ಕೆ.ಎನ್.ಪಿ.ವಾರ್ತೆ,ಸಿನಿಸಮಾಚಾರ;

ನಟಿ ಭಾವನಾ ಮತ್ತು ನವೀನ್ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

‘ಜಾಕಿ’ ಸೇರಿದಂತೆ ಹಲವಾರು ಕನ್ನಡ ಚಿತ್ರಗಳ ಮೂಲಕ ಕನ್ನಡಿಗರ ಮನಗೆದ್ದ ಖ್ಯಾತ ನಟಿ ಭಾವನಾ, ನಿರ್ಮಾಪಕ ನವೀನ್‌ ಜೊತೆ ಇಂದು ಬೆಳಿಗ್ಗೆ ಸಪ್ತಪದಿ ತುಳಿಯುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಗಣೇಶ್ ಅಭಿನಯದ ರೋಮಿಯೋ ಚಿತ್ರದಲ್ಲಿ ಭಾವನಾ ಅಭಿನಯಿಸಿದ್ದ ವೇಳೆ ನವೀನ್ ಅವರ ಪರಿಚಯವಾಗಿತ್ತು. ಸುಮಾರು ಆರು ವರ್ಷಗಳಿಂದ ಪ್ರೇಮ ಪಕ್ಷಿಗಳಾಗಿದ್ದ ನವೀನ್ ಹಾಗೂ ಭಾವನಾ ಇಂದು ಬಾಳಿನ ನೂತನ ಅಧ್ಯಾಯವನ್ನು ಆರಂಭಿಸಿದ್ದಾರೆ.

ಭಾವನಾ ಕೇರಳ ಮೂಲದವರಾಗಿರುವುದರಿಂದ, ತ್ರಿಶೂರ್ ನಲ್ಲಿರುವ ತಿರುವಂಬಾಡಿ ಶ್ರೀಕೃಷ್ಣ ದೇವಸ್ಥಾನದಲ್ಲಿ, ಕುಟುಂಬದ ಆಪ್ತರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ವಿವಾಹ ನೆರವೇರಿದ್ದು, ಅಭಿಮಾನಿಗಳಿಗೆ ಮತ್ತು ಚಿತ್ರರಂದ ಗಣ್ಯರಿಗಾಗಿ ಫೆ.4ರಂದು ಅದ್ಧೂರಿ ಆರತಕ್ಷತೆಯನ್ನು ಏರ್ಪಡಿಸಲಾಗಿದೆ. ಈ ಹಿಂದೆ, 2017 ಮಾರ್ಚ್‌ 9ರಂದು ಭಾವನಾ-ನವೀನ್‌ ಅವರ ನಿಶ್ಚಿತಾರ್ಥ ನಡೆದಿತ್ತು.

ಕನ್ನಡದ ಬಹುತೇಕ ಸ್ಟಾರ್‌ ನಟರೊಂದಿಗೆ ತೆರೆ ಹಂಚಿಕೊಂಡಿರುವ ಭಾವನಾ, ಪುನೀತ್‌, ಸುದೀಪ್‌, ಉಪೇಂದ್ರ, ಗಣೇಶ್‌ ಸೇರಿದಂತೆ ಇತರರೊಂದಿಗೆ ಅಭಿನಯಿಸಿ ಕನ್ನಡಿಗರ ಮನಗೆದ್ದಿದ್ದಾರೆ. ‘ವಿಷ್ಣುವರ್ಧನ’, ‘ಬಚ್ಚನ್‌’, ‘ಚೌಕ’, ‘ಟೋಪಿವಾಲಾ’ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿರುವ ಭಾವನಾ, ಮಲಯಾಳಂ, ತೆಲುಗು ಮತ್ತು ತಮಿಳು ಚಿತ್ರರಂಗದಲ್ಲೂ ಗುರುತಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಶಿವರಾಜ್‌ ಕುಮಾರ್‌ ಅಭಿನಯದ ‘ಟಗರು’ ಚಿತ್ರದಲ್ಲಿ ಭಾವನಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಫೆಬ್ರವರಿಯಲ್ಲಿ ಚಿತ್ರ ಬಿಡುಗಡೆಯಾಗಲಿದೆ.