ಕೆ.ಎನ್.ಪಿ.ವಾರ್ತೆ,ಹೊಸಪೇಟೆ,ಫೆ.10;
ನಗರದ ಮುನ್ಸಿಪಲ್ ಮೈದಾನದಲ್ಲಿ ಇಂದು ಹಮ್ಮಿಕೊಳ್ಳಲಾಗಿರುವ ಕಾಂಗ್ರೆಸ್ ಜನಾಶೀರ್ವಾದ ಯಾತ್ರೆಯ ನಿಮಿತ್ತ ರಾಹುಲ್ ಗಾಂಧಿ ಹೊಸಪೇಟೆ ನಗರಕ್ಕೆ ಆಗಮಿಸಿದ್ದು, ಸಮಾರಂಭವನ್ನುದ್ದೇಶಿಸಿ ಮಾತನಾಡಿದರು.
ಎಲ್ಲರಿಗೂ ನಮಸ್ಕಾರ ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿದ ರಾಹುಲ್ ಗಾಂಧಿ ಸಮಾವೇಶವನ್ನುದ್ದೇಶಿಸಿ ಮಾತನಾಡಿದರು. ಕರ್ನಾಟಕದ ಜನರು ತಮ್ಮ ಭವಿಷ್ಯದ ಬಗ್ಗೆ ನಿರ್ಣಯ ಕೈಗೊಳ್ಳಬೇಕಿದೆ. ಯಾರ ಮೇಲೆ ವಿಶ್ವಾಸ ಇಡಬೇಕು ಎಂಬುದನ್ನು ನೀವು ತೀರ್ಮಾನಿಸಿ. ಒಂದೆಡೆ ಕಾಂಗ್ರೆಸ್ ಪಕ್ಷವಿದೆ, ಇನ್ನೊಂದೆಡೆ ಬಿಜೆಪಿ ಪಕ್ಷವಿದೆ. ಯಾರು ನಿಜವನ್ನು ಹೇಳುತ್ತಾರೋ ಅವರನ್ನು ನಂಬಬೇಕಾಗಿದೆ. ಕಾಂಗ್ರೆಸ್ ಪಕ್ಷ ಸತ್ಯದ ಪರವಾಗಿದೆ. ಸುಳ್ಳು ಹೇಳುವವರನ್ನು ನಂಬಿದರೆ ನಿಮಗೇನೂ ಸಿಗುವುದಿಲ್ಲ. ನರೇಂದ್ರ ಮೋದಿ ಆಡಳಿತ ಸುಳ್ಳಿನ ಆಡಳಿತವನ್ನು ನಡೆಸಿದೆ.
ಹೈದ್ರಾಬಾದ್ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ನೀಡುವ 371 ಎ ವಿಧಿಯಲ್ಲಿ ತಿದ್ದುಪಡಿ ತರುವಲ್ಲಿ ಹೋರಾಟ ನಡೆಸಿ, ತಿದ್ದುಪಡಿ ತಂದಿದ್ದೇವೆ. ಮೋದಿಯವರು ಚುನಾವಣೆಗೂ ಮುನ್ನ ಹೇಳಿದ್ರು. ಪ್ರತಿಯೊಬ್ಬ ವ್ಯಕ್ತಿಯ ಖಾತೆಗೆ 15 ಲಕ್ಷ ರೂ.ಗಳನ್ನು ಜಮಾ ಮಾಡುತ್ತೇವೆ ಅಂತ. ಆದರೆ ಒಂದು ರೂಪಾಯಿಯನ್ನಾದರೂ ಕೊಟ್ಟಿದ್ದಾರಾ?, ಉದ್ಯೋಗಾವಕಾಶ ಕಲ್ಪಿಸುತ್ತೇವೆ ಎಂದಿದ್ದರು. ಉದ್ಯೋಗಾವಕಾಶ ಸೃಷ್ಟಿಯಾಗಿದೆಯಾ? ಎಂದು ಪ್ರಶ್ನಿಸಿದರು.
ನರೇಂದ್ರ ಮೋದಿಯವರು ಒಂದು ತಾಸಿನ ಭಾಷಣದಲ್ಲಿ ದೇಶದ ಭವಿಷ್ಯದ ಬಗ್ಗೆ ಮಾತನಾಡಲಿಲ್ಲ. ಜನರ ಸಮಸ್ಯಗಳ ಕುರಿತು ಮಾತನಾಡಲಿಲ್ಲ. ಇದು ವಿಪರ್ಯಾಸವೇ ಸರಿ. ಪ್ರಧಾನಿಯವರೇ, 1 ಗಂಟೆಯ ಕಾಲ ಕಾಂಗ್ರೆಸ್ ಅನ್ನು ಅಲ್ಲಗಳೆಯುವ ಕೆಲಸವನ್ನೇ ಮಾಡಿದಿರಿ. ನಾವು ಇತಿಹಾಸದ ಬಗ್ಗೆ ಪಾಠ ಕೇಳೋಕೆ ನಿಮ್ಮನ್ನು ಪ್ರಧಾನ ಮಂತ್ರಿಯನ್ನಾಗಿ ಮಾಡಿಲ್ಲ. ದೇಶದ ಭವಿಷ್ಯದ ಬಗ್ಗೆ ಯೋಚಿಸುವುದಕ್ಕೆ ಪ್ರಧಾನಿಯನ್ನಾಗಿ ಮಾಡಿದ್ದೇವೆ ಎಂದು ರಾಹುಲ್ ಗಾಂಧಿ ಮೋದಿಯವರ ವಿರುದ್ದ ವಾಗ್ದಾಳಿ ನಡೆಸಿದರು.
ನರೇಂದ್ರ ಮೋದಿಯವರು ಸರ್ಕಾರದ ಗಾಡಿಯನ್ನು ಓಡಿಸುವಾಗ ಮುಂದೆ ನೋಡುವ ಬದಲು ಕನ್ನಡಿಯಲ್ಲಿ ಹಿಂದೇನಿದೆ ಎಂದೇ ನೋಡಿಕೊಂಡು ಓಡಿಸುತ್ತಿದ್ದಾರೆ. ಹೀಗೆ ಹಿಂದೆ ನೋಡಿಕೊಂಡು ಓಡಿಸಿದ್ದರಿಂದಲೇ ಅಪನಗದೀಕರಣದಂಥ ಕೆಟ್ಟ ನಿರ್ಧಾರ ಕೈಗೊಂಡಿದ್ದು. ಇದರಿಂದಾಗಿಯೇ ಜಿಎಸ್ಟಿಯನ್ನು ಗಬ್ಬರ್ ಸಿಂಗ್ ಟ್ಯಾಕ್ಸ್ ಅನ್ನಾಗಿ ಬದಲಾಯಿಸಿದ್ದು ಎಂದರು.
ತಾವು ಗುಜರಾತನ್ನು ಬದಲಿಸಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೋದಲ್ಲೆಲ್ಲ ಹೇಳಿಕೊಂಡು ಓಡಾಡುತ್ತಾರೆ. ಆದರೆ ನನಗೆ ಗುಜರಾತಿಗೆ ಹೋದಾಗ ತಿಳಿಯಿತು, ಗುಜರಾತ್ ಬದಲಾಗಿದ್ದು ಮೋದಿಯಿಂದಲ್ಲ, ಗುಜರಾತ್ ಬದಲಾವಣೆಯಾಗಿದ್ದು, ಅಲ್ಲಿನ ಜನ, ವ್ಯಾಪಾರಸ್ಥರು, ರೈತರು, ಕಾರ್ಮಿಕರಿಂದ. ಆದರೆ ಆ ಗುಜರಾತ್ ಅನ್ನು ಇದೀಗ ಪ್ರಧಾನಿ ಮೋದಿಯವರು ಕೆಲ ಉದ್ಯಮಿಗಳಿಗೆ ಕೊಟ್ಟಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಆದರೆ ಭ್ರಷ್ಟಾಚಾರದಲ್ಲಿ ವಿಶ್ವದಾಖಲೆ ಬರೆದಿದ್ದು ಕರ್ನಾಟಕದ ಹಿಂದಿನ ಬಿಜೆಪಿ ಸರ್ಕಾರ ಎಂಬುದನ್ನು ಅವರು ಮರೆತಿದ್ದಾರೆ. ದೇಶದ ಮುಂದಿರೋ ಬಹುದೊಡ್ಡ ಹಗರಣ ಅಂದ್ರೆ ಅದು ರಾಫೆಲ್ ಡೀಲ್. ರಾಫೆಲ್ ಯುದ್ಧ ವಿಮಾನ ಖರೀದಿಯ ಒಪ್ಪಂದವನ್ನು ಎಚ್ ಎಎಲ್ ನಿಂದ ಕಸಿದುಕೊಂಡಿದ್ದು ಏಕೆ? ಇದರಲ್ಲಿ ನಿಮ್ಮ ಹಿತಾಸಕ್ತಿ ಇಲ್ಲವೇ? ಎಂದು ಪ್ರಶ್ನಿಸಿದರು.
ಟಾಟಾ ನ್ಯಾನೊ ಕಂಪನಿಗೆ 33ಸಾವಿರ ಕೋಟಿ ಹಣ, ಉಚಿತ ನೀರು, ವಿದ್ಯುತ್, ನೂರಾರು ಭೂಮಿ ಕೊಟ್ಟರು. ಆದರೇ ಒಂದೇ ಒಂದು ನ್ಯಾನೊ ಕಾರು ಉತ್ಪಾದನೆ ಆಗಿಲ್ಲ.
ಪ್ರಧಾನಿ ಬಡವರ ಬಗ್ಗೆ ಮಾತನಾಡುತ್ತಾರೆ. ಕಡಿಮೆ ಬೆಲೆಗೆ ರೈತರ ಜಮೀನನ್ನು ಉದ್ಯಮಿಗಳಿಗೆ ಕೊಡಿಸುತ್ತಾರೆ. ಆದ್ರೆ 3ತಿಂಗಳಲ್ಲಿ ಆ ಉದ್ಯಮಿ ಅದೇ ಜಮೀನನ್ನು 3ಪಟ್ಟು ಹೆಚ್ಚಿನ ಮೊತ್ತಕ್ಕೆ ಮಾರಿಕೊಳ್ಳುತ್ತಾನೆ. ಇದು ಬಡವರ ಬಗ್ಗೆ ಮೋದಿಯವರಿಗೆ ಇರುವ ಕಾಳಜಿ ಎಂದರು. ಎಸ್.ಸಿ, ಎಸ್.ಟಿ ಅಭಿವೃದ್ದಿಗೆ ಕೇಂದ್ರ 55ಸಾವಿರ ಕೋಟಿ ಕೊಟ್ಟಿದೆ. ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರ್ಕಾರ 27ಸಾವಿರ ಕೋಟಿ ನೀಡಿದೆ. ಸಿದ್ದರಾಮಯ್ಯ ಸಂಕಷ್ಟದಲ್ಲಿ ರೈತರ ಸಾಲ ಮನ್ನಾ ಮಾಡಿದ್ದರು, ಸಿದ್ದರಾಮಯ್ಯ ಜನರಿಗೆ ಬೇಕಾದ ಕೆಲಸಗಳನ್ನು ಮಾಡಿದ್ದಾರೆ. ಮೋದಿಯವರೇ ನಮ್ಮ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಂದ ಸ್ವಲ್ಪ ಪಾಠ ಕಲಿಯಿರಿ ಎಂದು ಮೋದಿ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು.
ಒಬ್ಬರಿಂದಲೇ ದೇಶ ಕಟ್ಟಲು ಸಾಧ್ಯವಿಲ್ಲ. ಕರ್ನಾಟಕ ಇವತ್ತಿನ ಅಭಿವೃದ್ಧಿಗೆ ಕಾರಣ ಈ ರಾಜ್ಯದ ಯುವಕರು, ರೈತಾಪಿಗಳು, ವ್ಯಾಪಾರಸ್ಥರು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿರುವುದು ನಿಮ್ಮೆಲ್ಲರ ಹಾರೈಕೆ ಮತ್ತು ನಿಮ್ಮ ಆಶೀರ್ವಾದದ ಮೇರೆಗೆ. ಅದರಂತೆ ಅವರು ತಮ್ಮ ರಾಜ್ಯವನ್ನು ಸುವ್ಯವಸ್ಥೆಯಲ್ಲಿ ನಡೆಸಿಕೊಂಡು ಹೋಗುತ್ತಿದ್ದಾರೆ ಎಂದು ಹೇಳಿದರು. ಮುಂದಿನ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದೇ ಬರುತ್ತದೆ. ಈ 5 ವರ್ಷದಲ್ಲಿ ಏನೂ ಕೆಲಸ ಮಾಡಿದ್ದೇವೆ. ಮುಂದೆ ಅದಕ್ಕೂ ದುಪ್ಪಟ್ಟು ಕೆಲಸ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ವೇಳೆ, ಮುಂಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಎಐಸಿಸಿ ಪ್ರಧಾನಕಾರ್ಯದರ್ಶಿ ವೇಣುಗೋಪಾಲ್, ಬಿಕೆ ಹರಿಪ್ರಸಾದ್, ನಟ ಅಂಬರೀಷ್, ಸಂತೋಷ್ ಲಾಡ್, ಆನಂದ್ ಸಿಂಗ್, ಮಲ್ಲಿಖಾರ್ಜುನ್ ಖರ್ಗೆ ಸೇರಿದಂತೆ ಮುಂತಾದ ಕೆಪಿಸಿಸಿ ಮುಖಂಡರು ಉಪಸ್ಥಿತರಿದ್ದರು.