ಕಾವೇರಿ ನದಿಗೆ ಆಣೆಕಟ್ಟು: ಟಿಪ್ಪುವಿನ ಕನಸು

1931ರಲ್ಲಿ ನಡೆದ ಇರ್ವಿನ್ ನಾಲಾ ಚಳವಳಿಗೆ ಪ್ರಮುಖವಾಗಿ ಮೂರು ಕಾರಣಗಳು ಇದ್ದವು. ಅವು ಯಾವುವೆಂದರೆ ಇರ್ವಿನ್ ನಾಲಾ ಪ್ರದೇಶದಲ್ಲಿನ ರೈತರು,
1. ಅನುಸರಿಸಬೇಕಾದ ಬ್ಲಾಕ್ ಸಿಸ್ಟಂ ವ್ಯವಸಾಯ ಕ್ರಮ
2. ನೀರಾವರಿಯಾಗುವ ಜಮೀನುಗಳಿಗೆ ಕೊಡಬೇಕಾದ ಕಂದಾಯ
3. ಕಾಂಟ್ರಿಬ್ಯೂಷನ್ ಕಟ್ಟಲು ತಡವಾದರೆ ಅದಕ್ಕೆ ಕೊಡಬೇಕಾದ ಬಡ್ಡಿ

ಇವು ರೈತರಿಗೆ ಮಾರಣಾಂತಿಕವಾಗಿ ತೋರಿದವು. ವಿಶ್ವೇಶ್ವರಯ್ಯ ಸಮಿತಿ 80-100 ರೂ. ಕಾಂಟ್ರಿಬ್ಯೂಷನ್ ಹಣ ನಿಗದಿ ಮಾಡಿತ್ತು. ಅದನ್ನು ಸರ್ಕಾರ 100-150 ರೂ.ಗಳಿಗೆ ಏರಿಸಿತ್ತು. ಇದರಿಂದ ರೈತರು ಆಕ್ರೋಶಕ್ಕೀಡಾಗಿದ್ದರು. ಬ್ಲಾಕ್ ಸಿಸ್ಟಂ ವ್ಯವಸಾಯ ಪದ್ಧತಿಯು ಪ್ರಾದೇಶಿಕ ಜಾಯಮಾನಕ್ಕೆ ಹೊಂದುವಂತಿರಲಿಲ್ಲ. ಇದನ್ನು ಪ್ರತಿಭಟಿಸಲು ಎಚ್.ಕೆ.ವೀರಣ್ಣಗೌಡ, ಇಂಡುವಾಳು ಎಚ್.ಹೊನ್ನಯ್ಯ, ಹೊನಗಾನಹಳ್ಳಿ ಎಚ್.ಕೆ.ಪುಟ್ಟಣ್ಣ ಅವರ ನೇತೃತ್ವದಲ್ಲಿ ಸಂಘಟಿತರಾಗಿ 31.12.1931ರಂದು ಮದ್ದೂರಿನಿಂದ ಬೆಂಗಳೂರಿಗೆ ಕಾಲ್ನಡಿಗೆ ಜಾಥಾ ಹೊರಟರು. ಸುಮಾರು 4000 ಜನರಷ್ಟಿದ್ದ ಜಾಥಾ ಶಿಸ್ತಿನಿಂದ ಬೆಂಗಳೂರಿಗೆ ತಲುಪಿ ದಿವಾನರಿಗೆ ಮನವಿ ಸಲ್ಲಿಸಿತು. ದಿವಾನರು ರೈತರ ಮನವಿಗೆ ಸ್ಪಂದಿಸಿ, ಖುದ್ದು ಮಂಡ್ಯಕ್ಕೆ ಬಂದು ವಿಷಯ ಪರಿಶೀಲಿಸುವುದಾಗಿ ತಿಳಿಸಿದರು.

ದಿವಾನರು ಮಂಡ್ಯಕ್ಕೆ ಬರುವುದಾಗಿ ತಿಳಿಸಿದ್ದರೂ, ಅವರ ಉದ್ದೇಶ ಬೇರೆಯದ್ದೇ ಆಗಿತ್ತು. ತನಗೆ ಅನುಕೂಲಕರವಾಗಿದ್ದ ರೈತರ ಸಭೆ ನಡೆಸಿ, ಸರ್ಕಾರದ ಹುಕುಂಗೆ ಬೆಂಬಲ ಪಡೆಯುವ ಹುನ್ನಾರ ಅದರಲ್ಲಡಗಿತ್ತು. ಗುಟ್ಟಿನಲ್ಲಿ ಸಭೆ ಕರೆದಿರುವುದು ಹೇಗೋ ರೈತ ನಾಯಕರಿಗೆ ತಿಳಿಯಿತು. ದಿವಾನರು ಬರುವ ದಿವಸ ಮಂಡ್ಯದ ಮುಸಾಫಿರ್ ಖಾನೆಯ ಎದುರು ಸುಮಾರು 10,000 ರೈತರು ಸೇರಿದ್ದರು! ಅವರ ಕೈಯ್ಯಲ್ಲಿ ಒಂದು ಕರಪತ್ರವಿತ್ತು. ಕೃಷ್ಣರಾಜಸಾಗರದ ಮಂಟಪದಲ್ಲಿರುವ ಟಿಪ್ಪು ಸುಲ್ತಾನರ ಶಾಸನದ ಕನ್ನಡ ಭಾಷಾಂತರ ಪ್ರತಿ ಅದಾಗಿತ್ತು!! ಈ ಶಾಸನದ ಪ್ರತಿ ಹಿಡಿದಿದ್ದ ರೈತರ ಆಕ್ರೋಶ ಮುಗಿಲು ಮುಟ್ಟಿತ್ತು. ಸರ್ಕಾರಕ್ಕೆ ಇದು ಇರಿಸು ಮುರಿಸು ತಂದಿತ್ತು. ಅಂಥಾದ್ದು ಏನಿತ್ತು ಆ ಶಾಸನದಲ್ಲಿ?

(ಮುಂದುವರೆಯುವುದು)

ಹುತಾತ್ಮ ಟಿಪ್ಪುವಿನ ಕುರಿತಾದ ಸರಣಿ ಲೇಖನಮಾಲೆ ನಿಮ್ಮ ಕೆ.ಎನ್.ಪಿ.ಯಲ್ಲಿ ಪ್ರಕಟಗೊಳ್ಳುತ್ತಿದೆ. ತಪ್ಪದೇ ಓದಿರಿ.

ಸಹಕಾರ: ಸಮಾಜ ವಿಜ್ಞಾನ ಅಧ್ಯಯನ ಸಂಸ್ಥೆ.

ಹುತಾತ್ಮ ಟಿಪ್ಪುಸುಲ್ತಾನ್ ಭಾಗ -10 ಟಿಪ್ಪುವಿನ ಸಾಧನೆ-ವಿಶೇಇಲ್ಲಿ ಕ್ಲಿಕ್ಕಿಸಿಷತೆಗಳು ಓದಲು