ಕೆ.ಎನ್.ಪಿ.ವಾರ್ತೆ,ಬಳ್ಳಾರಿ,ಫೆ.06;

ಸರಕಾರದ ಇಚ್ಚೆಯಂತೆ, ಜಿಲ್ಲೆಯಲ್ಲಿ ಸಾವಿರಾರು ರೈತರು 2,25,232 ಎಕರೆ ಮೆಕ್ಕೆಜೋಳವನ್ನು ಮತ್ತು 1,13,267 ಎಕರೆ ಜೋಳವನ್ನು ಬೆಳೆದಿದ್ದಾರೆ. ಸರ್ಕಾರ ಈ ಬೆಳೆಗಳಿಗೆ ಮಾರುಕಟ್ಟೆ ನಿರ್ಮಿಸಿ ಬೆಂಬಲಬೆಲೆ ನಿಗದಿಪಡಿಸಬೇಕೆಂದು ತುಂಘಭದ್ರ ರೈತರ ಸಂಘದ ಅಧ್ಯಕ್ಷ ದರೂರ್ ಪುರುಷೋತ್ತಮ ಗೌಡ ಒತ್ತಾಯಿಸಿದ್ದಾರೆ.

ನಿನ್ನೆ ನಗರದ ಖಾಸಗಿ ಹೋಟೆಲ್‍ನಲ್ಲಿ ನಡೆದ ಸುಧ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರಿಗೆ ನೀರಿನ ಸಮಸ್ಯೆ ಎದುರಾಗಬಹುದು ಎಂಬ ಕಾರಣದಿಂದ ಭತ್ತ ಬೆಳೆಯುವ ಬದಲು ಬೇರೆ ವಿದಧ ಬೆಳೆಗಳನ್ನು ಬೆಳೆಯಿರಿ ಎಂದು ರೈತರಲ್ಲಿ ಸರ್ಕಾರದವರು ಮನವಿ ಮಾಡಿದ್ದರು.

ಈ ಮನವಿಗೆ ಸ್ಪಂದಿಸಿದ ರೈತರು ಮೆಕ್ಕೆಜೋಳ ಮತ್ತು ಜೋಳವನ್ನು ಬೆಳೆದಿದ್ದಾರೆ. ಆದರೆ ಮಾರುಕಟ್ಟೆಯಲ್ಲಿ ಸರ್ಕಾರ ಇದುವರೆಗೂ ಇದಕ್ಕೆ ಯಾವುದೆ ಬೆಲೆ ನಿಗಧಿಪಡಿಸಿಲ್ಲ. ಇದರಿಂದ ರೈತರು ಕಂಗಾಲಾಗಿದ್ದಾರೆ. ಈ ಬೆಳೆಗಳನ್ನು ಖರೀದಿಸಲು ಮಾರುಕಟ್ಟೆ ಕೇಂದ್ರವನ್ನು ತೆರೆಯಬೇಕು ಮತ್ತು ಎರಡು ಬೆಳೆಗಳಿಗೆ 2000 ರೂ ನಿಗಧಿಪಡಿಸಿದರೆ ಎಲ್ಲಾ ಭಾಗದ ರೈತರು ತಮ್ಮ ಬೆಳೆಗಳನ್ನು ಕೇಂದ್ರಕ್ಕೆ ನೀಡುತ್ತಾರೆಂದು ತಿಳಿಸಿದರು.

ತೊಗರಿ ಕೇಂದ್ರದ ಅವಧಿ ವಿಸ್ತರಣೆ :

ಜಿಲ್ಲೆಯಲ್ಲಿ ತೊಗರಿ ಖರೀದಿ ಕೇಂದ್ರವನ್ನು ತೆರೆದಿರುವ ಬಗ್ಗೆ ಇನ್ನೂ ಕೆಲವು ರೈತರಿಗೆ ಗೊತ್ತೇ ಇಲ್ಲ. ಅಧಿಕಾರಿಗಳು ಸಹ ಪತ್ರಿಕಾಗೋಷ್ಠಿ ನಡೆಸಿ ತೊಗರಿ ಖರೀದಿ ಕೇಂದ್ರ ತೆಗೆದಿರುವ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಇದರಿಂದ ಹಲವಾರು ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಸಧ್ಯದಲ್ಲಿ ಬಂದ್ ಮಾಡಿರುವ ತೊಗರಿ ಖರೀದಿ ಕೇಂದ್ರವನ್ನು ತೆರೆಯಬೇಕು ಮತ್ತು ಅದನ್ನು ಪತ್ರಿಕಾ ಪ್ರಕಟಣೆಯ ಮೂಲಕ ರೈತರಿಗೆ ತಿಳಿಸಬೇಕು ಈ ತೊಗರಿ ಕೇಂದ್ರದ ಅವಧಿಯನ್ನು 1 ತಿಂಗಳ ಅವಧಿಗೆ ವಿಸ್ತರಿಸಬೇಕು ಎಂದರು.

ಕಾಲುವೆಗೆ ನೀರು ಹರಿಸುವಂತೆ ಒತ್ತಾಯ :

ಐ.ಸಿ.ಸಿ. ಸಭೆಯ ತೀರ್ಮಾನದಂತೆ, ನೀರಾವರಿ ಇಲಾಖೆ ಮತ್ತು ಟಿ.ಬಿ.ಬೋಡ್ ಮಾ.31ರಂದು ಕಾಲುವೆಗಳಿಗೆ ನೀರು ಹರಿಸುತ್ತೇವೆ ಎಂದು ಒಪ್ಪಿಗೆ ಸೂಚಿಸಿತ್ತು. ಅದರಂತೆ ನೀರು ಹರಿಸಬೇಕೆಂದು ಹೇಳಿದರು.

ಎಚ್ಚರಿಕೆ :

ನೀರಾವರಿ ಇಲಾಖೆಯು ರೈತರೊಂದಿಗೆ ಚಲ್ಲಾಟವಾಡುತ್ತಿದೆ. ರೈತರಿಗೆ ಸಮಯಕ್ಕೆ ಸರಿಯಾಗಿ ಕಾಲುವೆಗಳಿಗೆ ನೀರು ಹರಿಸದೆ ಹೋದರೆ ಎಲ್.ಎಲ್.ಸಿ. ಕಾಲುವೆಯಲ್ಲಿ 2ಲಕ್ಷ 50 ಸಾವಿರ ಎಕರೆಗೆ ಭತ್ತ ನಾಟಿ ಮಾಡಿದ್ದು. ಪ್ರತಿ ಎಕರೆಗೆ 30,000 ಸಾವಿರ ಖರ್ಚು ಸೇರಿ ಒಟ್ಟು 700 ಕೋಟಿ ಹಣದ ಹೊಣೆಯನ್ನು ನೀರಾವರಿ ಇಲಾಖೆ ಮತ್ತು ಅಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಹೊರಬೇಕಾಗುತ್ತದೆ. ಅವರೆ ರೈತರಿಗೆ  ಪರಿಹಾರದ ಹಣವನ್ನು ನೀಡಬೇಕು ಎಂದು ಎಚ್ಚರಿಸಿದರು.

3 ಜಿಲ್ಲೆಗಳ ಜನಪ್ರತಿನಿಧಿಗಳ ಸಭೆ : ಫೆ.06ರಂದು ಸಿಂಧನೂರಿನಲ್ಲಿ ಕೊಪ್ಪಳ, ರಾಯಚೂರು, ಬಳ್ಳಾರಿ, ಜಿಲ್ಲೆಗಳ ರಾಜಕೀಯ ಮುಖಂಡರು, ಜಿಲ್ಲಾ ಮಂತ್ರಿಗಳು, ಸಂಸದರು, ಅಧಿಕಾರಿಗಳ ಸಭೆ ನಡೆಯಲಿದೆ. ಹಾಗೂ ಫೆ.15 ರಂದು ಬಳ್ಳಾರಿಯ ಬಿಡಿಎಎ ಮೈದಾನದಲ್ಲಿ ತುಂಗಭಧ್ರ ಅಳಿವು ಉಳಿವಿನ ಸಭೆಯನ್ನು ಹಮ್ಮಿಕೊಳ್ಳಲಾಗಿದೆ. ರೈತರು ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿವಿಧ ತಾಲೂಕುಗಳಿಂದ ಬಂದ ರೈತರು ಈ ಪತ್ರಿಕಾ ಗೋಷ್ಠಿಯಲ್ಲಿ ಭಾಗವಹಿಸಿದ್ದರು.

ವರದಿ : ಟಿ.ಗಣೇಶ್