ಕೆ.ಎನ್.ಪಿ.ವಾರ್ತೆ,ಅಗರ್ತಲಾ,ಮಾ.10;

ತ್ರಿಪುರಾದ ಮುಖ್ಯಮಂತ್ರಿಯಾಗಿ ವಿಪ್ಲವ್‌ ಕುಮಾರ್‌ ದೇವ್‌ ಮತ್ತು ಉಪ ಮುಖ್ಯಮಂತ್ರಿಯಾಗಿ ಜಿಷ್ಣು ದೇವ್‌ ಬರ್ಮನ್‌ ನಿನ್ನೆ ಪ್ರಮಾಣ ವಚನ ಸ್ವೀಕರಿಸಿದರು.

ಅಸ್ಸಾಂ ರೈಫಲ್ಸ್‌ ಮೈದಾನದಲ್ಲಿ ನಿನ್ನೆ ಅದ್ದೂರಿಯಾಗಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ತಥಾಗತ್‌ ರಾಯ್‌ ಪ್ರಮಾಣ ವಚನ ಬೋಧಿಸಿದರು.

ಫೆ.18 ರಂದು ನಡೆದ ತ್ರಿಪುರ ವಿಧಾನಸಭೆ ಚುನಾವಣೆಯಲ್ಲಿ 25 ವರ್ಷಗಳ ಸಿಪಿಐಎಂ ಆಡಳಿತಕ್ಕೆ ತೆರೆ ಬಿದ್ದಿದ್ದು, ಬಿಜೆಪಿ ಮುನ್ನಡೆ ಸಾಧಿಸಿದೆ. ಈ ನಿಟ್ಟಿನಲ್ಲಿ ಬಿಜೆಪಿಯ ಐವರು ಮತ್ತು ಮಿತ್ರಪಕ್ಷ ಐಪಿಎಫ್‌ಟಿಯ ಇಬ್ಬರು ಸೇರಿ 7 ಸಚಿವರ ಸಂಪುಟ ಅಸ್ತಿತ್ವಕ್ಕೆ ಬಂದಿದ್ದು, ಐಪಿಎಫ್‌ಟಿ ಮುಖ್ಯಸ್ಥ ಎನ್‌.ಸಿ. ದೇವ್‌ ಬರ್ಮನ್‌ ಮತ್ತು ಒಬ್ಬ ಮಹಿಳೆ ಸಂಪುಟದಲ್ಲಿದ್ದಾರೆ.

ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ಹಿರಿಯ ನಾಯಕ ಎಲ್‌.ಕೆ. ಅಡ್ವಾಣಿ, ಮುರಳಿ ಮನೋಹರ್‌ ಜೋಷಿ, ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್‌, ನಿರ್ಗಮಿತ ಮುಖ್ಯಮಂತ್ರಿ ಮಾಣಿಕ್‌ ಸರ್ಕಾರ್‌ ಮತ್ತು ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸಿದ್ದರು.