನದೇ ಆದ ಸಾಂಸ್ಕೃತಿಕವಾದ ಘಟನೆಗಳ ಕಾರ್ಯಕಾರಣದಿಂದ ಹುಟ್ಟಿರುವಂತವೇ ಆಗಿ ನಮ್ಮ ಕಣ್ಣಮುಂದೆ ನಿಂತುಬಿಡುತ್ತವೆ. ಈ ಕಲೆಗಳನ್ನು ತುಂಬ ಭಾವುಕವಾಗಿ ನೋಡುವ ಅಗತ್ಯಕ್ಕಿಂತ ವೈಜ್ಞಾನಿಕವಾಗಿ ವಿಶ್ಲೇಷಿಸುವುದು ಸದ್ಯದ ತುರ್ತು ಎನ್ನಬಹುದು.

ಈ ಕಲೆಗಳ ಪ್ರತಿ ಪ್ರದರ್ಶನ ಬದಲಾಗುತ್ತಾ ಹೋಗುತ್ತವೆ. ಆಯಾ ಸಂದರ್ಭಗಳ ಸ್ಥಿತಿಯಿಂದ ನೋಡಿದಾಗ ನಮಗೆ ಬೇರೆ ಯಾವ ರೀತಿಯಲ್ಲಿ ಗೋಚರಿಸುತ್ತವೆ. ಪ್ರದರ್ಶನಗೊಳ್ಳುವ ಸಾಂದರ್ಭಿಕ ನೆಲೆಯಲ್ಲೇ ಬೇರೆ ರೀತಿಯಲ್ಲಿ ಕಾಣುತ್ತವೆ.

ಚೋಮನ ಕುಣಿತ

ಚೋಮನ ಕುಣಿತ ಅಥವಾ ಸೋಮನ ಕುಣಿತ ಮಾರಿಯ ಆರಾಧನಾ ಕುಣಿತವಾಗಿದೆ. ಇದು ಬಹುತೇಕವಾಗಿ ತುಮಕೂರು ಜಿಲ್ಲೆಗೆ ಸೀಮಿತಗೊಂಡಿದ್ದರೂ, ನೆರೆ-ಹೊರೆಯ ಜಿಲ್ಲೆಗಳಾದ ಚಿತ್ರದುರ್ಗ ಮಂಡ್ಯ, ಮೈಸೂರು, ಹಾಸನ, ಬೆಂಗಳೂರು, ಚಿಕ್ಕಮಂಗಳೂರು ಜಿಲ್ಲೆಗಳಲ್ಲೂ ಕಂಡು ಬರುತ್ತದೆ. ಇದೊಂದು ಆರಾದನಾ ಕಲೆಯಾಗಿರುವುದರಿಂದ ನಾಯಕ, ಬೆಸ್ತ, ಕುರುಬ, ಒಕ್ಕಲಿಗ ಮತ್ತು ಲಿಂಗಾಯತ ಜಾತಿಯ ಜನಗಳು ಈ ಕಲೆಯನ್ನು ಪರಂಪರಗತ ಹೊತ್ತು ತಂದಿದ್ದಾರೆ ಹೊಲಯರು ಪ್ರಮುಖವಾಗಿ ವಾದ್ಯಗಾರರು ಆಗಿರುತ್ತಾರೆ. ಸೋಮನ ಕುಣಿತದಲ್ಲಿ ಮೂರು ಬಗೆಯ ಸೋಮಗಳಿವೆ ಸಾಯುವ ಸೋಮ, ಭೂತರಾಯ ಕೆಂಚರಾಯ ಇವುಗಳ ಹೆಸರು ಪ್ರಾದೇಶಿಕವಾಗಿ ಹೆಸರುಗಳು ಭಿನ್ನವಾಗಿವೆ. ಈರಣ್ಣ, ಪಾತಯ್ಯ, ದೊಡ್ಡಯ್ಯ, ಅಳುವಸೋಮ, ಕರಿಯಸೋಮ ಕೆಂಪುಸೋಮ ಮುಂತಾದ ಭಿನ್ನ ಹೆಸರುಗಳಿಂದ ಕರೆಯಲ್ಪಡುತ್ತವೆ, ಸೋಮಗಳ ಹುಟ್ಟಿನ ಬಗ್ಗೆ ತುಮಕೂರು ಜಿಲ್ಲೆಯಲ್ಲಿ ಹಲವಾರು ಐತಿಹ್ಯಗಳಿವೆ.

ಐತಿಹ್ಯ ಒಂದು

“ಹಿಂದೆ ಚೇಳೂರಿನಿಂದ ನಾಗಸಂದ್ರಕ್ಕೆ ಕೆಂಪಜಮ್ಮ ಎಂಬ ಹೆಣ್ಣನ್ನು ಸೊಸೆಯಾಗಿ ತಂದರು. ಒಂದು ಸಲ ಹಬ್ಬಕ್ಕೆಂದು ತವರು ಮನೆಗೆ ಸೊಸೆಹೋದಳು. ಆಕೆಯನ್ನು ಮರಳಿ ಕರೆತರುವುದಕ್ಕೆ ಮಾವ ಹೋದನು. ಮಾವನ ಜೊತೆ ಆಕೆ ನಾಗಸಂದ್ರಕ್ಕೆ ಬರುವಾಗ ದಾರಿಯಲ್ಲಿ ಜಲಭಾದೆಯುಂಟಾಯಿತು. ಮಾವನನ್ನು ಅಲ್ಲೇ ಇರಲು ಹೇಳಿ ಆಕೆ ಹತ್ತಿರದ ಹುತ್ತದ ಬಳಿ ಹೋದಳು. ಹಾಗೆ ಹೋಗುವಾಗ ಮಾವನಿಗೆ ಹಿಂದಿರಿಗಿ ನೋಡಬಾರದಾಗಿ ತಿಳಿಸಿದಳು. ಆದರೂ ಬಹಳ ಹೊತ್ತಾಗಿ, ಸೊಸೆಬಾರದೇ ಇದ್ದಾಗ ಮಾವ ಹಿಂದಿರಿಗಿ ನೋಡಿದಾಗ ಇದರಿಂದ ನಾಚಿಕೊಂಡ ಸೊಸೆ ಹುತ್ತದೊಳಗೆ ಪ್ರವೇಶಿಸಿ ಅಲ್ಲಿಂದ ಸುಂದರ ದೇವತೆಯಾಗಿ ಹೊರಬಂದಳು. ಹಾಗೆಯೇ ಬರುವಾಗ ಆಕೆಯ ಅಕ್ಕ-ಪಕ್ಕ ಇಬ್ಬರೂ ಅಂಗರಕ್ಷಕರೂ ಬೆಂಗಾವಲಾಗಿ ಬಂದರು”. 1ಅವರನ್ನೆ ‘ಸೋಮ’ ಎಂದು ಕರೆಯಲಾಗುತ್ತದೆ. ಹೀಗೆ ಗ್ರಾಮದೇವತೆಯ ಅಂಗರಕ್ಷಕರೇ ಸೋಮಗಳು ಎಂಬ ನಂಬಿಕೆಯಿದೆ.

ಐತಿಹ್ಯ-ಎರಡು

“ತಾಲ್ಲೂಕಿನ ಪೆದ್ದಿಹಳ್ಳಿ ಗ್ರಾಮದ ಕರಿಯಮ್ಮನ ಪುರಾಣವು ಮಾರಮ್ಮನ ಪುರಾಣದ ಪಾಠಾಂತವೇ ಆಗಿದೆ. ಹೆಸರು ಮಾತ್ರ ಕರಿಯಮ್ಮನೆಂದಿದ್ದು ಘಟನಾವಳಿಗಳು ಸ್ಥಳೀಯವಾಗಿವೆ. ಕರಿಯಮ್ಮ ಕರಡಿ ಗ್ರಾಮದ ಶಾನುಭೋಗರ (ಬ್ರಾಹ್ಮಣ) ಮಗಳು. ಇವಳು ಮದುವೆಗೆ ಮೊದಲು ಋತುಮತಿಯಾಗಲು, ಕಣ್ಣುಕಟ್ಟಿ ಕಾಡಿಗೆ ಬಿಟ್ಟು ಬರುತ್ತಾರೆ. ಪೆದ್ದಿಹಳ್ಳಿಯ ಮಾದಿಗ ಜನಾಂಗಕ್ಕೆ ಸೇರಿದ ಹುಡುಗನೊಬ್ಬ ಕಾಡಿನಲ್ಲಿದ್ದ ಹುಡುಗಿಯ ಕಣ್ಣು ತೆರೆಸುತ್ತಾನೆ. ಅಲ್ಲದೇ ತಾನೂ ಬ್ರಾಹ್ಮಣನೆಂದು ಹೇಳುತ್ತಾನೆ. ಪರಿಣಾಮವಾಗಿ ಕರಡಿ ಗ್ರಾಮದಲ್ಲಿ ಹಿರಿಯರು ಒಪ್ಪಿ ಮದುವೆ ಮಾಡುತ್ತಾರೆ, ಆ ಹುಡುಗಿಯ ಕಣ್ಣು ತೆರೆಸಿದ ಕಾಡಿನಲ್ಲಿಯೇ ತನ್ನ ಕುಲ ಕಸುಬು ಮೆಟ್ಟು ಹೊಲಿಯುವುದನ್ನು ಹಿಂಬಾಲಿಸುತ್ತಾನೆ. ಮಕ್ಕಳು ಹಿಂಬಾಲಿಸಿ ಬಂದು ತಂದೆಯ ಕಾಯಕವನ್ನು ಗಮನಿಸುತ್ತಾರೆ. ತಂದೆ ಮಾಡುತ್ತಿದ್ದ ವೃತ್ತಿಯನ್ನು ನೋಡುತ್ತಿದ್ದ ಮಕ್ಕಳು ಬಾಳೆ ಕಂದಿನಲ್ಲಿ ಮೆಟ್ಟು ತಯಾರಿಸುತ್ತಾರೆ. ತಾಯಿಗೆ ತೋರಿಸಿ ಬೈಯಿಸಿಕೊಳ್ಳುತ್ತಾರೆ. ತಾಯಿ ಬೈದಾಗ ಅಪ್ಪ ಮಾಡುವುದು ಇದನ್ನೇ ಎಂದು ಸತ್ಯ ನುಡಿಯುತ್ತವೆ. ಕರಿಯಮ್ಮನಿಗೆ ಅನುಮಾನ ಬಂದು ಕಾಡಿಗೆ ಬಂದು ನೋಡಲು ಮಕ್ಕಳು ಹೇಳಿದ್ದು ನಿಜವೆಂದು ತಿಳಿದು ಬರುತ್ತದೆ ಅವಳು ಅಲ್ಲಿಂದ ಪೆದ್ದಿಹಳ್ಳಿಗೆ ಬಂದು ಗಂಧದ ಸೌದೆ, ನೆಲ್ಲುಲ್ಲು ತರಿಸಿ ರಾಶಿ ಹಾಕಿಸಿ ಗಂಡನಿಗೆ ಕ್ವಾಣವಾಗಿ ಹುಟ್ಟೊ ಎಂದೂ, ಇಬ್ಬರು ಮಕ್ಕಳಿಗೆ ಒಬ್ಬ ನನ್ನ ಪೂಜಾರಿಯಾಗಿ, ಇನ್ನೊಬ್ಬ ಸಾಯೋ ಸೋಮನಾಗಿ ಹುಟ್ಟು ಎಂದು ಶಾಪಹಾಕಿ ಅಗ್ನಿಗೆ ಆಹುತಿಯಾಗುತ್ತಾಳೆ” 2 ಮೇಲಿನ ಎರಡು ಐತಿಹ್ಯಗಳು ಸೋಮನ ಕುಣಿತ ಕಲೆಯ ಹುಟ್ಟನ್ನು ಕುರಿತಂತೆ ಇರುವಂತಹವು. ನಡೆಯಿತೆಂದು ಹೇಳಲಾದ ಘಟನೆಗಳ ಸುತ್ತ ಹುಟ್ಟಿಕೊಳ್ಳುವ ಕಟ್ಟು ಕಥೆಗಳೇ ಐತಿಹ್ಯಗಳಾಗುತ್ತವೆ. ಆ ಘಟನೆಗಳನ್ನು ಸಂಪೂರ್ಣವಾಗಿ ಮರೆಸಿ ದೈವಿಕಾಂಶಗಳು ಕೂಡಿಕೊಂಡು ಅದ್ಭುತವಾಗಿ ಬೆಳೆದು ಇವೆಲ್ಲಾ ಎಂದೂ ಒಂದು ಕಾಲದಲ್ಲಿ ನಡೆದಿವೆ ಎಂಬಂತೆ ಭ್ರಮೆಹುಟ್ಟಿಸುವ ಕಥೇಗಳೇ ಪುರಾಣಗಳು ಎಂಬ ಮಾತಿದೆ. ಆದರೆ ಎರಡು ಐತಿಹ್ಯಗಳು ಎರಡನೇ ಐತಿಹ್ಯ ಬಹಳ ಮುಖ್ಯವಾದದು. ಇಲ್ಲಿ ಜಾತಿಯ ಸಂಘರ್ಷವಿದೆ. ಎರಡು ಜಾತಿಗಳ ಮದ್ಯೆ ಇರುವ ಮೇಲು ಕೀಳುಗಳು ಸಾವನನು ಬಯಸುವ ಪ್ರತೀಕಗಳಾಗಿ ನಮ್ಮ ಮುಂದೆ ಬಂದು ನಿಲ್ಲುತ್ತವೆ.

1. ಹಿ.ಚಿ ಬೋರಲಿಂಗಯ್ಯ ಕರ್ನಾಟಕ ಜನಪದ ಕಲೆಗಳ ಕೋಶ. ಹಂಪಿ ವಿ.ವಿ ಪುಟ-29
2. ಕಂಟ್ಲಗೆರೆ ಸಣ್ಣಹೊನ್ನಯ್ಯ, ತುಮಕೂರು ಜಿಲ್ಲೆಯ ಶಕ್ತಿದೇವತೆಗಳು, ತು.ವಿ.ವಿ ಪುಟ-62

ಇದೊಂದು ಪ್ರಾದೇಶಿಕ ಜನಪದ ಕಲೆ ಜೊತೆಗೆ ಈ ಕಲೆಯ ಆಚರಣೆಗೆ ಅನೇಕ ನಿಶಿದ್ಧಗಳಿವೆ. ಯಾವಗ ಬೇಕಾದರೂ ಸೋಮನನ್ನು ಹೊರೆತೆಗೆಯುವುದಿಲ್ಲ, ಮತ್ತು ತೆಗೆಯ ಬಾರದು ಎಂಬ ನಿರ್ಬಂಧವಿದೆ. ನಿರ್ದಿಷ್ಠವಾದ ಹಬ್ಬ ಮಾತ್ತು ಜಾತ್ರೆಗಳ ಸಂದರ್ಭದಲ್ಲಿ ಮಾತ್ರ ಹೊರತೆಗೆಯಬೇಕು.

ಆಧುನಿಕತೆಯ ಸಂದರ್ಬದಲ್ಲಿ ಈ ಹಬ್ಬ ಮತ್ತು ಜಾತ್ರೆಗಳು ರೂಪಾಂತರಗೊಳ್ಳುತ್ತಿವೆ. ಹಿಂದೆ ಜಾತ್ರೆಗಳು ಧಾರ್ಮಿಕ ಸ್ವರೂಪದಲ್ಲಿ ಆಚರಿಸಲ್ಪಡುತ್ತಿದ್ದವು. ಆದರೆ ಈಗ ಮನರಂಜನೆಯ ಭಾಗವಾಗಿ ರೂಪಾಂತರಗೊಳ್ಳುತ್ತಿದೆ. ಜೊತೆಗೆ ಜಾತ್ರೆಯಲ್ಲಿದ್ದ ಆರಾಧನಾ ನಿಷ್ಠೆಗಳೆಲ್ಲಾ ತೆಳವಾಗುತ್ತಿವೆ. ಆಧುನಿಕತೆ ಪ್ರವೇಶ ಪಡೆದ ನಂತರ ಹಿಂದೆ ಇದ್ದ ನಂಬಿಕೆಗಳೆಲ್ಲಾ ಪ್ರಶ್ನೆಗೆ ಒಳಗಾಗುತ್ತವೆ. ಇನ್ನೊಂದು ಕಡೆ ಹಳ್ಳಿಗಳು ಇಂದು ಬರಿದಾಗುತ್ತಾ ಯುವಕರೆಲ್ಲಾ ಪಟ್ಟಣ ಸೇರುತ್ತಿದ್ದಾರೆ, ವಿದ್ಯಾವಂತರು ಉದ್ಯೋಗದ ನಿಮ್ಮಿತ, ಬೇರೆ ಕಡೆ ವಾಸಮಾಡುತ್ತಿದ್ದಾರೆ. ಹಾಗಾದರೆ ಇಂತಹ ಜನಪದ ಕಲೆ ಮೂಲ ಕಲೆಯಾಗಿ ನಿಲ್ಲುವುದಾದರೂ ಹೇಗೆ ? ಇದು ನೇಪತ್ಯಕ್ಕೆ ಸೇರುತ್ತಿದೆಯಲ್ಲವೇ ಎನ್ನುವುದು ಬಹುತೇಕ ಜನರ ಅಭಿಪ್ರಾಯ.

ಆದರೆ ನಾವು ಬಹುಬೇಗ ಈ ತೀರ್ಮಾನಕ್ಕೆ ಬರುವುದಕ್ಕಿಂತ ಮುಂಚೆ, ಈ ಕಲೆಯಲ್ಲಾದ ಬದಲಾವಣೆಗಳನ್ನು ರೂಪಾಂತರಗಳನ್ನು ವಿಸ್ತರಣೆಯನ್ನು ಬಹಳ ಮುಖ್ಯವಾಗಿ ಅಧ್ಯಯಿಸಬೇಕಾಗಿದೆ. ಹತ್ತೊಬಂತ್ತನೆಯ ಶತಮಾನದಲ್ಲಿ ಇದ್ದಂತಹ ಆತಂಕಗಳೇ ಇಂದೂ ನಮಗೆ ಕಾಡುತ್ತಿವೆ. ಅಕ್ಷರ, ನಗರ ಪ್ರದೇಶ, ಮಾಧ್ಯಮಗಳು, ಪಾಶ್ಚಿಮಾತ್ಯ ಸಂಸ್ಕೃತಿ, ಈ ನಾಲ್ಕು ಜಾನಪದಕ್ಕೆ ಬಹುದೊಡ್ಡ ಶತ್ರುಗಳು ಎಂದು ಕಾಲಕ್ಕೆ ಭಾವಿಸಲಾಗಿತ್ತು. ಆದರೆ ಇಂದು ಇವು ಜನಪದ ಕಲೆಗಳ ಪ್ರಚಾರಕ್ಕೆ ಪೂರಕವಾಗಿ ಬಳಕೆಗೊಳ್ಳುತ್ತಿವೆ. ಅಥವಾ ಹೀಗೆ ಹೇಳುವುದಾದರೆ ಅಕ್ಷರವು ಜಾನಪದಕ್ಕೆ ಶತೃವಾಗಿರದೆ ಮಿತ್ರನಾಗಿದೆ. ಎಲ್ಲೋ ಯಾವುದೇ ಮೂಲೆಯಲ್ಲಿ ಆಯಾಪ್ರದೇಶಕ್ಕೆ ಸೀಮಿತವಾಗಿದ್ದ ಕಲೆಯೊಂದು ಅಕ್ಷರದ ಮೂಲಕ ಜಗತ್ತಿನ ಮೂಲೆ ಮೂಲೆಗೂ ಕೊಂಡಯ್ಯಬಹುದು. ಜೊತೆಗೆ “ಹಳ್ಳಿಗರ ನಿರೆಕ್ಷಕ ಕುಕ್ಷಿಗಳ” ಎಂಬ ಮಾತುಗಳು ಹಳೆಯದಾಗುತ್ತಿವೆ. ಇಂದು ನಗರಕ್ಕೆ ಸೀಮಿತವಾದ ಅನೇಕ ಜನಪದ ಕಲೆಗಳಿವೆ. ಜೊತೆಗೆ ಹಳ್ಳಿಯಲ್ಲಿರುವ ಜನಪದ ಕಲೆಗಳನ್ನು ಮನೆರಂಜನೀಯವಾಗಿ ಆಚರಿಸಲ್ಪಡುತ್ತಿವೆ.

ಇಂದು ಮಾಧ್ಯಮಗಳು, ದೂರದರ್ಶನಗಳು ಎಲ್ಲೊ ಮೂಲೆಯಲ್ಲಿ ಆಚರಿಸುತ್ತಿದ್ದ ಕಲೆಗಳನ್ನು ಎಲ್ಲರೂ ನೋಡುವಂತೆ ಮಾಡುತ್ತಿವೆ, ಪಾಶ್ವಮಾತ್ಯ ಸಂಸ್ಕೃತಿ ಶತೃ ಎಂದು ಬಾವಿಸಲಾಗಿದ್ದ ಸಂದರ್ಭದಲ್ಲಿ ದೇಶವಿದೇಶಗಳಲ್ಲಿಯೂ ಈ ಜನಪದ ಕಲೆಗಳು ಪ್ರದರ್ಶನಗೊಳ್ಳುತ್ತಿವೆ. ಇವೆಲ್ಲವೂ ರೂಪಾಂತರಗೊಳ್ಳುತ್ತಿರುವ ಸ್ಥಿತಿಗಳೆ. ಇವುಗಳಲ್ಲಿ ಶುದ್ಧ ಅಶುದ್ಧವೆಂಬ ಭಾಗಮಾಡಲು ಸಾಧ್ಯ ಇರಬಹುದಾದರೂ ಬದಲಾಗುತ್ತಿರುವ ಸಂಧರ್ಭದಲ್ಲಿ ಸಹಜವಾಗಿ ಇವೆಲ್ಲವನ್ನು ಒಪ್ಪಿಕೊಳ್ಳುವುದು ಅನಿವಾರ್ಯವಾಗಿದೆ. ಈ ಮಾತನ್ನು ಸೋಮನ ಕುಣಿತಕ್ಕೂ ಅನ್ವಯಿಸಬಹುದು ಸೋಮನಕುಣಿತ ಬಹುಮುಖ್ಯವಾಗಿ ಮಾರಿಯ ಜಾತ್ರೆಯಲ್ಲಿ ಪ್ರದರ್ಶನಗೊಳ್ಳುವ ಕಲೆ, ಜಾತ್ರೆಯೆಂದರೆ ಊರೊಟ್ಟಿನ ಸಂಬಂಧವನ್ನು ಧಾರ್ಮಿಕವಾಗಿ ಪ್ರತಿನಿಧಿಸುವಂತಹದ್ದು. ಆದರೆ ಇಂದು ಹಳ್ಳಿಗಳಲ್ಲಿ ಈ ಸಂಬಂಧಗಳಲ್ಲಿ ಬಿರುಕು ಕಾಣಿಸಿಕೊಳ್ಳುತ್ತಿವೆ. ಜಾತಿಯ ಸಂಬಂಧವಾಗಿಯೂ, ಪ್ರಭುತ್ವದ ಸಂಭಂಧವಾಗಿಯೂ ಶೈಕ್ಷಣಿಕ, ವೈಚಾರಿಕ, ಎಚ್ಚರಗಳು ಹಳ್ಳಿಯನ್ನು ತಲುಪಿವೆ. ಸೋಮನ ಕುಣಿತದಲ್ಲಿ ವಾದ್ಯಗಾರರ ಪಾತ್ರ ಬಹಳ ಮುಖ್ಯವಾದುದು ಆದರೆ ಸಮಾಜದ ಜಾತಿ ಶ್ರೇಣಿಕರಣ ವ್ಯವಸ್ಥೆಯಲ್ಲಿ ವಾಧ್ಯಬಾರಿಸುವುದು ಕೀಳು ಜೊತೆಗೆ ಒಂದೇ ಜಾತಿಗೆ ಸೀಮಿತವಾಗಿರುವುದರಿಂದ ಇದು ಅಸ್ಪಶ್ಯಾಚಾರಣೆಯ  ಸೋಕಿನ ಆಚರಣೆಯಾಗಿಯೂ ಕಂಡುಬರುತ್ತಿದೆ. ಅಲ್ಲದೆ ಈ ಸಮುದಾಯವು ಬಹುತೇಕವಾಗಿ ಅಕ್ಷರದ ಕಡೆ ಮುಖಮಾಡಿರುವುದರಿಂದ ಸಹಜವಾಗಿ ವಾಧ್ಯಬಾರಿಸುವುದು ಆ ಹಳ್ಳಿಯ ಸಾಂಧರ್ಭಿಕ ನೆಲೆಯಲ್ಲೆ ಕೀಳು ಎಂಬ ಭಾವನೆ ಮೂಡಿದೆ. ಹಾಗಾಗಿ ಈ ವಾದ್ಯಗಳನ್ನು ನುಡಿಸುವವರ ಜೀವನ ಪದ್ಧತಿಯ ಬದಲಾವಣೆ ಮತ್ತು ಶಿಕ್ಷಣದಿಂದ ದೊರೆತ ಎಚ್ಚರಗಳು. ಮೂಲ ವೃತ್ತಿಯಲ್ಲಿ ತೊಡಗಿಸಲು ಬಿಡುತ್ತಿಲ್ಲ.

ಈ ಕಲೆಗೆ ಜೀವ ತುಂಬುವ ಸಮುದಾಯಗಳಾದ ಲಿಂಗಾಯತ, ಒಕ್ಕಲಿಗ, ಬೇಡ, ಬೆಸ್ತ ಈ ಸಮುದಾಯಗಳು ಬಹುತೇಕವಾಗಿ ವ್ಯವಸಾಯವನ್ನು ಮುಖ್ಯ ಕಸುಬಾಗಿ ಮಾಡಿಕೊಂಡಂತವು ಆದರೆ ಬೇಸಾಯವು ಇಂದು ಲಾಭಕರವಾಗಿರದೆ, ರೈತನ ಜೀವನ ತುಂಬಾ ಕಷ್ಟಕರವಾಗಿದೆ. ಹಾಗಾಗಿ ಹಳ್ಳಿಗರ ಆರ್ಥಿಕ ಮೂಲವಾದ ಬೇಸಾಯವು ಸಂಕಷ್ಠದ ಸ್ಥಿತಿಯಲ್ಲಿದ್ದು ಅವರ ಆರ್ಥಿಕ ಮೂಲ ಕುಂಠಿತಗೊಂಡಿದೆ. ಇಂತಹ ಸಂಧರ್ಭದಲ್ಲಿ ಇದನ್ನು ನಂಬಿಕೊಂಡು ಬಂದ ಈ ಸಮುದಾಯಗಳು ಮತ್ತು ಈ ಸಮುದಾಯಗಳ ಸೃಜನಶೀಲ ಜನಪದ ಕಲೆಯಾದ ಸೋಮನ ಕುಣಿತ ಮತ್ತು ಇನ್ನಿತರ ಕಲೆಗಳು ಸಹಜವಾಗಿಯೇ ನಶಿಸುವ ಸ್ಥಿತಿಯಲ್ಲಿವೆ. ಆದರೆ ಈ ಕಲೆಗಳ ಈಗ, ಅಕ್ಷರದ ಮಧ್ಯಕ್ಕೆ ಬಿದ್ದು ಹೊಸ ಹೊಸ ಅಧ್ಯಯನಗಳಿಗೆ ತನ್ನನ್ನು ತೆರೆದುಕೊಳ್ಳುತ್ತಿದೆ. ಮೂಲ ಕಲೆ, ನಶಿಸುತ್ತಾ ಅದನ್ನು ವಿದ್ಯುತ್‍ಲೋಕದ ಒಳಗೆ ಚರ್ಚಾವಿಷಯವಾಗಿ ಅಧ್ಯಯನ ವಿಷಯವಾಗಿ ಬೆಳೆದು ಬರುತ್ತಿದೆ. ಸಾಂಧರ್ಭಿಕ ನೆಲೆಯಿಂದ ಆಚರಿಸಲ್ಪಡುವ ಇಂತಹ ಕಲೆಗಳು ಸಂದರ್ಭದಾಚೆ ಪ್ರದರ್ಶನಗೊಳ್ಳುವ ಸಂದರ್ಭದಲ್ಲಿ ಸಹಜ ಮೂಲವನ್ನು ಕಳೆದುಕೊಳ್ಳುತ್ತಿವೆ. ಇದನ್ನು ತಡೆಹಿಡಿಯಲ್ಲಿ ವ್ಯವಹಾರಿಕ ಬದಲಾವಣೆ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ. ಇಲ್ಲವೆ ಈ ಕಲೆಗೆ ಜೀವ ತುಂಬುವ ಸಮುದಾಯಗಳ ಆರ್ಥಿಕ ಜೀವನಮಟ್ಟವನ್ನು ಸುದಾರಿಸಬೇಕಾಗಿದೆ.

ನಗರಗಳಲ್ಲಿ ಇವು ಮನರಂಜನೆಯ ಕಲೆಗಳಾಗಿ ಪ್ರದರ್ಶನಗೊಳ್ಳುತ್ತಿವೆ. ಸಾಂಸ್ಕೃತಿಕ ಸಹಬಾಗಿತ್ವದಲ್ಲಿ ಈ ಕಲಾವಿದರು ದೇಶ ವಿದೇಶಗಳಲ್ಲಿ ಪ್ರದರ್ಶನಗಳನ್ನು ನೀಡುತ್ತಿದ್ದಾರೆ. ಅಕ್ಷರ ಲೋಕಕ್ಕೆ ಅಧ್ಯಯನದ ವಸ್ತುವಾಗಿದೆ. ವಿಶ್ವವಿದ್ಯಾಲಯದಲ್ಲಿ ಸಂಶೋದನೆಗೆ ಒಳಪಡುವ ವಿಷಯಗಳಾಗಿವೆ. ಒಟ್ಟಿನಲ್ಲಿ ಜನಪದ ಕಲೆಗಳು ಬದಲಾದ ಜೀವನ ಪದ್ದತಿಯಲ್ಲಿ ತನ್ನ ಅಸ್ತತ್ವವನ್ನು ಕಳೆದುಕೊಂಡು ಅಕ್ಷರ, ಸಮೂಹಮಾಧ್ಯಮ ಮುಂತಾದವುಗಳ ಮೂಲಕ ರೂಪಾಂತರಗೊಳ್ಳುತ್ತಿವೆ.

ಡಾ. ನಾಗಭೂಷಣಬಗ್ಗನಡು
ಸಹಾಯಕ ಪ್ರಾಧ್ಯಾಪಕರು,
ಡಾ. ಡಿ.ವಿ. ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರ,
ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು