ಕೆ.ಎನ್.ಪಿ.ಅಂಕಣ,

ಡಾ|| ಶಿವಕುಮಾರ ಮಾಲಿಪಾಟೀಲ್

ಗಲಭೆ…

ಒಂದು ದಿನ ಸಂಜೆಯ ಸಮಯ, ಒಂದನ್ನು ನೋಡಿ ಇನ್ನೊಂದು ಓಡಿ ಬಂದ ಸಾಕು ನಾಯಿಗಳು ಸ್ವಲ್ಪ ಸಮಯದಲ್ಲೇ 5-6 ಕೂಡಿದವು. ಹಾಗೆ ಸುತ್ತಾಡುತ್ತಾ ಹೊರಟ ನಾಯಿಗಳು ತಮ್ಮ ನಾಲಿಗೆ ರುಚಿಗೆ ಏನಾದರೂ ಸಿಗಬಹುದು ಅಂತ ತಿಪ್ಪೆಯನ್ನು ಗೆಬರುತ್ತಿದ್ದವು. ಅದರಲ್ಲಿ ಎರಡು ಮೂರು ನಾಯಿಗಳು ಚಪ್ಪಲಿ ಕಡಿಯುವ ದುಶ್ಚಟಕ್ಕೆ ಬಿದ್ದಿದ್ದವು. ಇನ್ನೆರಡು ಮಾಂಸ ತಿನ್ನುವ ಚಟಕ್ಕೆ ಮಾರು ಹೋಗುತ್ತಿದ್ದವು. ಒಂದು ನಾಯಿಯ ಅದೃಷ್ಟ, ಹರಿದ ಚಪ್ಪಲಿ ಸಿಕ್ಕಿಬಿಟ್ಟಿತು. ಅದನ್ನು ನೋಡಿದ ಇನ್ನುಳಿದ ನಾಯಿಗಳು ಸೇರಿ ಹರಿದ ಚಪ್ಪಲಿಗಾಗಿ ಕಿತ್ತಾಡತೊಡಗಿದವು. ಅಷ್ಟರಲ್ಲೇ ಬಂದ ಬೀದಿ ನಾಯಿ, ಒಂದು ಚಪ್ಪಲಿಗಾಗಿ ಮೂರು ನಾಯಿಗಳು ಜಗಳ ಆಡುವುದನ್ನು ನೋಡಿ, ಅಯ್ಯೋ ನಿಮಗೆ ಚಪ್ಪಲಿ ಎಷ್ಟು ಬೇಕು ಅಷ್ಟು ಕೊಡುಸ್ತೀನಿ ನನ್ನ ಮಾತು ಕೇಳಿರಿ ಅಂದಿತು. ಅದನ್ನು ಕೇಳಿದ ತಕ್ಷಣ ಬೀದಿ ನಾಯಿಯ ಹತ್ತಿರ ಬಂದು ನಿಂತು ಏನು ಸುಳ್ಳುಗಾರ ದಿನಕ್ಕೊಂದು ಸುಳ್ಳು ಹೇಳುತ್ತಾ ಬೀದಿ ಬೀದಿ ಸುತ್ತಿತ್ತಿ, ಇವತ್ತಾದರೂ ನಿನ್ನನ್ನು ನಂಬಬೇಕೆ? ಅಂತ ಕೇಳಿದವು. ಆಗ ಬೀದಿ ನಾಯಿ ನಾನು ಸುಳ್ಳು ಹೇಳುವುದಿಲ್ಲ. ನಿಮಗೆ ಎಷ್ಟು ಬೇಕು ಅಷ್ಟು ಚಪ್ಪಲಿ ಸಿಗುತ್ತವೆ ಆದರೆ ನಾನು ಹೇಳಿದಂತೆ ನೀವು ಕೇಳಬೇಕು, ಇಂದು ನಾ ಹೇಳಿದಂತೆ ಮಾಡಿದರೆ ನಾಳೆ ನಿಮಗೆ ಪಕ್ಕಾ ಸಿಗುವುವು. ಮಾಂಸ ತಿನ್ನುವ ನಾಯಿಗಳು ಓಡಿ ಬಂದು ನಾವು ನಿನ್ನ ಮಾತು ಕೇಳುತ್ತೇವೆ ನಮಗೂ ಮಾಂಸ ಬೇಕು ಅಂತ ಕೇಳಿಕೊಂಡವು. ಅದಕ್ಕೆ ಬೀದಿ ನಾಯಿ ನೋಡೋಣ ನಿಮ್ಮ ಅದೃಷ್ಟ ಇದ್ದರೆ ಸಿಗಬಹುದು. ಮೊದಲು ನಾನು ಹೇಳುವ ಕೆಲಸ ಸರಿಯಾಗಿ ಮಾಡಿರಿ ಅಂದಿತು.

ಅದಕ್ಕೆ ಒಕ್ಕಟ್ಟಿನಿಂದ ಸೇರಿದ ನಾಯಿಗಳು ಕೆಲಸ ಏನು ಬೇಗನೆ ಹೇಳು ಅಂದವು. ಅದಕ್ಕೆ ಬೀದಿ ನಾಯಿ ಈ ಕೆಲಸ ಬಹು ಜಾಗರೂಕತೆಯಿಂದ ಮಾಡಬೇಕು. ಈ ಕೆಲಸ ಇಷ್ಟೇ ನಿಮ್ಮಲ್ಲಿರುವ ಚಪ್ಪಲಿಯ ತುಂಡನ್ನು ಪೂಜಾ ಮಂದಿರದ ಒಳಗಡೆ ಇಟ್ಟು ಬರಬೇಕು. ನೀವು ಹಾಕುವುದನ್ನು ಯಾರೂ ನೋಡಬಾರದು ಮತ್ತು ಇದರ ಜೊತೆಗೆ ಐದಾರು ಸಣ್ಣ ಕಲ್ಲುಗಳನ್ನೂ ಸಹ ಹಾಕಿರಿ ಅಂದಿತು.

ಈ ಉಪಾಯ ಕೇಳಿದ ಮುಗ್ಧ ನಾಯಿಗಳು ನಗಲು ಪ್ರಾರಂಭಿಸಿದವು. ನಾವು ಚಪ್ಪಲಿ ಕಲ್ಲುಗಳನ್ನು ಹಾಕಿದರೆ ನಮಗೆ ಮರಳಿ ಚಪ್ಪಲಿಗಳು, ಮಾಂಸ ಹೇಗೆ ಸಿಗುತ್ತದೆ ಅಂತ ಪ್ರಶ್ನಿಸಿದವು. ಅದಕ್ಕೆ ಬೀದಿ ನಾಯಿ ನಾನು ಈಗ ಹೇಳಿದಂತೆ ಸ್ವಲ್ಪವೂ ತಪ್ಪಾಗದಂತೆ ಮಾಡಿರಿ ನಿಮಗೆ ಚಪ್ಪಲಿಗಳು, ಮಾಂಸ ಸಿಗದಿದ್ದರೆ ನಾನು ಮತ್ತೇ ನಿಮ್ಮಲ್ಲಿಗೆ ಬರುವುದಿಲ್ಲ ಅಂತ ಅಂದಿತು.

ಏನೂ ಅರಿಯದ ಮುಗ್ಧ ನಾಯಿಗಳು ನೋಡೋಣ ಇದೇನು ಬಹಳ ದೊಡ್ಡ ಕೆಲಸ ಅಲ್ಲ ಅಂತ ಆ ಚಪ್ಪಲಿಯ ತುಂಡನ್ನು ಒಂದು ಹಿಡಿದರೆ, ಉಳಿದ ನಾಯಿಗಳು ಬಾಯಲ್ಲಿ ಒಂದೊಂದು ಕಲ್ಲುಗಳನ್ನು ಹಿಡಿದು, ಪ್ರಾರ್ಥನಾ ಮಂದಿರದ ಕಡೆಗೆ ಹೊರಟವು. ಯಾರೂ ಇಲ್ಲದ ಸಮಯ ನೋಡಿ ಒಳಗಡೆ ಹಾಕಿ ಓಡಿ ಬಂದವು. ಅಲ್ಲೇ ನಿಂತಿದ್ದ ಬೀದಿ ನಾಯಿಯ ಕಡೆಗೆ ಓಡಿ ಬಂದು ನೀನು ಹೇಳಿದಂತೆ ಮಾಡಿದ್ದೇವೆ ಅಂದವು. ಅದಕ್ಕೆ ಬೀದಿ ನಾಯಿ ಆಯ್ತು ನೀವು ಮುಂಜಾನೆ ಈ ಜಾಗಕ್ಕೆ ಬನ್ನಿರಿ ನಾನೂ ಬರುತ್ತೇನೆ. ಅಂತ ಹೇಳಿ ಹೊರಟು ಹೋಯಿತು.

ಮರುದಿನ ಮುಂಜಾನೆ ಚಪ್ಪಲಿ, ಕಲ್ಲುಗಳು ಪೂಜಾ ಮಂದಿರದಲ್ಲಿ ಬಿದ್ದಿದ್ದನ್ನು ನೋಡಿದ ಜನರು ದಿಗ್ಭ್ರಾಂತಗೊಂಡರು! ಸ್ವಲ್ಪ ಸಮಯದಲ್ಲೇ ನೂರಾರು ಜನರು ಜಮಾಯಿಸಿದರು. ಆ ದೃಶ್ಯವನ್ನು ನಂಬಲು ಅವರಿಗೆ ಅಸಾಧ್ಯವಾಯಿತು. ರಾಜಕೀಯ ಧುರೀಣರು ಈ ಅವಕಾಶ ಬಳಸಿ ಘಟನೆಗೆ ರಾಜಕೀಯ ಬಣ್ಣ ಹಚ್ಚಿದರು. ಜನರು ಸಹೋದರತ್ವ ಮರೆತರು. ತಾಳ್ಮೆ ಕಳೆದುಕೊಂಡು ಸಿಟ್ಟಿಗೆದ್ದರು, ಇದು ಬೇರೆ ಕೋಮಿನವರ ಕೆಲಸ ಎಂದು ಅವರ ಮನೆಗಳ ಮೇಲೆ ಕಲ್ಲು ತೂರಿದರು, ಚಪ್ಪಲಿ ಎಸೆದರು, ದಾಂಧಲೆ ಪ್ರಾರಂಭಿಸಿದರು. ಅದರಲ್ಲಿ ಸ್ವಲ್ಪ ಪುಂಡರು ಮನೆಗಳಿಗೆ, ಗುಡಿಸಲುಗಳಿಗೆ ಬೆಂಕಿ ಹಚ್ಚಿದರು. ಅದನ್ನು ಪ್ರತಿಭಟಿಸಿದ ಇನ್ನೊಂದು ಕೋಮಿನವರು ಮಚ್ಚು, ಬಡಿಗಿ, ಕಬ್ಬಿಣದ ರಾಡು ಹಿಡಿದು ಬೀದಿಗಿಳಿದರು.

ಇದನ್ನೆಲ್ಲಾ ನೋಡಿದ ಸಾಕು ನಾಯಿಗಳು ಜನರ ಕಡೆ ಮುಖಮಾಡಿ ಬೊಗಳತೊಡಗಿದವು. ಈ ತಪ್ಪನ್ನು ನಾವು ಮಾಡಿದ್ದೇವೆ. ಸುಮ್ಮನೆ ಜಗಳ ಮಾಡಬೇಡಿರಿ ಅಂತ ಕೂಗಿದವು, ಇವುಗಳ ಮಾತು ಕೇಳುವವರಾರು? ಒಂದು ಘಂಟೆಯಲ್ಲೇ ಬೀದಿ ರಣರಂಗವಾಯಿತು. ಚಾಕುವಿನಿಂದ ಒಬ್ಬ ಹೊಟ್ಟೆಗೆ ಇರಿದರೆ, ಇನ್ನೊಬ್ಬನಿಗೆ ರಾಡಿನಿಂದ ತಲೆಗೆ ಹೊಡೆದನು. ಮತ್ತೊಬ್ಬನು ಮಚ್ಚಿನಿಂದ ಬೇರೊಬ್ಬನ ಕೈ ಕತ್ತರಿಸಿ ಹಾಕಿದನು. ಸಿಕ್ಕ ಸಿಕ್ಕ ಮನೆಗೆ ನುಗ್ಗಿ ದಾಂಧಲೆ ಮಾಡಿದರು. ಗಲಭೆಯ ಜಾಗಕ್ಕೆ ಪೊಲಿಸರು ಬಂದರು, ಗಾಳಿಯಲ್ಲಿ ಗುಂಡು ಹಾರಿಸಿದರು, ಗಲಭೆ ಹತೋಟಿಗೆ ಬರಲಿಲ್ಲ. ಪೊಲೀಸರ ಹತ್ತಿರ ಬಂದ ನಾಯಿಗಳು ನಾವು ಈ ತಪ್ಪನ್ನು ಮಾಡಿದ್ದೇವೆ ಅಂತ ಕೂಗತೊಡಗಿದವು. ಪೊಲೀಸರಿಂದ ಇವುಗಳಿಗೂ ಲಾಠಿ ಏಟು ಬಿತ್ತು. ಪೊಲೀಸರ ಮೇಲೆ ಕಲ್ಲು, ಚಪ್ಪಲಿ ತೂರಾಟ ಪ್ರಾರಂಭವಾದವು. ಬಹಳಷ್ಟು ಪೊಲೀಸರು ಗಾಯಗೊಂಡರು. ಪರಿಸ್ಥಿತಿ ಕೈತಪ್ಪುವುದನ್ನು ಮನಗಂಡ ಪೊಲೀಸ್ ಅಧಿಕಾರಿ ಗೋಲಿಬಾರ್‍ಗೆ ಆದೇಶಿಸಿದನು. ಗೋಲಿಬಾರ್‍ಗೆ ಮೂರ್ನಾಲ್ಕು ಜನರು ನೆಲಕ್ಕೆ ಉರುಳಿದರು. ಜನರು ರಕ್ತದ ಮಡುವಿನಲ್ಲಿ ಬಿದ್ದದ್ದನ್ನು ನೋಡಿದ ಪ್ರತಿಭಟನೆಗಾರರು ಓಡಿ ಹೋದರು.

ಪೊಲೀಸರು ಗಲಭೆಯನ್ನು ಹತೋಟಿಗೆ ತರಲು ಯಶಸ್ವಿಯಾದರು. ಒಂದು ಘಂಟೆಯಲ್ಲಿ ಊರಂತ ಊರೇ ಸ್ತಬ್ಧವಾಗಿ ನಿಷೇಧಾಜ್ಞೆ ಹಾಗೂ 144 ಸೆಕ್ಷನ್ ಜಾರಿಗೆ ಬಂದಿತ್ತು. ಎಲ್ಲಿ ನೋಡಿದರೂ ಅಲ್ಲಿ ಪೊಲೀಸರೇ ಕಾಣುತ್ತಿದ್ದರು. ಸಂಧಿಗಳಲ್ಲಿ ಮೂಲೆಗಳಲ್ಲಿ ಅಡಗಿ ಕೂತಿದ್ದ ನಾಯಿಗಳು ಹೊರಗಡೆ ಬಂದು ನೋಡಿದವು. ಎಲ್ಲಿ ನೋಡಿದರೂ ಚಪ್ಪಲಿ, ಕಲ್ಲುಗಳು ರೋಡಿನ ಮಧ್ಯದಲ್ಲಿ ಚಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಬೀದಿನಾಯಿ ಹೇಳಿದ ಮಾತು ನಿಜ ಅನಿಸಿತು. ಒಂದು ಹರಿದ ಚಪ್ಪಲಿಯಿಂದ ಇಷ್ಟೊಂದು ಚಪ್ಪಲಿಗಳು ಸಿಗುವವೆ? ಅಂತ ದಿಗ್ಭ್ರಾಂತವಾದವು ಮತ್ತು ಕಡಿದು ತಿನ್ನಲು ಚಪ್ಪಲಿಗಳು ಸಿಕ್ಕವಲ್ಲ ಅಂತ ಖುಷಿಪಟ್ಟವು.

ಹಾಗೆ ಮುನ್ನಡೆದ ನಾಯಿಗಳು ತಮಗೆ ಯಾವ ಚಪ್ಪಲಿ ಬೇಕು ಅವುಗಳನ್ನು ಆರಿಸಿಕೊಳ್ಳಲು ಪ್ರಾರಂಭಿಸಿದವು. ಆದರೆ ಮಾಂಸ ಬೇಕೆಂದ ನಾಯಿಗಳು ಮಾಂಸದ ವಾಸನೆ ಹುಡುಕಿಕೊಂಡು ಹೋದವು. ಅವುಗಳಿಗೆ ರಕ್ತ-ಮಾಂಸ ಸಿಕ್ಕಿತು. ಹಾಗೆ ಒಂದೆರಡು ಹೆಜ್ಜೆ ಮುಂದೆ ಇಡಲು ರಕ್ತದ ಮಡುವಿನಲ್ಲಿ ಬಿದ್ದಿದ್ದ ವ್ಯಕ್ತಿಯನ್ನು ನೋಡಿದವು. ಹೌಹಾರಿದವು ಆ ವ್ಯಕ್ತಿ ಇವರ ಯಜಮಾನನಾಗಿದ್ದ ಅವನ ಪಕ್ಕದಲ್ಲೇ ಹೆಣವಾಗಿ ಬಿದ್ದಿದ್ದ ಆ ಹುಡುಗ ನಾಯಿಗಳ ಪ್ರೀತಿಯ ಗೆಳೆಯ ಪುಟ್ಟನಾಗಿದ್ದ. ನಾಯಿಗಳಿಗೆ ಸಮಯ ಸಮಯಕ್ಕೆ ಹಾಲು, ಬ್ರೆಡ್, ಅನ್ನ ಹಾಕುತ್ತಿದ್ದ ಪುಟ್ಟ, ತಾನು ಏನಾದರೂ ತಿಂಡಿ ತಿಂದರೆ ಅವುಗಳಿಗೆ ಹಾಕುವುದನ್ನು ಮರೆಯುತ್ತಿದ್ದಿಲ್ಲ. ಅವುಗಳಿಗೆ ವಾರಕ್ಕೊಮ್ಮೆ ಸ್ನಾನ ಮಾಡಿಸುತ್ತಿದ್ದನು. ಶಾಲೆಯಿಂದ ಬಂದ ಮೇಲೆ ಆ ನಾಯಿಗಳನ್ನು ಮುದ್ದಾಡಿ ಅವುಗಳ ಜೊತೆಗೆ ಚೆಲ್ಲಾಟ ಆಡುತ್ತಿದ್ದನು. ಅವನು ಸತ್ತು ಬಿದ್ದಿದ್ದು ಕಂಡು ನಾಯಿಗಳಿಗೆ ದುಃಖ ಇಮ್ಮಡಿಸಿತು. ಮನೆಯ ಯಜಮಾನ ನಮ್ಮನ್ನು ಬೇರೆ ಊರಿಂದ ತಂದು ಮಕ್ಕಳಂತೆ ಬೆಳೆಸಿ, ತನಗೆ ಎಷ್ಟೋ ಕೆಲಸ ಇದ್ದರೂ ನಮಗೆ ಆರೈಕೆ ಮಾಡುತ್ತಿದ್ದ. ಇಬ್ಬರೂ ರಕ್ತದ ಮಡುವಿನಲ್ಲಿ ಬಿದ್ದಿದ್ದು ನೋಡಿ, ನಾವು ಮಾಂಸದ ಆಸೆಗೆ ಬೀದಿನಾಯಿ ಮಾತು ಕೇಳಿ ನಮ್ಮ ಯಜಮಾನ, ಪುಟ್ಟನ ಸಾವಿಗೆ ಕಾರಣವಾದೆವು ಮತ್ತು ನಾವು ಈಗ ಅನಾಥರಾದೆವು. ನಮ್ಮನ್ನು ನೋಡಿಕೊಳ್ಳುವವರ್ಯಾರು ಅಂತ ರೋಧಿಸತೊಡಗಿದವು.

ನಾಯಿಗಳು ಅಳುವುದನ್ನು ನೋಡಿದ ಪೊಲೀಸರು ಲಾಠಿ ಮತ್ತು ಕಲ್ಲುಗಳಿಂದ ಓಡಿಸಿದರು. ದೂರ ಹೋಗಿ ನಿಂತ ನಾಯಿಗಳು ತಾವು ಮಾಡಿದ ತಪ್ಪು ಅರಿವಾಗಿ, ಪಶ್ಚಾತ್ತಾಪ ಪಟ್ಟವು, ಅವುಗಳಿಗೆ ಹಲವಾರು ಪ್ರಶ್ನೆಗಳು ಮೂಡತೊಡಗಿದವು. ಈ ನಿರ್ಜೀವ ನೈಯಾ ಪೈಸಾ ಬೆಲೆ ಇಲ್ಲದ ಚಪ್ಪಲಿಯಿಂದ ಇಷ್ಟೊಂದು ಜನರು ಹೊಡೆದಾಡಿ, ದಾಂಧಲೆ ಮಾಡಿ, ಕೋಟ್ಯಾಂತರ ರೂಪಾಯಿಗಳ ಆಸ್ತಿ ನಷ್ಟಮಾಡಿ, ಎಷ್ಟೋ ಮಂದಿ ಪ್ರಾಣ ಬಿಟ್ಟು, ಎಷ್ಟೋ ಮಂದಿ ಗಾಯಗೊಂಡರು. ಆ ಚಪ್ಪಲಿ ಯಾರು ಹಾಕಿದರು ಅಂತ ಸ್ವಲ್ಪನೂ ಯಾರೂ ಯೋಚಿಸಲಿಲ್ಲವಲ್ಲ. ಹಾಗಾದರೆ ದಿನ ನಡೆಯುವ ಧರ್ಮದ ಹೆಸರಿನ ಎಲ್ಲಾ ದಾಂಧಲೆಗಳು ಹೀಗೆ ನಡೆದಿರಬಹುದಲ್ಲಾ ಎಂಬ ಸಂಶಯ ಅವುಗಳಿಗೆ ಕಾಡತೊಡಗಿದವು.

ಡಾ|| ಶಿವಕುಮಾರ ಮಾಲಿಪಾಟೀಲ್
ದಂತ ವೈದ್ಯರು, ಗಂಗಾವತಿ.
ಮೋ:ನಂ:9060091319, 9448302775