ಕೆ.ಎನ್.ಪಿ.ವಾರ್ತೆ,ನವದೆಹಲಿ, ಏ.25;

ಉತ್ತಮ ಮುಂಗಾರು ಮಳೆಯಾಗುವ ನಿರೀಕ್ಷೆ ಇದ್ದು, ಜುಲೈನಿಂದ ಆರಂಭವಾಗುವಂತೆ 2017-18ನೇ ಫಸಲು ವರ್ಷದಲ್ಲಿ 273 ದಶಲಕ್ಷ ಟನ್ನುಗಳಷ್ಟು ಸರ್ವಕಾಲಿಕ ಅತ್ಯಧಿಕ ಪ್ರಮಾಣದ ಆಹಾರಧಾನ್ಯಗಳನ್ನು ಉತ್ಪಾದಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ.

ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಸಮಾರಂಭವೊಂದರಲ್ಲಿ ಮಾತನಾಡಿ ಈ ವಿಷಯ ತಿಳಿಸಿದ ಕೃಷಿ ಸಚಿವ ರಾಧಾ ಮೋಹನ್ ಸಿಂಗ್, 273 ದಶಲಕ್ಷ ಟನ್ ಆಹಾರಧಾನ್ಯ ಉತ್ಪಾದನೆ ಗುರಿ ಹೊಂದಲಾಗಿದೆ. ಈ ಬಾರಿ ಉತ್ತಮ ಮುಂಗಾರು ಮಳೆಯಾಗುವ ಆಶಾಭಾವನೆ ಇದೆ. ಇದು ಅಪೇಕ್ಷಿತ ಗುರಿ ಸಾಧನೆಗೆ ಸಹಕಾರಿಯಾಗಲಿದೆ ಎಂದು ಹೇಳಿದರು.

ಕೃಷಿ ಸಚಿವಾಲಯದ ಎರಡನೇ ಅಂದಾಜಿನಂತೆ ಪ್ರಸ್ತುತ ವರ್ಷ (ಜುಲೈ-ಜೂನ್) ಆಹಾರಧಾನ್ಯಗಳ ಉತ್ಪಾದನೆಯು 271.98 ದಶಲಕ್ಷ ಟನ್ನುಗಳ ದಾಖಲೆ ಪ್ರಮಾಣ ತಲುಪಲಿದೆ ಎಂಬುದನ್ನು ಸಚಿವರು ಈ ಸಂದರ್ಭದಲ್ಲಿ ಉಲ್ಲೇಖಿಸಿದರು. ಪ್ರಸಕ್ತ ಸಾಲಿನಲ್ಲಿ ಗೋಧಿ ಉತ್ಪಾದನೆಯಲ್ಲಿಯೂ ದಾಖಲೆ ಸೃಷ್ಟಿಯಾಗಲಿದೆ. 98 ದಶಲಕ್ಷ ಟನ್ನುಗಳಷ್ಟು ಗೋಧಿ ಉತ್ಪಾದನೆಯಾಗಲಿದೆ ಎಂದು ಕೃಷಿ ಸಚಿವಾಲಯ ತಿಳಿಸಿದೆ.