ಅಕ್ಷರದ ಸಾಲುಗಳ ಬೆನ್ನಟ್ಟಿದ ನಮಗೆ ಭೌತಿಕ ಸುಖದ ಅನುಭವಗಳೇ ಪ್ರಧಾನವೆನಿಸುತ್ತವೆ. ಲೋಕದ ಸಂಗತಿಯೊಂದನ್ನ ಪ್ರಶ್ನಿಸದೇ ಒಪ್ಪಲಾಗದ ಮನಸ್ಥಿತಿ ಓದುವವರದು.

ವಿಜ್ಞಾನ ಮತ್ತು ಚರಿತ್ರೆಗಳು ಇಂತಹ ಸಾಕ್ಷಿ ತೋರುವ ಅಕ್ಷರದ ಆಧಾರದಿಂದಲೇ ಮೊಳಕೆಯೊಡೆದು, ಚಿಗುರಿ  ಸಾಕ್ಷಾತ್ಕಾರಗೊಂಡಿರುವುದು. ಸಾಹಿತ್ಯವೂ ಕೂಡ ಅಲ್ಪ ಕಲ್ಪನೆಯನ್ನೂ ಬಹುಪಾಲು ಪ್ರಾಯೋಗಿಕ ಅನುಭವಗಳನ್ನ ತನ್ನ ಪ್ರಧಾನ ಆಕರವನ್ನಾಗಿಸಿಕೊಂಡಿದೆ. ಭಾವದ ಬೆನ್ನು ಸವರುವ ಸಂಗೀತವು ಆಂತರಿಕ ಸುಖವನ್ನ ಪ್ರಧಾನವಾಗಿಸಿಕೊಂಡಿದೆ. ಸಂಗೀತದ ಸಂತೋಷ,ರೋಮಾಂಚನಗಳು ನಮ್ಮ ದೇಹಕ್ಕೆ ಮನಸ್ಸಿಗೆ,ತಟ್ಟುವುದಾದರೂ ಅವನ್ನ ಹೇಗೆ ಎಷ್ಟು ಎಂದು ಪ್ರಮಾಣೀಕರಿಸಿ ಪದಗಳಲ್ಲಿ ಹಿಡಿದಿಡಲಾಗದು.

ಸಂಗೀತ ಸಾಹಿತ್ಯಗಳ ಒಲವಿಲ್ಲದವನನ್ನ ಮನುಷ್ಯ ಎನ್ನಲಾಗದು ಎಂದು ಮಹಾಕವಿ ಪಂಪ ಹೇಳುತ್ತಾನೆ.ಓದು ತನ್ನ ಆಕರ್ಷಣೆಯನ್ನ ಕಳೆದುಕೊಂಡು ಸಾಹಿತ್ಯ ಜಡವೆನಿಸಿದಾಗ ‘ಆನು ಒಲಿದಂತೆ ಹಾಡುವೆ’ ಎಂದು ಬಸವಣ್ಣ ಹೊಸ ಕ್ರಾಂತಿಗೆ ಕಾರಣೀ ಪುರುಷನಾದನು.ದಾಸರು ‘ಕರ್ನಾಟಕ ಸಂಗೀತ’ ಎಂಬ ಹೊಸ ಪ್ರಕಾರವನ್ನೇ ಬಳಕೆಗೆ ತಂದವರು.ತತ್ವ ಪದಕಾರರು ನಾದದ ಗುಂಗಿನಲ್ಲಿ ಮುಳುಗಿ ಅಲ್ಲ ಅಲ್ಲಮನನ್ನ,ಪಲ್ಲಕ್ಕಿಯನ್ನ ಅಡ್ಲಿಗಿಯನ್ನ ಒಂದು ಮಾಡಿದವರು.ಹೊಸಗನ್ನಡ ಕಾವ್ಯವೂ ಈ ಸಮನ್ವಯದ ಹಾದಿಯನ್ನ ಬಿಡಲಿಲ್ಲ ಅದು ಭಾರತೀಯ ನಾದ ಪರಂಪರೆಯನ್ನ ಮತ್ತು ಪಾಶ್ಚಾತ್ಯ ಗೇಯ ಪರಂಪರೆಯನ್ನ ಬೆಸೆಯಲು ‘ಇವಳ ಹಾಡ ಅವಳಿಗಿಟ್ಟು ನೋಡ ಬಯಸಿದೆ’ಎಂದಿತು.ಹಾಡಿನ ಈ ಹಾದಿಯನ್ನ ಸುಮ್ಮನೆ ಗಮನಿಸಿದರೆ ಅಲ್ಲಿ ಸಂಸ್ಕøತದ ಶಸ್ತ್ರೀಯ ಕನ್ನಡದ ದೇಶೀಯ ಹಾಗೂ ಪಾಶ್ಚಾತ್ಯ ನಾದ ಮಾದರಿಗಳು ಒಂದಕ್ಕೊಂದು ಕೈ ಕೈ ಹಿಡಿದು ನಡೆದಿರುವುದನ್ನ ಕಾಣಬಹುದು.

ಅನಭಾವ ಪ್ರಧಾನವಾದ ನಾದದ ಚರಿತ್ರೆಯು ಪವಾಡದ ನೆಲೆಯಲ್ಲಿ,ದೈವೀ ರೂಪಗಳಲ್ಲಿ ಗೋಚರಿಸುತ್ತದೆ. ಇಲ್ಲಿನ ಶಿಷ್ಯ ಶರಣಾಗಿ, ಸೇವಕನಾಗಿ,ಗುಲಾಮನಾಗಿ ಅನೇಕ ವರ್ಷ ಸಾಧನೆ ಮಾಡಿದ ಮೇಲೆಯೇ ಸಿಗುವ ಗುರು ಕಾರುಣ್ಯದಂತೆ ಸಂಗೀತವು ಲಭಿಸುತ್ತದೆ.ಸಂಗೀತದಲ್ಲಿ ಗುರು ಶಿಷ್ಯ ಪರಂಪರೆಗಳನ್ನ ಉತ್ತರ ದಕ್ಷಿಣ ವೈವಿಧ್ಯತೆಗಳನ್ನ ಬಗೆ ಬಗೆಯ ಮನೆತನಗಳ ವೈಶಿಷ್ಟ್ಯಗಳನ್ನ ಕಾಣಬಹುದಾಗಿದೆ.ಇಲ್ಲಿ ಹಾಡಿನಿಂದ ದೀಪ ಹಚ್ಚುವ, ಮಳೆ ತರಿಸುವ, ರೋಗ ವಾಸಿಮಾಡುವ, ಜೀವ ನೀಡುವ, ಜೀವ ಹರಣ ಮಾಡುವ ಸಂಗತಿಗಳಿವೆ.

ಹಾಡುಗಳು ಅನೇಕ ಹೋರಾಟಗಳಿಗೆ ನಾಂದಿಯಾಗಿರುವುದನ್ನ ನಮ್ಮ ಲಾವಣಿಗಳು ತತ್ವ ಪದಗಳು, ಕಾಲಜ್ಞಾನಿ ಪದಗಳು, ಸ್ವರ ವಚನಗಳು ಹಾಡುಗಳು ಕಾರಣವಾಗಿರುವುದನ್ನ ಇಂದಿಗೂ ಗುರುತಿಸಬಹುದಾಗಿದೆ.ಭಾರತದ ಸ್ವತಂತ್ರ ಸಂಗ್ರಾಮದಲ್ಲಿ ಸೈನಿಕರ ವೀರಾವೇಶ, ಗಾಂಧೀಜಿಯ ಅಹಿಂಸೆ, ಎಷ್ಟು ಮಹತ್ವ ಪಡೆದಿವೆಯೋ ಅಷ್ಟೇ ಮಹತ್ವ ವಂದೇ ಮಾತರಂ ಗೀತೆಗೆ ದಕ್ಕಿದೆ. ಇಂದಿಗೂ ಈ ಹಾಡು ಕೋಟ್ಯಾಂತರ ಭಾರತೀಯರ ಎದೆಯಲ್ಲಿ ರೋಮಾಂಚನದ ಹೊಳೆ ಹರಿಸುತ್ತಿರುವುದು ವಿಶೇಷವೇ. ಇಂತಹುದೇ ಖುಷಿಯ ಅನುಭವಗಳು ನಮ್ಮ ರಾಷ್ಟ್ರಗೀತೆಗೂ ನಾಡ ಗೀತೆಗೂ ದಕ್ಕಿಲ್ಲವೇ? ಇಷ್ಟೆಲ್ಲಾ ಇರಲಿ ಹಾಡೆಂದರೆ ಮನಸೋಲದವರಾರು?

ಹಾಡಿಗೆ ಭಾಷೆಯ ಚೌಕಟ್ಟಿಲ್ಲ,ಧರ್ಮದ ಎಲ್ಲೆ ಇಲ್ಲ.ದೇಶ ವಿದೇಶ ಎಂಬ ಗಡಿಗಳ ಸೀಮಾರೇಖೆಗಳಿಲ್ಲ. “ಮೇಡ ಇನ್ ಇಂಡಿಯಾ” ಹಾಡಿದ ಆಲಿಶಾಳ ಹಾಡಿಗೆ ತೀರಾ ಸಣ್ಣ ಹಳ್ಳಿಯ ಕುರಿಕಾಯುವ ಹುಡುಗನೂ ತಲೆದೂಗಿದ ಕಥೆ ಇಲ್ಲವೇ? ನಮ್ಮ ಭೀಮ್ ಸೇನ್ ಜೋಶಿ, ಗಂಗೂಬಾಯಿ ಹಾನಗಲ್, ಮಲ್ಲಿಕಾರ್ಜುನ ಮನ್ಸೂರ,ರನ್ನ ಮೆಚ್ಚದವರುಂಟೆ?

ಲತಾ ಮಂಗೇಶ್ ಕರ್,ರಫಿ,ಕಿಶೋರ್,ಎಸ್.ಪಿ.ಬಾಲಸುಭ್ರಮಣ್ಯಂ,ಪಿ.ಬಿ.ಶ್ರೀನಿವಾಸ್ ಅಷ್ಟೆಲ್ಲಾ ಯಾಕೆ ಈ ಹೊತ್ತಿನ ಸಂಗೀತ ಕಟ್ಟಿ, ಕುನಾಲ್ ಗಾಂಜಾವಾಲ,ರಘುದೀಕ್ಷಿತ್,ಹನುಮಣ್ಣ ನಾಯಕ ದೊರೆ,ಫಯಾಜ್ ಖಾನ್,ಸೋನು ನಿಗಂ,ವಿಜಯ ಪ್ರಕಾಶ್ ಮೊದಲಾದವರೆಲ್ಲಾಯಾರಿಗೆ ಇಷ್ಟವಾಗಲಾರರು?ಶಾಸ್ತ್ರೀಯ,ಸುಗಮ ಸಂಗೀತ, ಚಿತ್ರಗೀತೆಗಳು ಭಾರತೀಯರನ್ನೆಲ್ಲಾ ಮನಸೋಲುವಂತೆ ಮಾಡಿಲ್ಲವೇ?

ಹಾಡು ಮತ್ತು ಹಾಡಿನ ನಿರೂಪಣೆ ಕುರಿತು ಬಂದ ಬರಹಗಳು ತೀರಾ ಕಡಿಮೆ.ಅದರಲ್ಲೂ ಶಾಸ್ತ್ರೀಯ ಸಂಗೀತದ ರೂಪ ನಿರೂಪಗಳ ಪುಸ್ತಕಗಳು ಅಪರೂಪವೇ ಅಂತಹ ಅಪರೂಪದ ಕನ್ನಡ ಪುಸ್ತಕಗಳಲ್ಲೊಂದು ಡಾ.ಡಿ.ಪಿ.ಜ್ಯೋತಿಲಕ್ಷ್ಮಿ ಯವರು ಬರೆದಿರುವ ‘ಹಿಂದೂಸ್ಥಾನಿ ಸಂಗೀತಕ್ಕೆ ಗ್ವಾಲಿಯರ್ ಘರಾಣೆಯ ಕೊಡುಗೆ’(ಉತ್ತರ ಕರ್ನಾಟಕವನ್ನ ಅನುಲಕ್ಷಿಸಿ). ಡಾ.ಜ್ಯೋತಿ ಯವರು ಆರು ಅಧ್ಯಾಯಗಳ ತಮ್ಮ ಈ ಪುಸ್ತಕದಲ್ಲಿ ಸಂಗೀತದ ಪರಿಕಲ್ಪನೆ,ಅರ್ಥ,ಸ್ವರೂಪ,ವೈಶಿಷ್ಟ್ಯಗಳನ್ನ,ಸಂಗೀತದ ಚಾರಿತ್ರಿಕ ವಿವರಗಳನ್ನ ,ಸಂಗೀತ ಪರಂಪರೆಗಳ ಸೂಕ್ಷ್ಮ ಅವಲೋಕನವನ್ನ ಮಾಡಿದ್ದಾರೆ.ಉತ್ತರ ಕರ್ನಾಟಕದಲ್ಲಿ ಗ್ವಾಲಿಯರ್ ಘರಾಣ ಮನೆತನಗಳ ವೈಶಿಷ್ಟತೆಯನ್ನೂ ಉತ್ತರ ಕರ್ನಾಟಕದ ಸಂಗೀತದ ಮಹಾನ್ ಸಾಧಕರನ್ನೂ ಈ ಪುಸ್ತಕದಲ್ಲಿ ಕಟ್ಟಿಕೊಟ್ಟಿದ್ದಾರೆ.

ಡಾ.ಜ್ಯೋತಿಯವರು ಮೂಲತಹ ಹಿಂದೂಸ್ಥಾನೀ ಗಾಯಕಿಯಾದ್ದರಿಂದಲೇ ಸಂಗೀತದ ಸೂಕ್ಷ್ಮ ಮತ್ತು ವೈಶಾಲ್ಯವನ್ನ ಸಹಜವಾಗಿ ಹಿಡಿದಿಡಲು ಸಾಧ್ಯವಾಗಿದೆ. ಹಾಡು ಹಕ್ಕಿಗಳ ಕಲರವದಂತಿರುವ ಇವರ ಮನೆತನವೇ ಸಂಗೀತ ಮಯವಾದದ್ದು.ಹಾಡಿನ ಗೂಡಿಂದ ಸಂಗೀತದ ದಿಗಂತಕ್ಕೆ ಹಾರಿದ ಇವರು ತಾವು ಕಂಡ ಮತ್ತು ತಮ್ಮ ಅರಿವಿಗೆ ದಕ್ಕಿದ ಬೃಹತ್ ಮತ್ತು ಮಹತ್ ಸಾಧಕರನ್ನ ಅಷ್ಟೇ ಸೌಜನ್ಯದಿಂದ ಮತ್ತು ವಿನಯದಿಂದ ನಿರೂಪಿಸಿದ್ದಾರೆ.ಮುನ್ನುಡಿ ಮತ್ತು ಬೆನ್ನುಡಿಗಳಿಂದ ಇವರ ಸಾಧನೆಯ ಪರಿಚಯ ಕಂಡಮೇಲೂ ಇವರ ಬರಹ ಎಲ್ಲೂ ಅಹಂಗೆ ಒಳಗಾಗದೇ “ಎಂದರೋ ಮಹಾನುಭಾವುಲು ಅಂದರಿಕಿ ನಾ ವಂದನಮುಲು” ಎಂಬ ಧಾಟಿಯಲ್ಲೇ ಸಾಗುತ್ತಾ ಹೋಗಿದೆ.

ಸಂಗೀತದ ಮೂಲ ಪ್ರಕೃತಿಯೇ, ಪಶು ಪಕ್ಷಿಗಳ ಕೂಗು, ದುಂಬಿಗಳ ಗುಂಜಾರವ, ಪ್ರಕೃತಿಯ ಚರಾಚರಗಳಲ್ಲಿ ಕಾಣುವ ಅನುರಣನಗಳೇ ಸಂಗೀತಕ್ಕೆ ಮೂಲ.ಸಂಗೀತವೊಂದು ಸಹಜ ಯೋಗ,ಪರಮಾನಂದ ಪ್ರಾಪ್ತಿಯ ಹಿರಿಯ ಸಾಧನ. ಸಂಗೀತವು ಹಾಡುವವರನ್ನೂ ಕೇಳುವವರನ್ನೂ ಮೈಮರೆಸಿ ಸಂತೋಷಗೊಳಿಸುತ್ತದೆ. ಸಂಗೀತದ ಸಾಧನೆ ಅಷ್ಟು ಸುಲಭದ್ದಲ್ಲ ಸಂಗೀತ ವೆಂಬುದು ಕೇವಲ ಮನೋರಂಜನೆಯ ಸಾಧನವಾಗಿರದೆ ಅದು ಇಂದ್ರಿಯಾತೀತವಾದ ಆಧ್ಯಾತ್ಮಿಕ ರಸಾನುಭವ.ಇದು ಪ್ರತಿಯೊಬ್ಬರಿಗೂ ಕೈಗೆಟುಕುವ ಸಾಧನವಲ್ಲ.ಸಂಗೀತಕ್ಕೆ ಹಾತೊರೆವ ಸಾಧಕನು ಭೌತಿಕ ಆಮಿಷ ಆಕರ್ಷಣೆಗಳಿಗೆ ತಿಲಾಂಜಲಿಯಿಡುತ್ತ ಜೀವನವನ್ನು ಅದಕ್ಕಾಗಿಯೇ ಮೀಸಲಿಡಬೇಕಾಗುತ್ತದೆ.ಸದ್ದು ಗೊಂದಲಗಳ ಪೇಟೆಯನ್ನ ಬಿಟ್ಟು ಏಕಾಂತವಾಸಿಯಾಗಿ ಇರಬೇಕಾಗುತ್ತದೆ.ಆಸಕ್ತಿ ಇದ್ದವರಿಗೆ ಮಾತ್ರ ಈ ವಿದ್ಯೆ ದಕ್ಕುತ್ತದೆ.ಎಂಬ ಮಾತುಗಳು ಇಲ್ಲಿ ಅಡ್ಡ ದಾರಿಗಳಿಲ್ಲ ಎಂಬುದನ್ನ ಸಾಬೀತು ಪಡಿಸುತ್ತವೆ.

ಭಾರತೀಯ ಸಂಗೀತವು ಎರಡು ವಿಧದಲ್ಲಿ ವಿಸ್ತಾರಗೊಂಡಿರುವುದನ್ನ ಲೇಖಕಿಯು ಮಾರ್ಗೀಯ ಶೈಲಿ ಮತ್ತು ದೇಶೀಯ ಶೈಲಿ ಎಂದು ವಿಭಜಿಸಿ ವಿವರಿಸುತ್ತಾರೆ.ಮಾರ್ಗೀಯ ಸಂಗೀತದಲ್ಲಿ ಋಷಿಮುನಿಗಳು ಗಂಧರ್ವರು ದೇವತೆಗಳು ಹಾಡಲ್ಪಡುತ್ತಾರೆ.ಪ್ರಾಚೀನ ಕಾಲದಲ್ಲಿ ಈ ಸಂಗೀತವನ್ನ ಋಷಿಮುನಿಗಳು ದೇವ ಸಾಕ್ಷಾತ್ಕಾರಕ್ಕಾಗಿ ಹಾಡುತ್ತಿದ್ದರು ಎನ್ನುತ್ತಾರೆ. ದೇಶೀ ಸಂಗೀತವು ಮಾನವರಿಂದ ಮಾತ್ರ ಹಾಡಲ್ಪಡುತ್ತದೆ. ಈ ದೇಶೀ ಸಂಗೀತದ ಉತ್ಪತ್ತಿಗೆ ಮೂಲ ಕಾರಣ ಮಾರ್ಗ ಸಂಗೀತ. ದೇಶೀ ಸಂಗೀತವು ಮಾನವ ನಿರ್ಮಿತವಾಗಿದ್ದು ಅದರ ಉದ್ದೇಶ ಜನಮನ ರಂಜನೆಯಾಗಿದೆ. ಆದ್ದರಿಂದ ಜನರ ಅಭಿರುಚಿಗೆ ತಕ್ಕಂತೆ ಅದರಲ್ಲಿ ವಿಭಿನ್ನ ರೀತಿಯ ಬದಲಾವಣೆಗಳಾದವು ಎನ್ನುತ್ತಾರೆ.

ಡಾ.ಜ್ಯೋತಿ ಅವರ ಸಂಗೀತದ ಈ ಪುಸ್ತಕ ನಮಗೆ ಮುಖ್ಯವೆನಿಸುವುದು ಅದರ ಧರ್ಮಾತೀತ ನೆಲೆಯಿಂದ ಸಂಗೀತ ಹೇಗೆ ಆರ್ಯ ಮತ್ತು ದ್ರಾವಿಡವನ್ನ ಹಿಂದೂ ಮತ್ತು ಮುಸ್ಲಿಂ ಧರ್ಮವನ್ನ ದೇಶ ಮತ್ತು ಪಾಶ್ವಾತ್ಯ ವನ್ನ ಒಂದು ಮಾಡಿದೆ ಎಂಬ ವಿವರಗಳಿಂದ ಬೌದ್ಧ,ಜೈನ ಮತ್ತು ಹಿಂದೂ ಸಂಗೀತದ ನಂತರ ಭಾರತೀಯರನ್ನ ಬೆಸೆದುಕೊಂಡದ್ದು ಮುಸ್ಲಿಂ ಸಂಗೀತ.1296 ರಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಅಲ್ಲಾ ವುದ್ದೀನ್ ಖಿಲ್ಜಿ ಮಹಾನ್ ಸಂಗೀತ ಪ್ರೀಮಿಯಾಗಿದ್ದ ಈತ ತನ್ನ ದರ್ಬಾರ್ ನಲ್ಲಿ ಅಮೀರ್ ಖುಸ್ರೋ ಎಂಬ ಪಾರ್ಸಿ ಕವಿಗೆ ಆಶ್ರಯ ನೀಡಿದ್ದ.ಭಾರತೀಯ ಸಂಗೀತದಲ್ಲಿ ತನ್ನ ಹೊಸ ರಾಗಗಳಿಂದ ಬದಲಾವಣೆ ತಂದವನೇ ಅಮೀರ್ ಖುಸ್ರು. ಇಂದು ಎಲ್ಲರೂ ನುಡಿಸುವ ‘ತಬಲಾ’ ಕಂಡು ಹಿಡಿದವನೇ ಅಮೀರ್ ಖುಸ್ರು. ಭಾರತೀಯ ಸಂಗೀತಕ್ಕೆ ಖ್ಯಾಲ್ ಹಾಗೂ ಕವ್ವಾಲಿ ಪದ್ಧತಿಯನ್ನ ಪ್ರಚಾರಕ್ಕೆ ತಂದವನೀತ.

ಹುಮಾಯೂನ್ ಕಾಲದಲ್ಲಿ ಪ್ರಚಾರಕ್ಕೆ ಬಂದ ಭಜನ್ ಗಾಯನ ಪ್ರಕಾರವು ಜನಸಾಮಾನ್ಯರನ್ನ ಸಂಗೀತದ ಕಡೆಗೆ ಆಕರ್ಷಿಸಿತು. ಅಕ್ಬರ್ ನ ಕಾಲವನ್ನ ಹಿಂದೂ ಸ್ಥಾನೀ ಸಂಗೀತದ ಸುವರ್ಣ ಯುಗ ಎನ್ನಲಾಗುತ್ತದೆ.ಗ್ವಾಲಿಯರ್ ನ ತಾನ್ ಸೇನ್ ಈತನ ಆಸ್ಥಾನದಲ್ಲಿದ್ದನು. ಸ್ವತಃ ಅಕ್ಬರ್ ‘ನಕ್ಕಾರ’ಎಂಬ ವಾದ್ಯವನ್ನ ನುಡಿಸುವಲ್ಲಿ ಪ್ರಾವಿಣ್ಯತೆಯನ್ನ ಪಡೆದಿದ್ದನು. ಆತನ ಮಗ ಜಹಂಗೀರ್ ಅಪರೂಪದ ‘ಸಿತಾರ್’ವಾದಕನಾಗಿದ್ದ. ಹಮಾಯೂನನ ಪತ್ನಿ ನೂರ್ ಜಹಾನ್ ಸಂಗೀತ ಜ್ಞಾನವುಳ್ಳ ಕವಯತ್ರಿಯಾಗಿದ್ದಳು. ಈತನ ಆಸ್ಥಾನದಲ್ಲಿ ಶ್ರೇಷ್ಟ ಹಿಂದೂ ಮುಸ್ಲಿಂ ಗಾಯಕರಿದ್ದರು.(ಬಿಲಾಸ್ ಖಾನ್, ಪರವೇಜದಾದ್,ಖುರಂದಾದ್,ಹಮಖಾನ್,ಪತ್ತರ್ ಖಾನ್, ಪಂಡಿತ್ ಸೋಮನಾಥ,ಪಂಡಿತ್ ದಾಮೋದರ) ಜಹಂಗೀರನ ನಂತರ ಬಂದ ಷಹಜಹಾನನೂ ಸಂಗೀತ ಪ್ರೇಮಿಯಾಗಿದ್ದ,ದ್ರುಪದ ಗಾಯನ ಶಾಯಿರಿ, ಭಜನ್ ಗಳು ಈತನಿಗೆ ಅತ್ಯಂತ ಪ್ರಿಯವಾಗಿದ್ದವು. ಈತನ ಕಾಲದಲ್ಲಿ ಶ್ರೇಷ್ಟ ಹಿಂದೂ ಮುಸ್ಲಿಂ ಗಾಯಕರು ಮತ್ತು ನೃತ್ಯಗಾರರಿದ್ದರು.

ಚರಿತ್ರೆಯಲ್ಲಿ ಕರಾಳ ಮುಖವನ್ನ ಹೊತ್ತ ತುಘಲಕ್,ಸಿಕಂದರ್ ಲೂದಿ,ಔರಂಗಜೇಬರು ಸಂಗೀತದ ಪರಮ ಶತ್ರುಗಳಾಗಿದ್ದರು ಎಂಬ ಅಂಶವನ್ನ ದಾಖಲಿಸುತ್ತ ಲೇಖಕರು ಸಂಗೀತವೆಂಬುದು ಮಾನವೀಯ ಮುಖ ಹೊತ್ತವರ ಸೊತ್ತು ಎಂಬ ಸಾರ್ವಕಾಲಿಕ ಮೌಲ್ಯವನ್ನ ಎತ್ತಿ ಹಿಡಿದಿದ್ದಾರೆ. ಔರಂಗಜೇಬನ ನಂತರ ಸಂಗೀತವು ಕ್ಷೀಣಿಸುತ್ತಾ ಹೋಯಿತು. ಸಂಗೀತಗಾರರೂ ತಮ್ಮ ಮನೆತನದವರಿಗೆ ಮಾತ್ರ ಕಲಿಸುವ ಪದ್ದತಿ ಹುಟ್ಟುಹಾಕಿದರು.ಇದರಿಂದ ಜನರಲ್ಲಿ ಸಂಗೀತದ ಬಗ್ಗೆ ಕೀಳೀರಿಮೆ ಮತ್ತು ತಿರಸ್ಕಾರಗಳು ಕಂಡುಬರತೊಡಗಿದವು.ಇದನ್ನ ಮತ್ತೆ ತೊಡೆದು ಹಾಕಿ ಸಂಗೀತಕ್ಕೆ ತಮ್ಮ ಅಧ್ಯಯನಗಳಿಂದ ಹೊಸ ಆಕರ್ಷಣೆ ತಂದವರೇ ಆಂಗ್ಲರು.ಜೋನ್ಸ ಕ್ಯಾಪ್ಟನ್ ಡೇ,ಕ್ಯಾಪ್ಟನ್ ಮಿಲಿಯನ ಮಾಡಿದ ಇಂತಹ ವಿಶೇಷ ಅಧ್ಯಯನವನ್ನೂ ಈ ಕೃತಿ ಉದಾಹರಿಸಿದೆ. ಸಂಗೀತದ ಪ್ರಕಾರಗಳಾದ ಖ್ಯಾಲ್, ಠುಮ್ರಿ, ಕವ್ವಾಲಿ, ಟಪ್ಪಾ, ದಾದ್ರ, ತರಾನ, ಚತುರಂಗದ ವಿವಿಧ ವಿಧಾನಗಳನ್ನ ಈ ಕೃತಿ ಕೂಲಂಕುಷವಾಗಿ ವಿವರಿಸುತ್ತದೆ.

ಸಾಹಿತ್ಯದಲ್ಲಿ ಅಮುಖ್ಯವಾದ ಗುರು ಶಿಷ್ಯ ಪರಂಪರೆಗಳು ಸಂಗೀತದಲ್ಲಿ ಹೇಗೆ ಅತಿ ಮುಖ್ಯವಾಗಿವೆ ಎಂದು ಗುರ್ತಿಸುತ್ತ ಒಂದೇ ಪರಂಪರೆಯಲ್ಲಿ ಸಂಗೀತದ ರಾಗ,ಲಯ,ಸ್ವರ ಚಮತ್ಕಾರಗಳನ್ನ ನಿರೂಪಣಾ ವೈಖರಿಗಳನ್ನೂ ಈ ಪುಸ್ತಕ ಬಿಡಿಸಿ ತೋರಿದೆ. ಈ ಎಲ್ಲಕ್ಕಿಂತಲೂ ಮಿಗಿಲಾಗಿ ಸಂಗೀತ ಲೋಕ ಇಂದಿಗೂ ಹೇಗೆ ತನ್ನ ಪರಿಧಿಯಲ್ಲಿ ಸೆಕ್ಯುಲರ್ ತನವನ್ನ ಗಟ್ಟಿಗೊಳಿಸುತ್ತಲೇ ಬಂದಿದೆ ಎಂಬ ಮಹತ್ವದ ಅಂಶದತ್ತ ಈ ಕೃತಿ ಬೆರಳು ಮಾಡುತ್ತದೆ.ಬೆರಗೂ ಮೂಡಿಸುತ್ತದೆ.

ಬರವಣಿಗೆ : ಶಿವಕುಮಾರ್ ಕಂಪ್ಲಿ