ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಮಾ.04;
ಮೊಹಮ್ಮದ್ ನಲಪಾಡ್ ನಿಂದ ಹಲ್ಲೆಗೊಳಗಾದ ವಿದ್ವತ್ ಲೋಕನಾಥ್ ಸಿಸಿಬಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದು, ಆ ದಿನದ ಕ್ರೌರ್ಯ ನೆನೆದರೆ ಇಂದಿಗೂ ಭಯವಾಗುತ್ತದೆ ಎಂದು ಹೇಳಿದ್ದಾರೆ.
ನಿನ್ನೆ ಸಂಜೆ ಮೊಹಮ್ಮದ್ ನಲಪಾಡ್ ಹಲ್ಲೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ತನಿಖಾಧಿಕಾರಿ ಅಶ್ವಥ್ ಗೌಡ ಅವರ ನೇತೃತ್ವದ ತಂಡ ಮಲ್ಯ ಆಸ್ಪತ್ರೆಗೆ ಭೇಟಿ ನೀಡಿ, ಸುಮಾರು 2 ಗಂಟೆಗಳ ಕಾಲ ವಿದ್ವತ್ ಹೇಳಿಕೆಯನ್ನು ತಂಡ ದಾಖಲು ಮಾಡಿಕೊಂಡಿತು. ಆ ಘಟನೆ ನಡೆದ 15 ದಿನಗಳ ಬಳಿಕ ವಿದ್ವತ್ ಚೇತರಿಸಿಕೊಂಡಿರುವ ಹಿನ್ನೆಲೆಯಲ್ಲಿ ಪೊಲೀಸರು ಹೇಳಿಕೆ ದಾಖಲು ಮಾಡಿಕೊಂಡರು.
ವಿದ್ವತ್ ಹೇಳಿಕೆ ವಿವರ :
ಫೆ.17ರ ರಾತ್ರಿ ಫರ್ಜಿ ಕೆಫೆಗೆ ಊಟಕ್ಕೆ ಹೋದಾಗ ನನ್ನ ಕಾಲು ನಲಪಾಡ್‌ನ ಸ್ನೇಹಿತನಿಗೆ ತಾಕಿತು. ಆ ಕೂಡಲೇ ನಾನು ಕ್ಷಮೆ ಕೋರಿದೆ. ಆಗ ಒಬ್ಬಾತ, ‘ಏನೋ ಅಣ್ಣನ ಎದುರೇ ಕಾಲು ಚಾಚಿಕೊಂಡು ಕುಳಿತಿದ್ದೀಯಾ’ ಎನ್ನುತ್ತಾ ಗಲಾಟೆ ಪ್ರಾರಂಭಿಸಿದ. ಕಾಲಿನ ಮೂಳೆ ಮುರಿದಿರುವುದಾಗಿ ನಾನು ಹೇಳಿದಾಗ, ‘ಅಣ್ಣನ ಮುಂದೆಯೇ ಎದುರು ಮಾತನಾಡುತ್ತೀಯಾ’ ಎಂದು ಕೆನ್ನೆಗೆ ಹೊಡೆದ. ನಂತರ ನನ್ನ ಸ್ನೇಹಿತರು ರಕ್ಷಣೆಗೆ ಮುಂದಾದಾಗ, ಆಗ ಎಲ್ಲರೂ ಸೇರಿ ಹಲ್ಲೆ ಮಾಡಿದರು.
ಬಾಟಲಿಯಿಂದ ಹೊಡೆಯುತ್ತಿದ್ದಂತೆಯೇ ಮೂಗಿನಿಂದ ರಕ್ತ ಸುರಿಯಲಾರಂಭಿಸಿತು. ಅಷ್ಟಕ್ಕೂ ಸುಮ್ಮನಾಗದೆ, ಬಟ್ಟೆ ಹರಿದು ಪುನಃ ಹೊಡೆದರು. ಅಸ್ವಸ್ಥನಾಗಿ ಬಿದ್ದ ನನ್ನನ್ನು ಸ್ನೇಹಿತರು ಆಸ್ಪತ್ರೆಗೆ ದಾಖಲಿಸಲು ಕಾರಿನ ಹತ್ತಿರ ಕರೆದುಕೊಂಡು ಹೋದರು. ಅಲ್ಲಿಗೂ ಹಿಂಬಾಲಿಸಿಕೊಂಡು ಬಂದ ಮೊಹಮ್ಮದ್ ನಲಪಾಡ್ ಮತ್ತು ಆತನ ಸ್ನೇಹಿತರು ನನ್ನ ಮೇಲೆ ಹಲ್ಲೆ ಮಾಡಿದರು. ಕೊನೆಗೆ, ಆಸ್ಪತ್ರೆಗೂ ನುಗ್ಗಿ ಬೆದರಿಕೆ ಹಾಕಿದರು. ರಾಜ್ ಕುಮಾರ್ ಅವರ ಮೊಮ್ಮಗ ಗುರು ಆಸ್ಪತ್ರೆಗೆ ಬಂದಿದ್ದರಿಂದ ಅವರನ್ನು ನೋಡಿ, ನಲಪಾಡ್ ಮತ್ತು ಆತನ ಸ್ನೇಹಿತರು ಅಲ್ಲಿಂದ ತೆರಳಿದರು.
‘ನಲಪಾಡ್‌ನನ್ನು ನಾನು ಹಿಂದೆ ಪಾರ್ಟಿಗಳಲ್ಲಿ ನೋಡುತ್ತಿದ್ದೆ. ಆದರೆ, ಒಮ್ಮೆಯೂ ಆತನೊಂದಿಗೆ ಮಾತನಾಡಿರಲಿಲ್ಲ. ಆ ದಿನದ ಕ್ರೌರ್ಯ ನೆನೆದರೆ ಈಗಲೂ ಭಯವಾಗುತ್ತದೆ’ ಎಂದು ವಿದ್ವತ್ ಹೇಳಿಕೆ ಕೊಟ್ಟಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಮೊಹಮ್ಮದ್ ನಲಪಾಡ್ ಜಾಮೀನು ಅರ್ಜಿ ವಜಾ :
ಫೆ.17ರಂದು ಬೆಂಗಳೂರಿನ ಯು.ಬಿ.ಸಿಟಿಯಲ್ಲಿನ ಫರ್ಜಿ ಕೆಫೆಯಲ್ಲಿ ವಿದ್ವತ್ ಮೇಲೆ ಮೊಹಮ್ಮದ್ ನಲಪಾಡ್ ಮತ್ತು ಆತನ ಸ್ನೇಹಿತರು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಲಪಾಡ್ ಮತ್ತು ಆತನ ಸಹಚರರನ್ನು ಬಂಧಿಸಲಾಗಿದ್ದು, ಸಧ್ಯ ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಮೊಹಮ್ಮದ್ ನಲಪಾಡ್ ಮತ್ತು ಉಳಿದ 6 ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು 63ನೇ ಸೆಷನ್ಸ್ ನ್ಯಾಯಾಲಯ ಶುಕ್ರವಾರ ವಜಾಗೊಳಿಸಿದೆ. ಎಲ್ಲಾ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿ ಮಾ.07ರಂದು ಅಂತ್ಯಗೊಳ್ಳಲಿದೆ.
ಸ್ನೇಹಿತರೇ, ಈ ಸುದ್ದಿಯನ್ನು ನಿಮ್ಮವರೊಂದಿಗೂ ಹಂಚಿಕೊಳ್ಳಿ…