ಕೆ.ಎನ್.ಪಿ.ವಾರ್ತೆ,ಬೆಂಗಳೂರು, ಫೆ.03;
ನಾಳೆ ಬೆಂಗಳೂರು ಬಂದ್ ಬದಲಿಗೆ ಕರಾಳ ದಿನ ಆಚರಣೆ ಮಾಡುತ್ತೇವೆ ಎಂದು ವಾಟಾಳ್ ನಾಗರಾಜ್ ತಿಳಿಸಿದ್ದಾರೆ.
ನಾಳೆ ಬೆಂಗಳೂರು ಬಂದ್ ಮಾಡುವುದಿಲ್ಲ. ನ್ಯಾಯಾಲಯದ ಆದೇಶಕ್ಕೆ ತಲೆಬಾಗಿ ಬಂದ್ ವಾಪಸ್ ಪಡೆದಿದ್ದೇವೆ ಆದರೆ ಬಂದ್ ಬದಲಿಗೆ, ಕರಾಳ ದಿನ ಆಚರಣೆ ಮಾಡುತ್ತೇವೆ ಎಂದು ಕನ್ನಡ ಚಳುವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ತಿಳಿಸಿದ್ದಾರೆ. ಈ ಕುರಿತು ನಗರದಲ್ಲಿ ನಿನ್ನೆ ಮಾತನಾಡಿದ ವಾಟಾಳ್ ನಾಗರಾಜ್, ಬಂದ್ ವಿರೋಧಿಸಿ, ನಮ್ಮವರೇ ಮಿರ್ ಸಾಧಿಕ್ ರಂತೆ ವರ್ತಿಸಿ, ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಕರ್ನಾಟಕ ಹೈಕೋರ್ಟ್ ಆದೇಶಕ್ಕೆ ತಲೆಬಾಗಿ, ಮಹದಾಯಿ ವಿಚಾರದಲ್ಲಿ ಪ್ರಧಾನಿ ಮಧ್ಯಸ್ಥಿಕೆಗೆ ಆಗ್ರಹಿಸಿ, ಕನ್ನಡ ಒಕ್ಕೂಟ ನಾಳೆ ನಡೆಸಲು ಉದ್ದೇಶಿಸಿದ್ದ ಬೆಂಗಳೂರು ಬಂದ್ ವಾಪಸ್ ಪಡೆಯಲಾಗಿದೆ. ಬದಲಿಗೆ, ನಾಳೆ ‘ಕರಾಳ ದಿನ’ ಆಚರಿಸಿ ನಗರಕ್ಕೆ ಆಗಮಿಸಲಿರುವ ಪ್ರಧಾನಿಗೆ ಕಪ್ಪು ಬಾವುಟ ಪ್ರದರ್ಶಿಸಲು ಒಕ್ಕೂಟ ತೀರ್ಮಾನಿಸಿದೆ. ಜೊತೆಗೆ ಸಾವಿರಾರು ಕಾರ್ಯಕರ್ತರೊಂದಿಗೆ ನಗರದ ಫ್ರೀಡಂ ಪಾರ್ಕ್‌ನಿಂದ ಅರಮನೆ ಮೈದಾನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸುತ್ತೇವೆ ಎಂದು ವಾಟಾಳ್ ಸ್ಪಷ್ಟಪಡಿಸಿದರು.
ಈ ವೇಳೆ ಬಿಜೆಪಿ ನಾಯಕರ ವಿರುದ್ದ ವಾಗ್ದಾಳಿ ನಡೆಸಿದ ಅವರು, ”ಕುಡಿಯುವ ನೀರಿಗಾಗಿ ಮಹದಾಯಿ-ಕಳಸಾ ಬಂಡೂರಿ ಯೋಜನೆ ಜಾರಿಗೆ ಆಗ್ರಹಿಸಿ ಉತ್ತರ ಕರ್ನಾಟಕದ ಜನರು ಕಳೆದ ಮೂರು ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದಾರೆ. ಈ ಕುರಿತು ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಯಾವೊಬ್ಬ ಬಿಜೆಪಿಯ ಅಧಿಕಾರಿಯು ಪ್ರಧಾನಿ ಮಧ್ಯಸ್ಥಿಕೆ ವಹಿಸಿ ಸಮಸ್ಯೆಯನ್ನು ಪರಿಹರಿಸಲು ಒತ್ತಾಯಿಸುತ್ತಿಲ್ಲ. ಮತ್ತು ಅದರ ಬಗ್ಗೆ ಮಾತನಾಡುತ್ತಿಲ್ಲ. ಜನಪ್ರತಿನಿಧಿಗಳು ಮಾಡಬೇಕಾಗಿರುವ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಪ್ರಧಾನಿ ಮಧ್ಯಪ್ರವೇಶಿಸಿ ಸಮಸ್ಯೆ ಇತ್ಯರ್ಥಪಡಿಸಬೇಕು ಎಂಬುದು ನಮ್ಮ ಆಗ್ರಹ. ಬಿಜೆಪಿಯವರಿಗೆ ತಾಕತ್ತಿದ್ದರೆ ಪ್ರಧಾನಿ ಅವರಿಂದ ಸಕಾರಾತ್ಮಕ ಹೇಳಿಕೆ ಕೊಡಿಸಲಿ” ಎಂದು ಸವಾಲೆಸೆದರು.