ಕೆ.ಎನ್.ಪಿ.ವಾರ್ತೆ,ಮುಂಬೈ,ಜ.29;

ತೀವ್ರ ವಿವಾದದ ನಡುವೆಯೂ ಸಂಜಯ್‌ಲೀಲಾ ಬನ್ಸಾಲಿ ನಿರ್ದೇಶನದ ‘ಪದ್ಮಾವತ್’ ಚಿತ್ರ ಕಳೆದ ಜ.25ರಂದು ವಿಶ್ವದಾದ್ಯಂತ ಬಿಡುಗಡೆಯಾಗಿದ್ದು, ಉತ್ತಮ ಪ್ರದರ್ಶನ ಕಾಣುತ್ತಿದೆ.

ಚಿತ್ರದಲ್ಲಿ ನಟಿ ದೀಪಿಕಾ ಪಡುಕೋಣೆ ಹಾಗೂ ರಣವೀರ್‌ ಸಿಂಗ್‌ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಚಿತ್ರ ಬಿಡುಗಡೆಯಾದ ನಾಲ್ಕೇ ದಿನಕ್ಕೆ ₹110 ಕೋಟಿ ಗಳಿಸಿದೆ. ಆರಂಭಿಕ ದಿನದ ಗಳಿಕೆಯಲ್ಲಿ ಸುಮಾರು 50-55% ಉತ್ತಮ ಪ್ರದರ್ಶನ ಕಂಡಿದೆ ಎಂದು BoxOfficeIndia.com ವರದಿ ಪ್ರಕಾರ ತಿಳಿದುಬಂದಿದೆ.

ಚಿತ್ರವು ಜ.25 ರಂದು ಬಿಡುಗಡೆಯಾಗಿದ್ದರೂ, 24 ರ ಸಂಜೆ ಕೆಲವು ಕಡೆ ಈ ಚಿತ್ರವನ್ನು ಪ್ರದರ್ಶಿಸಲಾಯಿತು. ಬನ್ಸಾಲಿ ನಿರ್ದೇಶನದ ಈ ಚಿತ್ರ 190 ಕೋಟಿ ರೂಪಾಯಿಗಳ ಬಜೆಟ್ ನಿಂದ ತಯಾರಿಸಲ್ಪಟ್ಟಿದ್ದು, ಹಿಂದಿ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಈ ಹಿಂದೆ ಚಿತ್ರದಲ್ಲಿ ಇತಿಹಾಸವನ್ನು ತಿರುಚಲಾಗಿದೆ ಎಂದು ರಾಜಸ್ಥಾನ, ಗುಜರಾತ್‌, ಮಹಾರಾಷ್ಟ್ರ ಸೇರಿದಂತೆ ಹಲವೆಡೆ ಚಿತ್ರ ಬಿಡುಗಡೆ ಮಾಡದಂತೆ ಒತ್ತಾಯಿಸಿ ಪ್ರತಿಭಟನೆಗಳು ನಡೆದಿದ್ದವು.