ಕೆ.ಎನ್.ಪಿ.ವಾರ್ತೆ,ಬೆಂಗಳೂರು,ನ.14;

ಅನರ್ಹ ಶಾಸಕರ ಕುರಿತಾಗಿ ಸುಪ್ರೀಂಕೋರ್ಟ್ ನೀಡಿದ ಆದೇಶದ ಬೆನ್ನಲ್ಲೇ ಗುರುವಾರ 16 ಮಂದಿ ಅನರ್ಹ ಶಾಸಕರು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಬೆಳಗ್ಗೆ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಮತ್ತು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಸಮ್ಮುಖದಲ್ಲಿ 16 ಮಂದಿ ಅನರ್ಹ ಶಾಸಕರು ಬಿಜೆಪಿಗೆ ಸೇರ್ಪಡೆಗೊಂಡರು.

ಬಿಜೆಪಿ ಕಚೇರಿ ಮುಂಭಾಗದ ಬೃಹತ್ ವೇದಿಕೆಯ ಮೇಲೆ ಕೇಸರಿ ಶಾಲು ಹೊದ್ದು ಮಿಂಚುತ್ತಿದ್ದ ಅನರ್ಹ ಶಾಸಕರು ಒಬ್ಬೊಬ್ಬರಾಗಿಯೇ ಬಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಯಿಂದ ಪಕ್ಷದ ಬಾವುಟ ಸ್ವೀಕರಿಸಿದರು. ಮುರಳೀಧರ್ ರಾವ್, ನಳೀನ್ ಕುಮಾರ್ ಕಟೀಲ್ ರವರು ಎಲ್ಲರ ಕೈ ಕುಲುಕಿ ಸ್ವಾಗತಿಸಿದರು.

ಇದೇ ವೇಳೆ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, “ನಾನು ಸಿಎಂ ಆಗಲು ಇವರು ಎಲ್ಲವನ್ನು ತ್ಯಾಗ ಮಾಡಿದ್ದಾರೆ. ಅವರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತೇವೆ.

ಉಪಚುನಾವಣೆಯಲ್ಲಿ ೧೫ಕ್ಕೆ ೧೫ ಕ್ಷೇತ್ರಗಳನ್ನು ಗೆಲ್ಲಿಸಿಕೊಂಡು ಬರುತ್ತೇವೆ, ಪಕ್ಷದ ಎಲ್ಲ ಮುಖಂಡರುಗಳು ಹಾಗೂ ಕಾರ್ಯಕರ್ತರು ಇದಕ್ಕೆ ಸಹಕರಿಸಬೇಕೆಂದು ಮನವಿ ಮಾಡಿದರು. ಯಾವುದೇ ಕಾರಣಕ್ಕೂ ಅವರಿಗೆ ಅನ್ಯಾಯ ಮಾಡಲ್ಲ,” ಎಂದು ಅನರ್ಹ ಶಾಸಕರಿಗೆ ಭರವಸೆ ಕೊಟ್ಟರು.

ಶಿವಾಜಿನಗರದ ಅನರ್ಹ ಶಾಸಕ ರೋಷನ್ ಬೇಗ್ ಅವರನ್ನು ಬಿಟ್ಟು ಮಿಕ್ಕ ಎಲ್ಲಾ 16 ಅನರ್ಹ ಶಾಸಕರು ಬಿಜೆಪಿ ಸೇರಿಕೊಂಡಿದ್ದು, ಸಂಜೆ ಅವರಿಗೆ ಬಿಜೆಪಿ ಟಿಕೆಟ್ ಘೋಷಣೆ ಯಾಗುವ ಸಾಧ್ಯತೆಯಿದೆ.

ಹುಣಸೂರು ಕ್ಷೇತ್ರದಿಂದ ಎಚ್. ವಿಶ್ವನಾಥ್ ಅವರು ಕಣಕ್ಕಿಳಿಯುವ ಸಾಧ್ಯತೆ ಕಡಿಮೆ ಇರುವ ಕಾರಣ ಅವರನ್ನು ಹೊರತುಪಡಿಸಿ ಮಿಕ್ಕ ಎಲ್ಲಾ ಕ್ಷೇತ್ರಗಳಿಗೂ ಅನರ್ಹ ಶಾಸಕರೇ ಅಭ್ಯರ್ಥಿಗಳಾಗಲಿದ್ದಾರೆ.

ಹೀಗಾಗಿ ಹುಣಸೂರು ಕ್ಷೇತ್ರದಿಂದ ಯಾರನ್ನು ಬಿಜೆಪಿ ಆಯ್ಕೆ ಮಾಡಲಿದೆ ಎಂಬುದು ಸದ್ಯದ ಕುತೂಹಲವಾಗಿದೆ. 

ಪ್ರಸಕ್ತ ವಿಧಾನಸಭೆಯ ಶಾಸಕರಾಗಿ ಬಂಡಾಯವೆದ್ದು ರಾಜೀನಾಮೆ ನೀಡಿದ್ದ ಹಿನ್ನಲೆಯಲ್ಲಿ ಹಿಂದಿನ ಸ್ಪೀಕರ್ ಕೆ ಆರ್ ರಮೇಶ್ ಕುಮಾರ್ ಅವರನ್ನು ಅನರ್ಹಗೊಳಿಸಿದ್ದರು.

ತಮ್ಮ ಅನರ್ಹತೆಯನ್ನು ಪ್ರಶ್ನಿಸಿ ಶಾಸಕರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ನಿನ್ನೆ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್ ಸ್ಪೀಕರ್ ಆದೇಶವನ್ನು ಎತ್ತಿಹಿಡಿದು ಮುಂದಿನ ತಿಂಗಳು 5ರಂದು ನಡೆಯುವ ಉಪ ಚುನಾವಣೆಯಲ್ಲಿ ಸ್ಪರ್ಧಿಸಬಹುದೆಂದು ತೀರ್ಪು ನೀಡಿದೆ. ಇದರಿಂದ ಅನರ್ಹ ಶಾಸಕರ ರಾಜಕೀಯ ಬದುಕಿಗೆ ಸದ್ಯಕ್ಕೆ ಮರುಚೈತನ್ಯ ಸಿಕ್ಕಂತಾಗಿದೆ.

ಬಿಜೆಪಿ ಸೇರ್ಪಡೆಗೊಂಡ ಶಾಸಕರ ಪಟ್ಟಿ:

 • ಎಚ್. ವಿಶ್ವನಾಥ್
 • ಮಹೇಶ್ ಕುಮಟಳ್ಳಿ
 • ರಮೇಶ್ ಜಾರಕಿಹೊಳಿ
 • ಆರ್. ಶಂಕರ್
 • ಆನಂದ್ ಸಿಂಗ್
 • ಪ್ರತಾಪ್ ಗೌಡ ಪಾಟೀಲ್
 • ಶಿವರಾಂ ಹೆಬ್ಬಾರ್
 • ನಾರಾಯಣ ಗೌಡ
 • ಎಸ್ ಟಿ ಸೋಮಶೇಖರ್
 • ಗೋಪಾಲಯ್ಯ
 • ಬೈರತಿ ಬಸವರಾಜ
 • ಮುನಿರತ್ನ
 • ಎಂಟಿಬಿ ನಾಗರಾಜ್
 • ಡಾ. ಸುಧಾಕರ್ ಕೆ
 • ಶ್ರೀಮಂತ ಪಾಟೀಲ
 • ಬಿ ಸಿ ಪಾಟೀಲ್

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.