ಕೆ.ಎನ್.ಪಿ.ವಾರ್ತೆ,ನವದೆಹಲಿ,ಫೆ.01;

ಈ ಬಾರಿಯೂ ಕೇಂದ್ರದ ಸಾಮಾನ್ಯ ಬಜೆಟ್‌‌ನಲ್ಲೇ ರೈಲ್ವೆ ಬಜೆಟ್‌ ಸಹ ಮಂಡನೆಯಾಗುತ್ತಿದ್ದು,  ರೈಲ್ವೆ ಇಲಾಖೆಯಲ್ಲಿಯೂ ಹೊಸ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ.

ಬೆಂಗಳೂರು ಉಪನಗರ ರೈಲು ಯೋಜನೆಗೆ ಕೇಂದ್ರದಿಂದ 17 ಸಾವಿರ ಕೋಟಿ ಮೀಸಲಿರಿಸಿರುವುದಾಗಿ ಕೇಂದ್ರ ಬಜೆಟ್ ನಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಘೋಷಿಸಿದ್ದಾರೆ. ಸಬ್ ಅರ್ಬನ್ ರೈಲ್ವೆ ಯೋಜನೆ ಅಭಿವೃದ್ಧಿಗಾಗಿ 50 ಸಾವಿರ ಕೋಟಿ ಈ ವರ್ಷ ಮೀಸಲಿಟ್ಟಿದ್ದು, ಅದರಲ್ಲಿ 17 ಸಾವಿರ ಕೋಟಿಯನ್ನು ಬೆಂಗಳೂರು ಉಪನಗರ ಯೋಜನೆಗೆ ಮೀಸಲಿಡಲಾಗಿದೆ ಎಂದು ತಿಳಿಸಿದ್ದಾರೆ.

ಸಬ್ ಅರ್ಬನ್ ರೈಲ್ವೆ ಯೋಜನೆ :

ಸಬ್ ಅರ್ಬನ್ ಯೋಜನೆಯು, ಕೇಂದ್ರ ರೈಲ್ವೆ ಇಲಾಖೆಯ ಸಹಭಾಗಿತ್ವದಲ್ಲಿ ಜಾರಿಗೆ ಬರಲಿದೆ. ಈ ಯೋಜನೆಯು, ಸುಮಾರು 58 ರೈಲುಗಳು, 116 ಸೇವೆಗಳನ್ನು ಒಳಗೊಂಡಿದ್ದು, ಸುಮಾರು 440 ಕಿ.ಮೀ ದೂರ ಕ್ರಮಿಸಲಿದೆ. ಬೆಂಗಳೂರು-ಮಂಡ್ಯ, ಬೆಂಗಳೂರು-ಯಶವಂತಪುರ, ಯಶವಂತಪುರ-ತುಮಕೂರು, ಯಶವಂತಪುರ-ಯಲಹಂಕ, ಯಲಹಂಕ-ಬೈಯ್ಯಪ್ಪನಹಳ್ಳಿ, ಯಶವಂತಪುರ-ಬೈಯ್ಯಪ್ಪನಹಳ್ಳಿ, ಯಲಹಂಕ-ದೊಡ್ಡಬಳ್ಳಾಪುರ, ಯಲಹಂಕ-ಚಿಕ್ಕಬಳ್ಳಾಪುರ, ಬೈಯಪ್ಪನಹಳ್ಳಿ-ಹೊಸೂರು ಸೋಲದೇವನಹಳ್ಳಿ-ಯಲಹಂಕ ನಡುವೆ ಬೆಂಗಳೂರು ಸಬ್ ಅರ್ಬನ್ ರೈಲು ಸೇವೆ ಆರಂಭವಾಗಲಿದೆ. ಸುಮಾರು 10,949 ಕೋಟಿ ವೆಚ್ಚದ ಯೋಜನೆಯ 1,745 ಕೋಟಿ ರೂ ಅಂದಾಜು ವೆಚ್ಚದಲ್ಲಿ ಬೆಂಗಳೂರು ಉಪನಗರ ರೈಲು ಯೋಜನೆ-ಹಂತ 1 ಜಾರಿಗೆ ಬರಲಿದೆ.

ವಡೋದರಾದಲ್ಲಿ ರೈಲ್ವೆ ಸಂಸ್ಥೆ ಸ್ಥಾಪನೆ :

ಬುಲೆಟ್‌ ರೈಲು ಕಾರ್ಯಕ್ರಮದ ಕುರಿತು ತರಬೇತಿಗಾಗಿ ವಡೋದರಾದಲ್ಲಿ ರೈಲ್ವೆ ಸಂಸ್ಥೆ ಸ್ಥಾಪನೆಯಾಗಲಿದೆ.

ರೈಲ್ವೆ ನಿಲ್ದಾಣಗಳ ಪುನರ್‌ಅಭಿವೃದ್ಧಿ :

600 ಪ್ರಮುಖ ರೈಲ್ವೆ ನಿಲ್ದಾಣಗಳ ಪುನರ್‌ಅಭಿವೃದ್ಧಿಪಡಿಸಲಾಗುತ್ತದೆ.

ರೈಲ್ವೆ ಸುರಕ್ಷತೆಗೆ ಆದ್ಯತೆ, ತಂತ್ರಜ್ಞಾನ ಬಳಕೆ ಹೆಚ್ಚಳ :

ರೈಲ್ವೆ ಮಾರ್ಗಗಳ ಸುರಕ್ಷಣೆ, ನಿರ್ವಹಣೆಗೆ ಆದ್ಯತೆ ನೀಡಲಾಗುತ್ತಿದ್ದು, ನೂತನ ತಂತ್ರಜ್ಞಾನಗಳ ಬಳಕೆ ಹಾಗೂ ಮಂಜು ಆವರಿಸಿರುವ ಸಂದರ್ಭದಲ್ಲಿ ಸುರಕ್ಷತೆಗಾಗಿ ವಿಶೇಷ ಉಪಕರಣ ಅಳವಡಿಕೆ ಮಾಡಲಾಗುವುದು.

ಸಿಸಿಟಿವಿ, ವೈಫೈ ಅಳವಡಿಕೆಗೆ ನಿರ್ಧಾರ :

ರೈಲ್ವೆ ನಿಲ್ದಾಣಗಳಲ್ಲಿ ವೈಫೈ ಹಾಗೂ ಸಿಸಿಟಿವಿಗಳನ್ನು ಅಳವಡಿಸಲು ನಿರ್ದರಿಸಲಾಗಿದೆ.

ಎಸ್ಕಲೇಟರ್‌ ಅಳವಡಿಕೆ :

25 ಸಾವಿರ ಪ್ರಯಾಣಿಕರು ಸಂಚರಿಸುವ ರೈಲ್ವೆ ನಿಲ್ದಾಣಗಳಲ್ಲಿ ಎಸ್ಕಲೇಟರ್‌ ಅಳವಡಿಸಲಾಗುವುದು.

ರಸ್ತೆ ಸಂಪರ್ಕ ಉನ್ನತೀಕರಿಸಲು ₹5.35 ಲಕ್ಷ ಕೋಟಿ :

ಭಾರತ್‌ಮಾಲಾ ಯೋಜನೆ ಅಡಿ, ರಸ್ತೆ ಸಂಪರ್ಕ ಉನ್ನತೀಕರಿಸಲು ₹5.35 ಲಕ್ಷ ಕೋಟಿ ಮೀಸಲಿಡಲಾಗಿದೆ.